ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯೂ ಇಲ್ಲಿ ಠೇವಣಿ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಐಟಿ– ಬಿಟಿ ಉದ್ಯಮಗಳು ಬೆಳೆವಣಿಗೆ ಕಂಡ ನಂತರ ಸುತ್ತಲಿನ ಭೂಮಿಯ ಬೆಲೆ ಗಗನಕ್ಕೆ ಏರುತ್ತಲೇ ಇದೆ. ರಿಯಲ್ ಎಸ್ಟೇಟ್ ಉದ್ಯಮದ ಏರಿಳಿತವೂ ಇದರೊಂದಿಗೆ ತಳುಕು ಹಾಕಿಕೊಂಡಿದೆ. ಐಷಾರಾಮಿ ಅಪಾರ್ಟ್‌ಮೆಂಟ್ ಸಮಚ್ಚಯಗಳು, ವಾಣಿಜ್ಯ ಕಟ್ಟಡಗಳು, ವಿಲ್ಲಾಗಳು, ಸಾಮಾನ್ಯ ನಿವೇಶನಗಳು, ಖಾಸ‌ಗಿ ಕಂಪನಿ, ಕಾರ್ಖಾನೆಗಳ ನಿರ್ಮಾಣ ಹೀಗೆ; ಪ್ರತಿಯೊಂದಕ್ಕೂ ಇಲ್ಲಿನ ಭೂಮಿಯೇ ಆಧಾರವಾಗಿದೆ.

ನಗರದ ಅಭಿವೃದ್ಧಿಗೆ ಪೂರಕವಾಗಿ ರಿಯಲ್ ಎಸ್ಟೇಟ್ ಉದ್ಯಮ ಜನರ ಅಗತ್ಯತೆ ಪೂರೈಸುತ್ತಿದೆ. ಆದರೆ, ವ್ಯವಹಾರ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ಇದೆ. ಜನರಿಗೆ ಅಮಿಷವೊಡ್ಡಿ ಭೂಕಬಳಿಕೆ ಮಾಡುವುದರಿಂದ ಉದ್ಯಮ ಬೆಳೆಯಲು ಸಾಧ್ಯವಿಲ್ಲ. ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮ ಇಂತಹ ಕಳಂಕ ಹೊತ್ತು ಜನರ ವಿಶ್ವಾಸ ಕಳೆದುಕೊಂಡಿದೆ ಎನ್ನುತ್ತಾರೆ ಉದ್ಯಮದ ಕೆಲ ಪರಿಣಿತರು.‌

‘ನಗರದ ಶರವೇಗದ ಬೆಳವಣಿಗೆಗೆ ಸ್ಪಂದಿಸುವ ಕಾನೂನುಬದ್ಧ ಭೂ ಬ್ಯಾಂಕ್‌ಗಳ ಅವಶ್ಯವಿದ್ದು, ಬಿಡಿಎ ರೂಪಿಸಿರುವ ನಿಯಾಮವಳಿ ಪ್ರಕಾರ ಕಾರ್ಯ ನಿರ್ವಹಿಸುವ ಕಾನೂನು ಚೌಕಟ್ಟಿನ ವಿಶ್ವಾಸಾರ್ಹ ಸಂಸ್ಥೆಗಳ ಅಗತ್ಯವಿದೆ’ ಎನ್ನುತ್ತಾರೆ ಇಂದಿರಾನಗರದ ‘ಕಾರ್ನರ್ ಸ್ಟೋನ್’ ರಿಯಲ್ ಎಸ್ಟೇಟ್ ಉದ್ಯಮ ಕಂಪನಿ ಅಧ್ಯಕ್ಷ ಬಿ.ಪಿ.ಕುಮಾರ್ ಬಾಬು.

ರಿಯಲ್ ಎಸ್ಟೇಟ್ ಉದ್ಯಮ ದೊಡ್ಡಮಟ್ಟದಲ್ಲಿ ಬೆಳೆಯಬೇಕಾದರೆ ಭೂಮಿ ಬಹಳ ಅವಶ್ಯವಿದೆ. ಈ ನಿಟ್ಟಿನಲ್ಲಿ ‘ಕಾರ್ನರ್ ಸ್ಟೋನ್’ ಕಂಪನಿ ನಗರದ ಸುತ್ತಮುತ್ತಲಿನಲ್ಲಿ 2 ಸಾವಿರಕ್ಕೂ ಅಧಿಕ ಎಕರೆ ಭೂಮಿ ಖರೀದಿಸಿ ‘ಭೂ ಬ್ಯಾಂಕ್’ ನಿರ್ಮಾಣ ಮಾಡಿದೆ. ಶೋಭಾ, ಸಲಾಪುರಿಯಾ, ಮಂತ್ರಿ ಡೆವಲಪರ್ಸ್, ಎಂಬೆಸ್ಸಿ ಗ್ರೂಪ್, ಪುರವಂಕರ, ಬ್ರಿಗೇಡ್‌ನಂತಹ ದೊಡ್ಡ ಪ್ರಮಾಣದ ನಿರ್ಮಾಣ ಕಂಪೆನಿಗಳೊಂದಿಗೆ ಭೂಮಿ ಒಪ್ಪಂದದ ಕರಾರು ಇಲ್ಲವೇ ಮಾರಾಟ ಮೂಲಕ ನಗರದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ಹಂಚಿಕೊಂಡರು.

50 ವರ್ಷಗಳ ಹಿಂದಿನ ಭೂವಾಜ್ಯಗಳು ಇಂದಿಗೂ ಇತ್ಯರ್ಥಗೊಳ್ಳದೆ ಉಳಿದಿವೆ. ಇಂತಹ ಪ್ರರಣಗಳನ್ನು ಕಾನೂನಾತ್ಮಕವಾಗಿ ಇತ್ಯರ್ಥಗೊಳಿಸುವುದು ಸುಲಭದ ಮಾತಲ್ಲ. ಎರಡನೇ ಪತ್ನಿ ಮಕ್ಕಳು, ದಾಯಾದಿಗಳು, ರಕ್ತ ಸಂಬಂಧಿಗಳ ನಡುವೆ ಹಂಚಿ ಹೋಗಿರುವ ಭೂಮಿ ಖರೀದಿ ವಿಷಯ ಸೂಕ್ಷ್ಮವಾಗಿರುತ್ತದೆ. ಇಂತಹ ಬಿಕ್ಕಟ್ಟುಗಳನ್ನು ಪರಿಹರಿಸುವುದು ಬಾಯಿ ಮಾತಿನಷ್ಟು ಸುಲಭ ಅಲ್ಲ ಎಂದು ಉದ್ಯಮದ ಒಳಸುಳಿಗಳ ಬಗ್ಗೆ ವಿವರಿಸಿದರು.

ಮಾರುಕಟ್ಟೆ ಬೆಲೆಯಲ್ಲೇ ಭೂಮಿ ಖರೀದಿ ನಡೆಯುತ್ತದೆ. ಮಾರಾಟಗಾರರಿಗೆ ಮೋಸವಾಗದಂತೆ ವ್ಯವಹಾರ ನಡೆಸಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಭೂ ಖರೀದಿ ನಡೆದಾಗ ಆ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ, ಕೆರೆ ಸಂರಕ್ಷಣೆ, ಶಾಲೆ ಅಭಿವೃದ್ಧಿ, ದೇವಸ್ಥಾನ ನಿರ್ಮಾಣ, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ವರ್ತೂರು, ವೈಟ್‌ಪೀಲ್ಡ್‌ ಸುತ್ತಮುತ್ತಲ ಪ್ರದೇಶದಲ್ಲಿ ಇಂತಹ ಸಾಮಾಜಿಕ ಹೊಣೆಗಾರಿಕೆಯನ್ನು ಕಾರ್ನರ್‌ ಸ್ಟೋನ್ ಕಂಪನಿ ಹೊತ್ತು ನಿಭಾಯಿಸಿದೆ ಎನ್ನುತ್ತಾರೆ ಕಂಪನಿಯ ನಿರ್ದೇಶಕ ಕಿರಣ್ ಪೂಣಚ್ಚ.

ಚರಿತ್ರೆಯಲ್ಲಿ ಹೆಣ್ಣು, ಮಣ್ಣು, ಹೊನ್ನಿಗಾಗಿ ಹೋರಾಟ ನಡೆದರೆ, ಬೆಂಗಳೂರಿನಲ್ಲಿ ಭೂಮಿಗಾಗಿ ಎಷ್ಟೋ ಕೊಲೆಗಳು ನಡೆದಿವೆ. ಭೂಮಿ ಹಂಚಿಕೆ ವಿಷಯವಾಗಿ ಕುಟುಂಬ ಕಲಹಗಳು ನ್ಯಾಯಾಲಯದ ಮೆಟ್ಟಿಲೇರಿರುವ ಸಾವಿರಾರು ಪ್ರಕರಣಗಳಿವೆ. ವ್ಯವಹಾರದ ಆಚೆಗೂ ಜನರೊಂದಿಗೆ ಸ್ನೇಹ ಸಂಬಂಧ ಹೊಂದಿದರೆ ಮಾತ್ರ ನಂಬಿಕೆ, ವಿಶ್ವಾಸ ಗಳಿಸಲು ಸಾಧ್ಯ ಎನ್ನುತ್ತಾರೆ ಅವರು.

ನಿವೃತ್ತ ತಹಶೀಲ್ದಾರರು, ಭೂಮಾಪಕರು, ಕಂದಾಯ ಇಲಾಖೆ ಸಿಬ್ಬಂದಿಯನ್ನು ನೇಮಿಸಿಕೊಂಡು, ಪರಿಣಿತ ಕಾನೂನು ತಜ್ಞರ ತಂಡದೊಂದಿಗೆ ಕೆಲಸ ಮಾಡಿದಾಗ ವ್ಯವಹಾರ ಸುಗಮವಾಗುತ್ತದೆ. ರಿಯಲ್ ಎಸ್ಟೇಟ್ ಉದ್ಯಮ ಈ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ ಎನ್ನುವ ವಿಶ್ಲೇಷಣೆ ಅವರದ್ದು.

ನಗರದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸುವ ಉದ್ದೇಶದಿಂದ ಭೂ ಬ್ಯಾಂಕ್‌ ಸ್ಥಾಪಿಸುವ ಪ್ರಸ್ತಾವ ‘ಪರಿಷ್ಕೃತ ನಗರ ಮಹಾಯೋಜನೆ 2031’ರ ಕರಡಿನಲ್ಲಿದೆ. ಖಾಸಗಿಯವರು ನಿರ್ಮಿಸುವ ಬಡಾವಣೆಗಳಲ್ಲೂ ಶೇ 2.5 ಜಾಗವನ್ನು ಈ ಸಲುವಾಗಿ ಬಿಟ್ಟು ಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ.

2016ರ ಕರ್ನಾಟಕ ಕೈಗೆಟಕುವ ದರದ ವಸತಿ ನೀತಿಯಲ್ಲಿರುವ ಅಂಶಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಮಹಾಯೋಜನೆಯ ಕರಡಿನಲ್ಲೂ ಅಳವಡಿಸಿಕೊಳ್ಳಲಾಗಿದೆ. ಈ ನೀತಿಯನ್ವಯ ಖಾಸಗಿ ವಸತಿ ಯೋಜನೆಗಳಲ್ಲಿ ಒಟ್ಟು ವಸತಿ ಘಟಕಗಳಲ್ಲಿ ಶೇ15ರಷ್ಟನ್ನು ಅಥವಾ ಒಟ್ಟು ನಿರ್ಮಾಣ ಪ್ರದೇಶದಲ್ಲಿ ಶೇ5ರಷ್ಟನ್ನು ಬಡವರ ವಸತಿಗೆ ಮೀಸಲಿಡಬೇಕಾಗುತ್ತದೆ. ಬಿಲ್ಡರ್‌ಗಳು ಬಡವರಿಗೆ ವಸತಿ ನಿರ್ಮಿಸಿಕೊಡಲು ಬಯಸದಿದ್ದರೆ, ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣಕ್ಕೆ ಬಳಸುವ ಒಟ್ಟು ಜಾಗದಲ್ಲಿ ಶೇ5ರಷ್ಟು ಜಾಗವನ್ನು ಪ್ರಾಧಿಕಾರಕ್ಕೆ ಈ ಉದ್ದೇಶಕ್ಕಾಗಿ ಬಿಟ್ಟುಕೊಡ ಬೇಕಾಗುತ್ತದೆ. ಟೌನ್‌ಷಿಪ್‌ಗಳಲ್ಲೂ ಬಡವರಿಗೆ ವಸತಿ ಕಲ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎನ್ನುತ್ತಾರೆ ಈ ವಲಯದ ವಿಶ್ಲೇಷಕರು.

ಭೂ ಬ್ಯಾಂಕ್ ಪರಿಕಲ್ಪನೆಗೆ ನಗರದ ಕೆಲ ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಭೂ ಬ್ಯಾಂಕ್ ಎನ್ನುವುದು ಭೂ ಮಾಫಿಯಾ ದಂಧೆ. ರೈತರು ಮತ್ತು ಸರ್ಕಾರದ ಕಣ್ಣಿಗೆ ಮಣ್ಣು ಎರಚುವ ವ್ಯವಸ್ಥಿತ ಜಾಲ. ಕೆಲ ಕಂಪೆನಿಗಳು ವ್ಯವಸ್ಥಿತವಾಗಿ ವದಂತಿ ಹರಡುವ ಮೂಲಕ ಜಮೀನು ಮಾರಾಟ ಮಾಡುವಂತೆ ರೈತರ ಮೇಲೆ ಒತ್ತಡ ಸೃಷ್ಟಿಸುತ್ತವೆ.  ಸ್ಥಳೀಯ ಭೂಮಾಫಿಯ ಪಡೆ ಹಾಗೂ ದಲ್ಲಾಳಿಗಳು ಈ ಅವಕಾಶದ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ’ ಎನ್ನುತ್ತಾರೆ ಆನೇಕಲ್‌ನ ಹೋರಾಟಗಾರರಾದ ಪುರುಷೋತ್ತಮ ಚಿಕ್ಕಹಾಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT