ಎಲ್‌ಇಡಿ ದೀಪ ಅಳವಡಿಕೆ: ಟೆಂಡರ್‌ ರದ್ದತಿಗೆ ಒತ್ತಾಯ

ಭಾನುವಾರ, ಮಾರ್ಚ್ 24, 2019
31 °C

ಎಲ್‌ಇಡಿ ದೀಪ ಅಳವಡಿಕೆ: ಟೆಂಡರ್‌ ರದ್ದತಿಗೆ ಒತ್ತಾಯ

Published:
Updated:
ಎಲ್‌ಇಡಿ ದೀಪ ಅಳವಡಿಕೆ: ಟೆಂಡರ್‌ ರದ್ದತಿಗೆ ಒತ್ತಾಯ

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿದೀಪ ಅಳವಡಿಕೆಗೆ ಕರೆದಿರುವ ಜಾಗತಿಕ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಗುರುವಾರ ಕೌನ್ಸಿಲ್‌ ಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ‘ಯಾವುದೇ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 25ರಷ್ಟು ಮೀಸಲಾತಿ ನೀಡಬೇಕು. ಆದರೆ, ಎಲ್‌ಇಡಿ ದೀಪ ಅಳವಡಿಕೆ ಗುತ್ತಿಗೆ ಪಡೆಯುವ ಸಂಸ್ಥೆಯು ವಾರ್ಷಿಕ ₹150 ಕೋಟಿ ವಹಿವಾಟು ನಡೆಸಿರಬೇಕು ಎಂಬ ಷರತ್ತನ್ನು ಟೆಂಡರ್‌ನಲ್ಲಿ ವಿಧಿಸಲಾಗಿದೆ’ ಎಂದರು.

‘ಇದರಿಂದ ಪರಿಶಿಷ್ಟ ಜಾತಿ, ಪಂಗಡದವರು ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದರು.

ಇದಕ್ಕೆ ಉತ್ತರಿಸಿದ ಬೆಂಗಳೂರು ಮಹಾನಗರಸಭೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ನಗರದಲ್ಲಿ 4.78 ಲಕ್ಷ ಬೀದಿದೀಪಗಳಿವೆ. ಇವುಗಳಿಗಾಗಿ ಪ್ರತಿ ವರ್ಷ ₹144 ಕೋಟಿ ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ. ಎಲ್‌ಇಡಿ ದೀಪಗಳನ್ನು ಅಳವಡಿಸುವುದರಿಂದ ಈಗಿನ ವಿದ್ಯುತ್‌ ಬಿಲ್‌ನಲ್ಲಿ ಶೇ 50ರಷ್ಟು ಉಳಿತಾಯವಾಗಲಿದೆ. ಇದಕ್ಕಾಗಿ ₹500 ಕೋಟಿ ವೆಚ್ಚದ ಜಾಗತಿಕ ಟೆಂಡರ್‌ ಕರೆಯಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಯೇ ಈ ದೀಪಗಳ ನಿರ್ವಹಣೆಯನ್ನು ಮಾಡಲಿದೆ. ಇವುಗಳ ಮೇಲೆ ನಿಗಾ ವಹಿಸಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗುತ್ತದೆ. ಈ ಯೋಜನೆಗೆ ಒಟ್ಟಾರೆ ₹800 ಕೋಟಿ ವೆಚ್ಚವಾಗಲಿದೆ’ ಎಂದು ವಿವರಿಸಿದರು.

ಸರ್ಕಾರದ ಆದೇಶದ ಪ್ರಕಾರ, ₹50 ಲಕ್ಷ ವೆಚ್ಚದ ಕಾಮಗಾರಿಗಳಲ್ಲಿ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 25ರಷ್ಟು ಮೀಸಲಾತಿ ನೀಡಬೇಕು. ಈಗ ಕರೆದಿರುವ ಟೆಂಡರ್‌ ಕಾನೂನುಬದ್ಧವಾಗಿದ್ದು, ರದ್ದುಪಡಿಸಲು ಸಾಧ್ಯವಿಲ್ಲ ಎಂದು

ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ‘ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರ ಕೊಲೆಗೆ ಯತ್ನ ನಡೆದಿದೆ. ಲೋಕಾಯುಕ್ತರಿಗೇ ರಕ್ಷಣೆ ಇಲ್ಲ, ಸಾಮಾನ್ಯರಿಗೆ ಹೇಗೆ ರಕ್ಷಣೆ ಸಿಗುತ್ತದೆ? ನಗರದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ಬೆಂಗಳೂರು ಎಂಬುದು ಈಗ ಗೂಂಡಾ ನಗರವಾಗಿದೆ’ ಎಂದು ಕಿಡಿಕಾರಿದರು.

ಇದರಿಂದ ಕೆರಳಿದ ಕಾಂಗ್ರೆಸ್‌ ಸದಸ್ಯರು, ‘ನೀವು ಬಜೆಟ್‌ನಲ್ಲಿರುವ ವಿಷಯದ ಬಗ್ಗೆ ಮಾತನಾಡಿ’ ಎಂದು ತಾಕೀತು ಮಾಡಿದರು.

ಈ ವೇಳೆ ಶಾಸಕ ಕೆ.ಗೋಪಾಲಯ್ಯ ಮಾತನಾಡಲು ಎದ್ದು ನಿಂತರು. ಇದಕ್ಕೆ ಮೇಯರ್‌ ಆರ್‌.ಸಂಪತ್‌ ರಾಜ್‌ ಅವಕಾಶ ನೀಡಲಿಲ್ಲ.

ಆಗ ಮಾತು ಬೆಳೆದು ‘ಮಾತನಾಡಲು ಅವಕಾಶ ನೀಡದಿದ್ದರೆ ಸಭಾತ್ಯಾಗ ಮಾಡುತ್ತೇನೆ’ ಎಂದು ಗೋಪಾಲಯ್ಯ ಎಚ್ಚರಿಸಿದರು.

ಮೇಯರ್‌, ‘ನೀವು ಹೀಗೆಲ್ಲಾ ಮಾತನಾಡಬಾರದು. ಈಗ ವಿಧಾನ ಪರಿಷತ್‌ ಸದಸ್ಯರು ಮಾತನಾಡಿದ್ದಾರೆ. ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ಕಲ್ಪಿಸಬೇಕಿದೆ’ ಎಂದರು.

ಗೋಪಾಲಯ್ಯ, ‘ನಮ್ಮಿಂದ ನೀವು ಅಧಿಕಾರದಲ್ಲಿದ್ದೀರಿ’ ಎಂದು ಹೇಳಿದರು.

ಇದರಿಂದ ಕೆರಳಿದ ಮೇಯರ್‌ ಆರ್‌. ಸಂಪತ್ ರಾಜ್‌, ‘ನಮ್ಮನ್ನೇ ಹೆದರಿಸುತ್ತೀರಾ’ ಎಂದು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್‌–ಜೆಡಿಎಸ್‌ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry