ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲ್ಯಾಮರ್‌ ಚೆಲುವೆ ‘ಇತಿ’ ನುಡಿ!

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಧ್ವನಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡ ನಟಿ ಇತಿ ಆಚಾರ್ಯ ಅದಕ್ಕೂ ಮುನ್ನ ಗ್ಲಾಮರಸ್‌ ಪಾತ್ರಗಳಿಂದಲೇ ಸಿನಿಪ್ರಿಯರ ಮನಗೆದ್ದವರು. ಕಮರ್ಷಿಯಲ್‌ ಚಿತ್ರಗಳಿಂತ ಭಿನ್ನವಾಗಿದ್ದ ‘ಧ್ವನಿ’ ಸಿನಿಮಾ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿ ಇತಿ ಅವರ ನಟನೆಗೆ ಮೆಚ್ಚುಗೆಯ ಮಾತುಗಳೂ ಕೇಳಿಬಂದಿದ್ದವು. ಇಂತಿಪ್ಪ ಇತಿ ಈಗ ‘ಕವಚ’ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೊ ಶಿವಣ್ಣ ಅವರೊಂದಿಗೆ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರುತ್ತಿದ್ದಾರೆ.

ಇತಿ ಆಚಾರ್ಯ ಮಾರ್ವಡಿ ಬ್ರಾಹ್ಮಿಣ್‌ ಹುಡುಗಿ. ಅಪ್ಪ ಬ್ಯಾಂಕ್‌ ಉದ್ಯೋಗಿ. ಅವರಿಗೆ ಮೂರು ವರ್ಷಕ್ಕೊಮ್ಮೆ ವರ್ಗ ಆಗುತ್ತಿದ್ದರಿಂದ ಇತಿಗೆ ದೇಶದ ಎಲ್ಲ ಭಾಗಗಳಲ್ಲೂ ಓಡಾಡುವ, ಅಲ್ಲಿನ ಭಾಷೆ ಕಲಿಯುವ; ಸಂಸ್ಕೃತಿ ಅರಿಯುವ ಅವಕಾಶ ಸಿಗುತ್ತಿತ್ತು. ಇತಿ ಆಚಾರ್ಯ ಕೆಲವು ವರ್ಷ ಪಂಜಾಬ್‌ನಲ್ಲಿ ಇದ್ದಿದ್ದರಿಂದ ‘ಕವಚ’ ಸಿನಿಮಾದಲ್ಲಿನ ತಮ್ಮ ಪಾತ್ರ ನಿರ್ವಹಣೆಗೆ ಅನುಕೂಲ ಆಯಿತಂತೆ.

‘‘ಕವಚ’ ಸಿನಿಮಾದಲ್ಲಿ ನಾನು ಪಂಜಾಬಿ ಹುಡುಗಿ ಪಾತ್ರ ನಿರ್ವಹಿಸಿದ್ದೇನೆ. 19 ವರ್ಷ ವಯಸ್ಸಿನ ಬಬ್ಲಿ ಹುಡುಗಿ ಪಾತ್ರ ಅದು. ನಾನು ಚಿಕ್ಕವಳಿದ್ದಾಗ ಕೆಲವು ವರ್ಷ ಪಂಜಾಬ್‌ನಲ್ಲಿ ಇದ್ದೆ. ಹಾಗಾಗಿ, ಪಂಜಾಬಿ ಹುಡುಗಿಯರ ಆಟ್ಯಿಟ್ಯೂಡ್‌, ಬಾಡಿ ಲಾಂಗ್ವೆಜ್‌ ಬಗ್ಗೆ ಚೆನ್ನಾಗಿ ಅರಿವಿತ್ತು. ಹಾಗಾಗಿ ‘ಕವಚ’ ಸಿನಿಮಾದಲ್ಲಿ ಆ ಪಾತ್ರವನ್ನು ತುಂಬಾ ಲೀಲಾಜಾಲವಾಗಿ ಅಭಿನಯಿಸಿದೆ. ಶಿವಣ್ಣ ಅವರ ಜತೆ ನಟಿಸುವ ಅವಕಾಶ ಸಿಕ್ಕಿದ್ದು ಜೀವಮಾನದಲ್ಲಿ ಒಮ್ಮೆ ಸಿಗುವ ಅವಕಾಶ ಅಂತಲೇ ಹೇಳಬಹುದು. ಸೆಟ್‌ನಲ್ಲಿದ್ದಾಗ ಅವರು ನನಗೆ ತುಂಬ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು. ಶಿವಣ್ಣ ಅವರ ಎನರ್ಜಿ ಸೂಪರ್‌’’ ಎನ್ನುವ ಇತಿ ಅವರಿಗೆ ನಟ ಶಿವರಾಜ್‌ ಕುಮಾರ್‌ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಅತ್ಯಂತ ಸಂತಸದ ಕ್ಷಣವಂತೆ.

‘ಪಂಗನಾಮ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಇತಿ ಆಚಾರ್ಯ, ಆನಂತರ ಕೋಮಲ್‌ ಅಭಿನಯದ ‘ಡೀಲ್‌ ರಾಜ’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದರು. ತದನಂತರ ‘ಧ್ವನಿ’ ಮತ್ತು ‘ಕಾಂಟ್ರ್ಯಾಕ್ಟ್‌’ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆರಂಭದಲ್ಲಿ ಸಿಕ್ಕ ಸಿನಿಮಾಗಳೆಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದ ಇತಿ ಆಚಾರ್ಯ ಈಗ ಬದಲಾಗಿದ್ದಾರೆ. ಅದಕ್ಕೆ ಕಾರಣ ‘ಧ್ವನಿ’ ಸಿನಿಮಾ. ಈ ಚಿತ್ರ ಅವರಿಗೆ ಚಿತ್ರೋದ್ಯಮದ ಗ್ರಾಮರ್‌ ಅನ್ನು ಸ್ವಲ್ಪ ಮಟ್ಟಿಗೆ ತಿಳಿಸಿಕೊಟ್ಟಿದೆಯಂತೆ.

‘‘ಫ್ಯಾಷನ್‌ ಡಿಸೈನಿಂಗ್‌ ಪದವೀಧರೆ ನಾನು. ಹಾಗಾಗಿ, ಫ್ಯಾಷನ್‌ ಇಂಡಸ್ಟ್ರಿಯ ಒಡನಾಟಕ್ಕೆ ತೆರೆದುಕೊಂಡಿದ್ದೆ. ಮಾಡೆಲಿಂಗ್‌ ಕೂಡ ಮಾಡುತ್ತಿದ್ದೆ. ಮಾಡೆಲಿಂಗ್‌ನಿಂದ ಸಿನಿಮಾ ಅವಕಾಶಗಳೂ ಸಿಕ್ಕವು. ಆರಂಭದಲ್ಲಿ ಬರೀ ಗ್ಲಾಮರಸ್‌ ಪಾತ್ರಗಳೇ ಸಿಗುತ್ತಿದ್ದವು. ಆ ಚಿತ್ರಗಳಲ್ಲಿ ನನ್ನ ಅಭಿನಯಕ್ಕೆ ಪ್ರಾಮುಖ್ಯತೆ ಇರಲಿಲ್ಲ. ಚಿತ್ರರಂಗಕ್ಕೆ ನಾನು ಹೊಸಬಳು. ಚಿತ್ರೋದ್ಯಮದ ಬಗ್ಗೆ ಏನೇನೂ ತಿಳಿದಿರಲಿಲ್ಲ. ಈ ಕಾರಣದಿಂದಾಗಿ ಬಂದ ಆಫರ್‌ಗಳನ್ನೂ ಒಪ್ಪಿಕೊಂಡು ನಟಿಸುತ್ತಿದ್ದೆ. ಆದರೆ, ‘ಧ್ವನಿ’ ಸಿನಿಮಾ ನನ್ನ ಯೋಚನಾ ಲಹರಿಯನ್ನು ಬದಲಿಸಿತು. ಅಭಿನಯ ಸಾಮರ್ಥ್ಯವನ್ನು ಓರೆಗೆ ಹಚ್ಚುವಂತಹ ಪಾತ್ರಗಳಲ್ಲೇ ನಟಿಸಬೇಕು ಎಂಬ ಸಂಕಲ್ಪ ಮೂಡಿಸಿತು. ‘ಧ್ವನಿ’ ಕಮರ್ಷಿಯಲ್‌ ಸಿನಿಮಾ ಅಲ್ಲ. ಈ ಚಿತ್ರದಲ್ಲಿ ಗ್ಲ್ಯಾಮರ್‌ ಇಲ್ಲ; ರೊಮ್ಯಾನ್ಸ್‌ ಇಲ್ಲ. ಆದರೆ, ಕಲಾವಿದರ ಅಭಿನಯ ತಾಕತ್ತನ್ನು ಓರೆಗೆ ಹಚ್ಚುವ ಗಟ್ಟಿತನ ಚಿತ್ರಕತೆಗೆ ಇತ್ತು. ಈಗ ಚಿತ್ರಗಳ ಆಯ್ಕೆಯಲ್ಲಿ ಪಳಗಿದ್ದೇನೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರಷ್ಟೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ’ ಎನ್ನುವ ಇತಿ ‘ಧ್ವನಿ’ ಚಿತ್ರದಲ್ಲಿ ನಟಿಸಿದ ನಂತರ ಅರಸಿ ಬಂದ ಅನೇಕ ಗ್ಲಾಮರಸ್‌ ಪಾತ್ರಗಳನ್ನು ನಿರಾಕರಿಸಿದ್ದರಂತೆ.

ರೂಪದರ್ಶಿಯಾಗಿದ್ದ ಕಾರಣ ದೇಹ ಸೌಂದರ್ಯವನ್ನು ಚೆನ್ನಾಗಿ ಕಾಪಿಟ್ಟುಕೊಂಡಿರುವ ಇತಿ ಆಚಾರ್ಯ ಅವರ ಫಿಟ್‌ನೆಸ್‌ ಗುಟ್ಟು ಡಾನ್ಸ್‌. ಪ್ರತಿದಿನವೂ ಹೊಸತೇನಾದರೂ ಕಲಿಯಬೇಕು ಎಂಬುದೇ ಇವರ ಈಗಿನ ಮಂತ್ರ.

‘ನೃತ್ಯವೇ ನನ್ನ ದೇಹವನ್ನು ಫಿಟ್‌ ಆಗಿ ಇರಿಸಿದೆ. ಈಗ ಕಂಟೆಂಪರರಿ ಡಾನ್ಸ್‌ ಕಲಿಯುತ್ತಿದ್ದೇನೆ. ಈ ನೃತ್ಯ ಪ್ರಕಾರವನ್ನು ಕಲಿಯುವುದಕ್ಕೆ ತುಂಬ ಸ್ಟ್ರೆಂಥ್‌ ಬೇಕು. ಸಿಕ್ಕಾಪಟ್ಟೆ ಎನರ್ಜಿ ಇರಬೇಕು. ಲೋವರ್‌ ಬಾಡಿಗೆ ನೆರವಾಗುವ ಬೆಲ್ಲಿ ಡಾನ್ಸ್‌ ಕೂಡ ಕಲಿತಿದ್ದೇನೆ. ಚಿತ್ರೋದ್ಯಮದಲ್ಲಿ ಈಗ ತುಂಬ ಸ್ಪರ್ಧೆ ಇದೆ. ಪ್ರತಿನಿತ್ಯವೂ ಹೊಸಬರು ಬರುತ್ತಿರುತ್ತಾರೆ. ಅವರೊಂದಿಗೆ ನಾವು ಸ್ಪರ್ಧಿಸಬೇಕೆಂದರೆ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಬೇಕು. ಅದಕ್ಕಾಗಿ ನಾನು ಈಜು, ಕಿಕ್‌ ಬಾಕ್ಸಿಂಗ್‌ ಮೊದಲಾದ ಕಲೆಗಳನ್ನು ಇಷ್ಟಪಟ್ಟು ಕಲಿಯುತ್ತಿದ್ದೇನೆ. ಚಿತ್ರೋದ್ಯಮದಲ್ಲಿ ಪ್ರತಿಭೆ ಇದ್ದರಷ್ಟೇ ಅವಕಾಶಗಳು ಸಿಗುತ್ತವೆ. ಇನ್ನು ಡಯೆಟ್‌ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಮಾರ್ವಡಿ ಬ್ರಾಹ್ಮಿಣ್‌ ಹುಡುಗಿ. ಪಕ್ಕಾ ಸಸ್ಯಾಹಾರಿ. ಆದರೆ, ತಿಂಡಿಪೋತಿ. ಹಾಗಂತ, ತುಂಬ ತಿನ್ನುವುದಿಲ್ಲ. ಐಸ್‌ಕ್ರೀಂ, ಚಾಕಲೇಟ್‌ ಅಂದರೆ ತುಂಬ ಇಷ್ಟ. ಅನ್ನ, ಕೂಲ್‌ಡ್ರಿಂಕ್ಸ್‌, ಸಕ್ಕರೆಯನ್ನು ನನ್ನ ಮೆನುವಿನಿಂದ ಹೊರಗಿಟ್ಟಿದ್ದೇನೆ. ಮನೆ ಊಟವೇ ನನಗೆ ಇಷ್ಟ’ ಎನ್ನುವ ಈ ಬೆಡಗಿಗೆ ಸೌತ್‌ ಇಂಡಿಯನ್‌ ಮೀಲ್‌ ಅಂದರೆ ಪಂಚಪ್ರಾಣವಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT