ಕರಾವಳಿ ಶೈಲಿಯ ‘ಮೀನ್‌ದ ವನಸ್‌’

7

ಕರಾವಳಿ ಶೈಲಿಯ ‘ಮೀನ್‌ದ ವನಸ್‌’

Published:
Updated:
ಕರಾವಳಿ ಶೈಲಿಯ ‘ಮೀನ್‌ದ ವನಸ್‌’

ಹೋಟೆಲ್ ಒಳಾಂಗಣ ಪ್ರವೇಶಿಸುತ್ತಿದ್ದಂತೆ, ಗೋಡೆಯಲ್ಲಿನ ಭೂತ ಕೋಲ, ಯಕ್ಷಗಾನದ ಮುಖವರ್ಣಿಕೆಗಳು ಕರಾವಳಿಯ ಕಲೆಯ ಶ್ರೀಮಂತಿಕೆಯನ್ನು ಪರಿಚಯಿಸಿದರೆ, ಕೊಬ್ಬರಿ ಎಣ್ಣೆಯ ಒಗ್ಗರಣೆಯ ಘಮಲು ಅಲ್ಲಿನ ಊಟದ ವೈವಿಧ್ಯವನ್ನು ನೆನಪಿಸುತ್ತದೆ.

ವಿಶಾಲವಲ್ಲದಿದ್ದರೂ ಸ್ವಚ್ಛವಾಗಿರುವ ಒಳಾಂಗಣದ ನಡುವೆ ಗೋಡೆಯ ಮೇಲಿನ ಮೆನು ಲಿಸ್ಟ್‌ ಆಕರ್ಷಿಸುತ್ತದೆ. ಇದು ಗಾಯತ್ರಿ ನಗರದ ‘ಸಿ’ಬ್ಲಾಕ್‌ನಲ್ಲಿರುವ ಹರಿಶ್ಚಂದ್ರ ಘಾಟ್‌ನ ಎದುರಿನ ‘ಮೀನ್‌ದ ವನಸ್‌’ ಹೋಟೆಲ್‌ನ ಒಳಾಂಗಣ ಚಿತ್ರಣ.

ಕರಾವಳಿ ಹಾಗೂ ಸೀಫುಡ್‌ ಪ್ರಿಯರ ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯಗಳ ಪಟ್ಟಿ ಇಲ್ಲಿದೆ. ನಾವು ಆರ್ಡರ್ ಮಾಡುವ ಮುನ್ನವೇ ತುಪ್ಪದ ಘಮದ ಗೋಡಂಬಿ ಹಾಗೂ ಕ್ಯಾಪ್ಸಿಕಂನಿಂದ ಅಲಂಕೃತಗೊಂಡ ಸೀಗಡಿಯ ಖಾದ್ಯವನ್ನು ತಂದಿಟ್ಟು ಇದು ‘ಸೀಗಡಿ ಘೀ ರೋಸ್ಟ್‌’, ನಮ್ಮ ಹೋಟೆಲ್‌ನ ವಿಶೇಷ ಖಾದ್ಯ ಎಂದು ಬಾಣಸಿಗ ವರ್ಣಿಸುತ್ತಿದ್ದಂತೆ ಬಾಯಲ್ಲಿ ನೀರೂರಿತ್ತು. ಬ್ಯಾಡಗಿ ಮೆಣಸಿನ ಕೆಂಪಾದ ರಂಗಿನೊಂದಿಗೆ ತುಪ್ಪದಲ್ಲಿ ತೇಲುತ್ತಿದ್ದ ಇದನ್ನು ಹೆಚ್ಚು ಹೊತ್ತು ಕಾಯಲಾಗದೆ ಪೇಪರ್‌ನಷ್ಟೇ ತೆಳುವಾಗಿದ್ದ ನೀರುದೋಸೆಯೊಂದಿಗೆ ಬಾಯಿಗಿಟ್ಟರೆ, ವಿಶೇಷ ಸ್ವಾದವೊಂದು ಪರಿಚಯವಾಗಿತ್ತು. ಮೃದುವಾದ ಸೀಗಡಿಯೊಂದಿಗೆ ತುಪ್ಪದಲ್ಲಿ ಹುರಿದ ಗೋಡಂಬಿ, ಕ್ಯಾಪ್ಸಿಕಂಗಳನ್ನು ಮೆಲ್ಲುತ್ತಿದ್ದರೆ ನಾಲಿಗೆಗೆ ವಿಶೇಷ ರುಚಿಯೊಂದರ ಅನುಭವ.

ನೋಡಿದರೆ ಗೋಬಿ ಮಂಚೂರಿಯಂತೆಯೇ ಕಾಣುವ ಬೊಂಡಾಸ್‌ ಸುಕ್ಕ, ಉಪ್ಪು, ಖಾರ, ಹುಳಿಗಳ ಹದಮಿಳಿತದಂತಿತ್ತು. ಖಾರಕ್ಕೆ ಗುಂಟೂರು ಮೆಣಸು ಹಾಗೂ ಬಣ್ಣಕ್ಕೆಂದೇ ಸೇರಿಸಿದ್ದ ಬ್ಯಾಡಗಿ ಮೆಣಸಿನ ಪುಡಿಯ ಸ್ವಾದವು ರುಚಿಮೊಗ್ಗುಗಳನ್ನು ಅರಳಿಸುತ್ತಿತ್ತು. ಇನ್ನೂ ಚಿಕನ್‌ಸುಕ್ಕ ಕೊಬ್ಬರಿ ಎಣ್ಣೆಯ ಒಗ್ಗರಣೆಯೊಂದಿಗೆ ಘುಮಘಮಿಸುತ್ತಿತ್ತು. ಕರಿಬೇವಿನಿಂದ ಅಲಂಕೃತಗೊಂಡಿದ್ದ ಸುಕ್ಕಾದಲ್ಲಿ ಚೆನ್ನಾಗಿ ಫ್ರೈ ಆದ ಕೊಬ್ಬರಿಯ ತುರಿಯೂ ಬೆರೆತಿತ್ತು. ಈ ಹೋಟೆಲ್ ಮತ್ತೊಂದು ವಿಶೇಷ ಖಾದ್ಯ ಮರುವಾಯಿಯ ಪುಳಿಮುಂಚಿ. ಕೇವಲ ಹುಣಸೆಹಣ್ಣು, ಮೆಣಸಿನಕಾಯಿ, ಕೊಬ್ಬರಿ ಎಣ್ಣೆ, ಉಪ್ಪು ಹಾಕಿ ತಯಾರಿಸಿದ್ದ ಈ ಖಾದ್ಯ ಸಿಹಿ ಮತ್ತು ಹುಳಿಯ ರಸದೂಟ.

ಮಂಗಳೂರು ಶೈಲಿಯ ಕಾಣೆ, ಬಂಗಡ, ಸೀಗಡಿ, ಏಡಿ, ಪಾಂಪ್ಲೆಟ್‌, ಅಂಜಲ್ ಮೀನುಗಳ ತವಾ ಹಾಗೂ ರವಾ ಫ್ರೈ ಇಲ್ಲಿದೆ. ಪ್ರತಿ ಖಾದ್ಯಗಳಿಗೂ ಭಿನ್ನ ಬೆಲೆ ಇದ್ದರೂ, ₹200 ಮೀರುವುದಿಲ್ಲ. ಸಸ್ಯಾಹಾರಿ ಊಟ ಮಾಡ ಬಯಸುವವರಿಗೂ ಮಂಗಳೂರು ಇಡ್ಲಿ, ನೀರುದೋಸೆ, ಕಲ್ತಪ್ಪ, ಪರೋಟ, ಕೋರಿರೊಟ್ಟಿಗಳಿವೆ. ಇದನ್ನು ಮೀನು ಹಾಗೂ ಕೋಳಿ ಖಾದ್ಯಗಳೊಂದಿಗೂ ಸವಿಯಬಹುದು.

ಈ ಹೋಟೆಲ್‌ ಮಾಲಕಿ ರೇಷ್ಮಾ. ಪ್ರತಿ ಮೆನುವಿನ ಪರಿಚಯದೊಂದಿಗೆ ರೇಷ್ಮಾ ಅವರು ಆಹಾರ ಉದ್ಯಮದ ಬಗ್ಗೆ ಆಸಕ್ತಿ ಬೆಳೆದ ಬಗೆಯನ್ನೂ ಹಂಚಿಕೊಂಡರು. ಕಳೆದ ಮೂರು ದಶಕಗಳಿಂದ ಕಾರ್ಪೊರೇಟ್ ಕಂಪೆನಿಯ ಅನುಭವ ಹೊಂದಿರುವ ‌ರೇಷ್ಮಾ ಅವರಿಗೆ ಹೋಟೆಲ್ ಉದ್ಯಮ ಹೊಸ ಅನುಭವ. ಮಹಿಳಾ ನವೋದ್ಯಮಿಗಳಿಗೆ ವೃತ್ತಿ ಆರಂಭಿಸಲು ಆಹಾರ ಉದ್ಯಮ ಉತ್ತಮ ಮಾರ್ಗ ಎಂದು ನಂಬಿರುವ ಅವರು ಕಳೆದ 5 ತಿಂಗಳ ಹಿಂದಷ್ಟೇ ಈ ಹೋಟೆಲ್ ಆರಂಭಿಸಿದ್ದಾರೆ.

ಸ್ವತಃ ವಿವಿಧ ಪ್ರಾದೇಶಿಕ ಆಹಾರಗಳನ್ನು ಸವಿಯುವುದಲ್ಲಿ ಆಸಕ್ತಿ ಹೊಂದಿರುವ ರೇಷ್ಮಾ, ತಮ್ಮೂರು ಮಂಗಳೂರಿನ ಸಾಂಪ್ರದಾಯಿಕ ರುಚಿಯನ್ನು ಇತರರಿಗೂ ಪರಿಚಯಿಸುವ ಉದ್ದೇಶದಿಂದಲೇ ಹೋಟೆಲ್ ಆರಂಭಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ನಿತ್ಯ ಕೆಲಸಕ್ಕೆ ತೆರಳುವವರಿಗೆ ಗುಣಮಟ್ಟದ ಆಹಾರ ಪೂರೈಸುವ ಆಸಕ್ತಿ ಅವರದ್ದು.

‘ಆರಂಭದಲ್ಲಿ ಚಿಕ್ಕದಾಗಿ ಪ್ರಾರಂಭಿಸಿದ್ದೇವೆ. ಉತ್ತಮ ಆಹಾರ ಪೂರೈಕೆಯಲ್ಲಿ ‘ಬ್ರಾಂಡ್ ನೇಮ್‌’ ಬಂದ ನಂತರ ನಗರದ ಬೇರೆಡೆಗಳಲ್ಲಿಯೂ ಇದನ್ನೇ ಆರಂಭಿಸಿ ಪೂರ್ಣಕಾಲಿಕ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಳ್ಳುವ ಗುರಿ ಇದೆ. ವಿವಿಧ ಸಮಾರಂಭಗಳು, ಪಾರ್ಟಿಗಳಿಗೂ ಅಡುಗೆ ಮಾಡಿ ಬಡಿಸುವ ಸೌಲಭ್ಯವೂ ಇದೆ. ಉದ್ಯಮದಲ್ಲಿ ನನಗೆ ಸಹೋದರನ ಸಹಾಕಾರವು ಸಾಕಷ್ಟಿದೆ’ ಎನ್ನುವುದು ರೇಷ್ಮಾ ಅವರ ಮಾತು. 

***

ಹೋಟೆಲ್‌–ಮೀನ್‌ದ ವನಸ್‌

* ವಿಳಾಸ–ಎಂ.ಕೆ.ಕೆ. ರಸ್ತೆ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಸಿ ಬ್ಲಾಕ್, ಗಾಯತ್ರಿನಗರ (ಹರಿಶ್ಚಂದ್ರ ಘಾಟ್‌ ಹತ್ತಿರ)

* ವಿಶೇಷ ಖಾದ್ಯ–ಸೀಗಡಿ ಘೀ ರೋಸ್ಟ್‌, ಚಿಕನ್ ಮತ್ತು ಮೀನಿನ ಪುಳಿಮುಂಚಿ

* ಮಿನಿ ಮೀಲ್ಸ್‌–₹40

* ಸಮಯ–ಮಧ್ಯಾಹ್ನ 12 ರಿಂದ ರಾತ್ರಿ 11

* ಸಂಪರ್ಕ–9900187770

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry