ಮಕ್ಕಳ ಮೇಲೆ ಒತ್ತಡ ಸಲ್ಲದು

7

ಮಕ್ಕಳ ಮೇಲೆ ಒತ್ತಡ ಸಲ್ಲದು

Published:
Updated:

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 23ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ವಿದ್ಯಾರ್ಥಿಗಳ ಕಲಿಕೆ ಕೊನೆಯ ಹಂತಕ್ಕೆ ತಲುಪಿದ್ದು ಪರೀಕ್ಷೆಯ ದಿನವನ್ನೇ ಕಳವಳದಿಂದ ಎದುರು ನೋಡುತ್ತಿದ್ದಾರೆ. ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳಿಗಿಂತ ಹೆಚ್ಚು ಆತಂಕ ಅವರ ಹೆತ್ತವರಿಗಿರುತ್ತದೆ. ಮಕ್ಕಳು ನಿರಾಳವಾಗಿ ಪರೀಕ್ಷೆ ಬರೆಯಬೇಕಾದರೆ ಪೋಷಕರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದುದು ಅಗತ್ಯ.

ಪೋಷಕರು ವಹಿಸಬೇಕಾದ ಎಚ್ಚರಿಕೆಗಳು

ಅತಿ ನಿರೀಕ್ಷೆ ಬೇಡ:
ಹೆತ್ತವರ ಅತಿ ನಿರೀಕ್ಷೆ ಮಕ್ಕಳನ್ನು ಒತ್ತಡಕ್ಕೆ ನೂಕುತ್ತದೆ. ನಿಮ್ಮ ಮಕ್ಕಳ ಹಿಂದಿನ ಅಂಕಗಳನ್ನು ಉದಾಹರಣೆಯಾಗಿ ಪರಿಗಣಿಸಿ ಅವರ ಸಾಮರ್ಥ್ಯ ಅರ್ಥೈಸಿಕೊಳ್ಳಿ. ದುಂಬಿಯಿಂದ ಕಲ್ಲು ಎತ್ತಿಸುವ ಕೆಲಸ ಮಾಡಬೇಡಿ. ನೀವು ನೀಡುವ ಟಾರ್ಗೆಟ್ ಅವರಿಗೆ ಎಟಕುವಂತದ್ದಾಗಿರಲಿ.

ಮಕ್ಕಳಿಗಾಗಿ ತ್ಯಾಗ ಮಾಡಿ: ಮಕ್ಕಳು ಎಡೆಬಿಡದೇ ಓದುತ್ತಿರಬೇಕು. ಟಿ.ವಿ ನೋಡಬಾರದು, ಮನರಂಜನೆ ಕಾರ್ಯಕ್ರಮಗಳಿಗೆ, ಸಭೆ ಸಮಾರಂಭಗಳಿಗೆ ಹೋಗಬಾರದು ಎಂದು ಹೆತ್ತವರು ಬಯಸುವುದು ಒಳ್ಳೆಯ ವಿಷಯವೇ. ಆದರೆ, ತಾವು ಮನೆಯಲ್ಲಿ ಟಿ.ವಿ ಕಾರ್ಯಕ್ರಮಗಳನ್ನು ನೋಡುತ್ತಾ ಇದ್ದರೆ ಮಕ್ಕಳು ಏಕಾಗ್ರತೆಯಿಂದ ಓದಲಾರರು ಎಂಬುದನ್ನೂ ಅವರು ಅರ್ಥ ಮಾಡಿಕೊಳ್ಳಬೇಕು. ಸಭೆ, ಸಮಾರಂಭಗಳಿಗೆ ಮನೆಯವರೆಲ್ಲರೂ ಹೋಗುವ ಬದಲು ಪೋಷಕರಲ್ಲಿ ಒಬ್ಬರು ಮಗುವಿನೊಂದಿಗೆ ಮನೆಯಲ್ಲಿದ್ದು ಓದಲು ಅನುವು ಮಾಡಿಕೊಡಬೇಕು.

ಆಹಾರದ ಕಾಳಜಿ: ಹೆಚ್ಚು ಕೊಬ್ಬಿನಂಶವಿರುವ ಆಹಾರ ಸೇವಿಸಿದರೆ ಜೀರ್ಣವಾಗಲು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತದೆ ಮತ್ತು ಜಡತ್ವ ಹೆಚ್ಚುತ್ತದೆ. ಆಯಾಸ ಉಂಟಾಗುತ್ತದೆ. ಪರೀಕ್ಷಾ ಕಾಲದಲ್ಲಿ ಸಾಧ್ಯವಾದಷ್ಟು ಮಾಂಸಾಹಾರ, ಕರಿದ ಆಹಾರ ವಸ್ತುಗಳಿಗೆ ಕಡಿವಾಣ ಹಾಕಿ. ತರಕಾರಿಗಳು ಹಾಗೂ ಹಣ್ಣು ಹಂಪಲುಗಳನ್ನು ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡಿ. ಹೆಚ್ಚು ನೀರು ಕುಡಿಯುವಂತೆ ಪ್ರೇರೇಪಿಸಿ.

ಪೂರಕ ಪರಿಸರ ಇರಲಿ: ಮಗುವಿಗೆ ಓದಲು ಪ್ರತ್ಯೇಕ ಕೊಠಡಿ ಒದಗಿಸಿ. ಓದಿನ ಮಧ್ಯೆ ಆಗಾಗ ಅವರನ್ನು ಯಾರೂ ಮಾತನಾಡಿಸಬೇಡಿ. ಪರೀಕ್ಷೆ ಮುಗಿಯುವ ತನಕ ಅವರನ್ನು ಯಾವ ಕೆಲಸಕ್ಕೂ ಹಚ್ಚದಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry