ದಯಾಮರಣಕ್ಕೆ ಅವಕಾಶ

7

ದಯಾಮರಣಕ್ಕೆ ಅವಕಾಶ

Published:
Updated:
ದಯಾಮರಣಕ್ಕೆ ಅವಕಾಶ

ನವದೆಹಲಿ: ಮನುಷ್ಯನಿಗೆ ಘನತೆಯಿಂದ ಸಾಯುವ ಹಕ್ಕು ಇದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ದಯಾಮರಣಕ್ಕೆ ಅವಕಾಶ ನೀಡುವ ಐತಿಹಾಸಿಕ ತೀರ್ಪು ನೀಡಿದೆ. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವ ಸಂದರ್ಭದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.

ಮಾರಣಾಂತಿಕ ರೋಗಗಳಿಂದ ಬಳಲುವ ವ್ಯಕ್ತಿಯು ‘ಮರಣ ಇಚ್ಛೆಯ ಉಯಿಲು’ ಬರೆಯುವುದಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಅವಕಾಶ ಕೊಟ್ಟಿದೆ.

ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ರೀತಿಯ ಕೋಮಾ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ಚಿಕಿತ್ಸೆಗೆ ಮೊದಲು ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ರೋಗಿಯ ಕೃತಕ ಉಸಿರಾಟ ಅಥವಾ ಜೀವರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕಲು ವೈದ್ಯರಿಗೆ ಅವಕಾಶ ದೊರೆಯುತ್ತದೆ.

ಈ ಉಯಿಲನ್ನು ಯಾರು ಜಾರಿಗೆ ತರಬಹುದು, ಯಾವ ರೀತಿ ಜಾರಿಗೆ ತರಬೇಕು ಮತ್ತು ವೈದ್ಯಕೀಯ ಮಂಡಳಿಯ ಅನುಮತಿ ಪಡೆದುಕೊಳ್ಳುವ ಪ್ರಕ್ರಿಯೆ ಏನು ಎಂಬ ಮಾರ್ಗದರ್ಶಿಯನ್ನು ಸಂವಿಧಾನ ಪೀಠ ಸಿದ್ಧಪಡಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ. ಖಾನ್ವಿಲ್ಕರ್‌, ಡಿ.ವೈ. ಚಂದ್ರಚೂಡ್‌ ಮತ್ತು ಅಶೋಕ್‌ ಭೂಷಣ್‌ ಈ ಪೀಠದಲ್ಲಿ ಇದ್ದರು.

ಮಾರಣಾಂತಿಕ ಕಾಯಿಲೆ ಇರುವ ರೋಗಿಯ ಪ್ರತಿನಿಧಿ ಮತ್ತು ಸಂಬಂಧಿಕರು ದಯಾಮರಣದ ಪ್ರಕ್ರಿಯೆ ಆರಂಭಿಸಬಹುದು. ವೈದ್ಯಕೀಯ ಮಂಡಳಿಯು ಬಳಿಕ ಅದನ್ನು ಪರಿಶೀಲಿಸಬೇಕು. ಸಂಸತ್ತು ಕಾನೂನು ರೂಪಿಸುವವರೆಗೆ ಪೀಠವು ನೀಡಿರುವ ನಿರ್ದೇಶನಗಳು ಮತ್ತು ಮಾರ್ಗದರ್ಶಿಸೂತ್ರಗಳು ಜಾರಿ

ಯಲ್ಲಿರುತ್ತವೆ ಎಂದು ಪೀಠ ತಿಳಿಸಿದೆ.

ಸಂವಿಧಾನ ಪೀಠವು ನಾಲ್ಕು ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದಿತ್ತು. ಆದರೆ, ‘ಮರಣ ಇಚ್ಛೆಯ ಉಯಿಲು’ ಬರೆಯಲು ಅವಕಾಶ ಕೊಡುವ ವಿಚಾರದಲ್ಲಿ ಒಮ್ಮತ ಇತ್ತು ಎಂದು ದೀಪಕ್‌ ಮಿಶ್ರಾ ತಿಳಿಸಿದ್ದಾರೆ.

ಮೊದಲ ದಯಾಮರಣ

ಅರುಣಾ ಶಾನುಬಾಗ್‌ ಅವರದ್ದು ಭಾರತದ ಮೊದಲ ದಯಾಮರಣ ಪ್ರಕರಣ. 1973ರಲ್ಲಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾದ ಅರುಣಾ ಅವರು 42 ವರ್ಷ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. 2015ರಲ್ಲಿ ಅವರು ಮೃತ‍ಪಟ್ಟರು.

ಅರುಣಾ ಅವರಿಗೆ ಬಲವಂತವಾಗಿ ಆಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು 2011ರಲ್ಲಿ ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಬಳಿಕ ದಯಾಮರಣಕ್ಕೆ ಅವಕಾಶ ಕೊಟ್ಟಿತ್ತು. ಜೀವನಕ್ಕೆ ಮರಳುವುದು ಸಾಧ್ಯವೇ ಇಲ್ಲ ಎಂಬಂತಹ ರೋಗಿಗಳಿಗೆ ದಯಾಮರಣದ ಅವಕಾಶ ನೀಡಬೇಕು ಎಂದು ಹೇಳಿತ್ತು.

ಕಾಮನ್‌ ಕಾಸ್‌ ಅರ್ಜಿ

ಮಾರಣಾಂತಿಕ ಕಾಯಿಲೆಯ ರೋಗಿಗೆ ಒದಗಿಸಿರುವ ಕೃತಕ ವ್ಯವಸ್ಥೆಗಳನ್ನು ಸ್ಥಗಿತಗೊಳಿಸುವ ಸಂದರ್ಭದಲ್ಲಿ ಮಾರ್ಗದರ್ಶಿಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೋರಿ ಕಾಮನ್‌ ಕಾಸ್‌ ಎನ್‌ಜಿಒ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಆಧಾರದಲ್ಲಿ ದಯಾಮರಣದ ತೀರ್ಪು ನೀಡಲಾಗಿದೆ.

**

ಸಾವಿನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ನೋವು ಅನುಭವಿಸುವ ಅವಧಿಯನ್ನು ಕಡಿಮೆಗೊಳಿಸುವುದು ಘನತೆಯಿಂದ ಬದುಕುವ ಹಕ್ಕಿನ ಭಾಗವಾಗಿದೆ.

– ದೀಪಕ್‌ ಮಿಶ್ರಾ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry