ಹೆಗ್ಗಣದೊಡ್ಡಿ: ಭಾವೈಕ್ಯ ಮೆರೆದ ಉರುಸ್

7

ಹೆಗ್ಗಣದೊಡ್ಡಿ: ಭಾವೈಕ್ಯ ಮೆರೆದ ಉರುಸ್

Published:
Updated:

ಸುರಪುರ: ತಾಲ್ಲೂಕಿನ ಹೆಗ್ಗಣದೊಡ್ಡಿ ಗ್ರಾಮದಲ್ಲಿ (ಯಮನೂರ ಪೀರಾ) ಬಾಗಸವಾರ ಉರುಸ್ ಈಚೆಗೆ ಶ್ರದ್ದಾ ಭಕ್ತಿಯೊಂದಿಗೆ ಜರುಗಿತು. ಹಿಂದೂ ಮತ್ತು ಮುಸ್ಲಿಮರು ಭಾಗವಹಿಸಿ ಭಾವೈಕ್ಯ ಮೆರೆದಿದ್ದು ಗಮನ ಸೆಳೆಯಿತು.

ಉರುಸ್ ಪ್ರಯುಕ್ತ ದರ್ಗಾಕ್ಕೆ ಸುಣ್ಣ ಬಣ್ಣ ಬಳಿದು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ದರ್ಗಾದ ಸುತ್ತಲೂ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ದರ್ಗಾಕ್ಕೆ ತೆರಳುವ ಮಾರ್ಗಕ್ಕೆ ಕೆಂಪು ಮಣ್ಣು ಹಾಕಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಸುಪ್ರಭಾತ, ಆಲಮ್ ಪಠಣ, ಕತೃ ಗದ್ದುಗೆ ಪೂಜಾ ಕಾರ್ಯ, ಅಖಂಡ ಭಜನೆ, ದೇವರ ಸೇವಾ ಕಾರ್ಯ, ತತ್ವಪದಗಳು ಮತ್ತು ಸಂದೇಶ ಕುರಿತು ಉಪನ್ಯಾಸ, ಮಾಲಗತ್ತಿ ಗ್ರಾಮದ ಫಕೀರ ಬಾವುಜೀಗಳಿಗೆ ಸ್ವಾಗತ, ಗಂಧದ ಮೆರವಣಿಗೆ ಭಕ್ತರನ್ನು ಸೆಳೆದವು. ಅರ್ಚಕ ಪೆವಡೆಪ್ಪ ಪೂಜಾರಿ ತಾತನವರಿಂದ ಗದ್ದುಗೆಗೆ ಗಂಧ ಲೇಪನ ಜರುಗಿತು.

ಚಿರಾಗ (ದೀಪೋತ್ಸವ), ಜಾತ್ರಾ ಉತ್ಸವ, ನೈವೇದ್ಯ, ಫಕೀರ ಭಾವುಜೀಗಳಿಂದ ದುವಾ, ದೀಡ ನಮಸ್ಕಾರ, ಜ್ಯೋತಿ ಹೊರುವುದು, ಜಾವಳ ಸೇರಿದಂತೆ ಭಕ್ತರಿಂದ ಹರಕೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು, ಭಕ್ತರು ತಂಡೋಪತಂಡವಾಗಿ ದರ್ಗಾಕ್ಕೆ ಬಂದು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕಾಯಿ, ಕರ್ಪೂರ ನೀಡಿ ಭಕ್ತಿ ಸರ್ಮಪಿಸಿದರು.

ಅರ್ಚಕ ಪವಡೆಪ್ಪ ಪೂಜಾರಿ ಮಾತನಾಡಿ, ‘ಮುಸ್ಲಿಮರಿಗಿಂತ ಹೆಚ್ಚಾಗಿ ಹಿಂದುಗಳೇ ಈ ದೇವರನ್ನು ಪೂಜಿಸುವುದು ಜಾತ್ರೆಯ ವಿಶೇಷ, ಸಂತನಲ್ಲಿ ಶ್ರದ್ದಾ ಭಕ್ತಿಯಿಟ್ಟು ನಡೆದಲ್ಲಿ ಇಷ್ಟಾರ್ಥಗಳು ನೆರವೇರುತ್ತವೆ. ಸಮಸ್ಯೆಗಳು ದೂರವಾಗುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry