ರಾಜಕೀಯವಾಗಿ ರೈತರು ಪ್ರಬಲರಾಗಲಿ: ಚಾಮರಸ

ಶನಿವಾರ, ಮಾರ್ಚ್ 23, 2019
34 °C
ರೈತರ ಬೃಹತ್‌ ಸಮಾವೇಶ, ಜಾಗೃತಿ ಕಾರ್ಯಕ್ರಮ

ರಾಜಕೀಯವಾಗಿ ರೈತರು ಪ್ರಬಲರಾಗಲಿ: ಚಾಮರಸ

Published:
Updated:
ರಾಜಕೀಯವಾಗಿ ರೈತರು ಪ್ರಬಲರಾಗಲಿ: ಚಾಮರಸ

ರಾಣೆಬೆನ್ನೂರು: ‘ರೈತರ ಬಗ್ಗೆ ವಿಧಾನಸೌಧ ಮತ್ತು ಸಂಸತ್ತಿನಲ್ಲಿ ಗುಡುಗಬೇಕಾದ ಧ್ವನಿಗಳೇ ಇಲ್ಲ. ಹೀಗಾಗಿ ರೈತರೇ ರಾಜಕೀಯವಾಗಿ ಪ್ರಬಲರಾಗಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.

ತಾಲ್ಲೂಕಿನ ಮೇಡ್ಲೇರಿ ಗ್ರಾಮ ದಲ್ಲಿ ಶುಕ್ರವಾರ ನಡೆದ ‘ರೈತರ ಬೃಹತ್‌ ಸಮಾವೇಶ ಹಾಗೂ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡದ ಸರ್ಕಾರ ಅವರನ್ನು ಗುಲಾಮರಂತೆ ಕಾಣುತ್ತಿವೆ. ರೈತರ ಸರಣಿ ಆತ್ಮಹತ್ಯೆಗಳನ್ನು ತಡೆಯಲು ಎರಡೂ ಸರ್ಕಾರಗಳು ವಿಫಲವಾಗಿವೆ. ಆದ್ದರಿಂದ, ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ನಮ್ಮ ಬದುಕು ಹಸನವಾಗಲು ಸಾಧ್ಯ’ ಎಂದು ಹೇಳಿದರು.

‘ದೇಶಕ್ಕೆ ಬಂಡವಾಳ ಶಾಹಿಗಳನ್ನು ಕರೆತಂದು ಅವರಿಗೆ ಎಲ್ಲ ಮೂಲ ಸೌಲಭ್ಯಗಳನ್ನು ನೀಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೇ, ಬಂಡವಾಳಶಾಹಿಗಳ ಸಾವಿರಾರು ಕೋಟಿ ಸಾಲವನ್ನೂ ಕೂಡಾ ಮನ್ನಾ ಮಾಡಿದ್ದಾರೆ’ ಎಂದು ಆರೋಪಿಸಿದರು.

ರೈತ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿದರು.

ತಿಪ್ಪಾಯಿಕೊಪ್ಪದ ಮೂಕೇಶ್ವರ ಮಠದ ಉತ್ತರಾಧಿಕಾರಿ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ಧಾರವಾಡದ ಸಮಾಜ ಪರಿವರ್ತನಾ ಸಮಿತಿ ಮುಖಂಡ ಎಸ್‌.ಆರ್‌.ಹಿರೇಮಠ, ಡಾ.ಪ್ರೇಮಾನಂದ ಲಕ್ಕಣ್ಣನವರ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ನಾಗಪ್ಪ ಯಲಿಗಾರ ಮಾತನಾಡಿದರು.

ಹಕ್ಕೊತ್ತಾಯ: 2016–17ನೇ ಸಾಲಿನಲ್ಲಿ ಬರಗಾಲದಿಂದ ರೈತರು ಬೆಳೆ ಕಳೆದುಕೊಂಡು ಕೃಷಿಯನ್ನು ಬಿಡುವ ಹಂತದಲ್ಲಿದ್ದಾರೆ. ಆದ್ದರಿಂದ, ಸರ್ಕಾರ ಪ್ರತಿ ಎಕರೆಗೆ ₹25 ಸಾವಿರ ಬೆಳೆನಷ್ಟ ಪರಿಹಾರ ನೀಡಬೇಕು. ಜಿಲ್ಲೆಯ ಪ್ರಮುಖ ಬೆಳೆಗಾಳದ ಪ್ರತಿ ಕ್ಷಿಂಟಲ್‌ ಹತ್ತಿಗೆ ₹10ಸಾವಿರ, ಮೆಕ್ಕೆಜೋಳಕ್ಕೆ ₹2.5 ಸಾವಿರ, ಭತಕ್ಕೆ ₹3 ಸಾವಿರ ನಿಗಧಿ ಮಾಡಬೇಕು. ಜಿಲ್ಲೆಯಲ್ಲಿ ಈಗಾಗಲೇ ನಿಷ್ಕ್ರೀಯಗೊಂಡ ಏತ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಿ ಕೆರೆಗಳಿಗೆ ನೀರು ತುಂಬಿಸಬೇಕು. ಜಿಲ್ಲೆಗೆ 2014ರಲ್ಲಿ ಡಿಸಿಸಿ ಬ್ಯಾಂಕ್‌ ಅಂಜೂರಾಗಿದ್ದು ಶೀಘ್ರವೇ ಕಾರ್ಯರೂಪಕ್ಕೆ ತರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರಕ್ಕೆ ಒತ್ತಾಯಿಸಿತು.

ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಅಗಸೀಬಾಗಿಲ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಶೇಖಪ್ಪ ಚಕ್ರಸಾಲಿ, ರಾಮು ಕಲಾಲ, ಸುರೇಶ ಧೂಳೆಹೊಳಿ, ಗಂಗಣ್ಣ ಎಲಿ, ಮಹೇಶ ಪರಸಪ್ಪನವರ, ಮರಿಗೌಡ ಪಾಟೀಲ, ಚಿಕ್ಕಪ್ಪ ಛತ್ರದ, ಎಸ್‌.ವಿ.ಛಪ್ಪರದಹಳ್ಳಿ, ಮಂಜುಳಾ ಅಕ್ಕಿ, ಬಸವರಾಜ ಹುಲ್ಲತ್ತಿ, ಗಣೇಶ ಬಿಲ್ಲಾಳ, ಅಡಿವೆಪ್ಪ ಆಲದಕಟ್ಟಿ, ದಿಳ್ಳೆಪ್ಪ ಮಣ್ಣೂರ, ಬಸನಗೌಡ ಗಂಗಪ್ಪನವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry