ನಕ್ಸಲ್ ಹಾವಳಿ ಪ್ರದೇಶ: ಅನುದಾನ ನೀಡಿ

ಗುರುವಾರ , ಮಾರ್ಚ್ 21, 2019
30 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ; ಸದಸ್ಯರ ಒತ್ತಾಯ

ನಕ್ಸಲ್ ಹಾವಳಿ ಪ್ರದೇಶ: ಅನುದಾನ ನೀಡಿ

Published:
Updated:
ನಕ್ಸಲ್ ಹಾವಳಿ ಪ್ರದೇಶ: ಅನುದಾನ ನೀಡಿ

ಮಡಿಕೇರಿ: ‘ತಾಲ್ಲೂಕಿನ ಕೆಲವು ನಕ್ಸಲ್ ಹಾವಳಿ ಇರುವ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್‌ ಅಡಿ ಸರ್ಕಾರದಿಂದ ಅನುದಾನ ಲಭ್ಯವಿರುವುದರಿಂದ, ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಸಂಪಾಜೆ, ಕಕ್ಕಬ್ಬೆ ಪ್ರದೇಶಗಳು ಸೇರಿದಂತೆ ತಾಲ್ಲೂಕಿನ ಸಾಕಷ್ಟು ಗ್ರಾಮಗಳು ನಕ್ಸಲ್ ಗ್ರಾಮಗಳೆಂದು ಗುರುತಿಸಿಕೊಂಡಿದ್ದು, ಈ ಗ್ರಾಮಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ವಿಶೇಷ ಪ್ಯಾಕೇಜ್‌ ಮೂಲಕ ಅನುದಾನಗಳು ಸರ್ಕಾರದಿಂದ ಲಭ್ಯವಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ದೂರಿದ ಅವರು, ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಆಗ್ರಹಿಸಿದರು. ಇದಕ್ಕೆ ಪಂಚಾಯಿತಿಯ ಇತರೆ ಸದಸ್ಯರು ಕೂಡ ಬೆಂಬಲ ವ್ಯಕ್ತಪಡಿಸಿದರು.

ಕೋವಿ ಠೇವಣಿಗೆ ಅವಕಾಶ ಬೇಡ: ‘ನಕ್ಸಲ್ ಹಾವಳಿ ತಾಲ್ಲೂಕಿನಲ್ಲಿ ಸಾಕಷ್ಟಿದೆ. ಸದಾ ಒಂದಿಲ್ಲೊಂದು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷರಾಗುತ್ತಿದ್ದು, ಜನತೆ ಭಯದಲ್ಲಿದ್ದಾರೆ. ಆದ್ದರಿಂದ ಕೋವಿಯ ಅವಶ್ಯಕತೆ ಪ್ರತಿಯೊಬ್ಬರಿಗೂ ಇರುವುದರಿಂದ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕೋವಿಯನ್ನು ಠೇವಣಿ ಇಡಬೇಕಾಗುತ್ತದೆ. ಆದರೆ, ಇದಕ್ಕೆ ತಾಲ್ಲೂಕು ವ್ಯಾಪ್ತಿಯಲ್ಲಿ ಅವಕಾಶ ನೀಡಬಾರದು’ ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ಒತ್ತಾಯಿಸಿದರು.

‘ಸೆಸ್ಕ್‌’ ಅಧಿಕಾರಿಗೆ ತರಾಟೆ: ಹಮ್ಮಿಯಾಲ ಮುಟ್ಲು ಭಾಗದಲ್ಲಿ 15 ದಿನಗಳಿಂದ ವಿದ್ಯುತ್ ಸಮಸ್ಯೆ ಇದೆ. ಜನತೆ ಕತ್ತಲಲ್ಲಿ ದಿನ ಕಳೆಯುವಂತೆ ಆಗಿದೆ ಎಂದು ಸಮಾಜಿಕ ನ್ಯಾಯ ಸಮಿತಿ ಸದಸ್ಯ ರಾಯ್ ತಮ್ಮಯ್ಯ ಅಧಿಕಾರಿಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ‘ಸೆಸ್ಕ್‌’ ಅಧಿಕಾರಿ ದೊಡ್ಡಮನಿ, ‘ಈ ಬಗ್ಗೆ ಯಾವುದೇ ದೂರು ಬಂದಿಲ್ಲ’ ಎಂದು ಹಾರಿಕೆಯ ಉತ್ತರ ನೀಡಿದರು. ಈ ಸಂದರ್ಭ ಅಧಿಕಾರಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಕೆಲ ಸದಸ್ಯರು ದೂರಿದರು.

ಅಧ್ಯಕ್ಷೆ ಶೋಭಾ ಪ್ರತಿಕ್ರಿಯಿಸಿ ‘ಸೆಸ್ಕ್‌’ ಇಲಾಖೆಯಲ್ಲಿ ವಿವಿಧ ಯೋಜನೆಗಳು ಇವೆ. ಆದರೆ, ಯಾವುದು ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಕರನ್ನು ವರ್ಗಾವಣೆಗೊಳಿಸಿ: ಸರ್ಕಾರದ ನೀತಿ ಅನ್ವಯ 10 ವರ್ಷ ಒಂದೇ ಶಾಲೆಯಲ್ಲಿ ಕೆಲಸ ನಿರ್ವಹಿಸಿರುವ ಶಿಕ್ಷಕರನ್ನು ವರ್ಗಾವಣೆಗೊಳಿಸಬೇಕು ಎಂಬ ನಿಯಮವಿದೆ. ಆದರೂ ಈ ನಿಯಮ ಕೆಲವು ಕಡೆ ಜಾರಿಯಾಗಿಲ್ಲ ಎಂದು ಅಧ್ಯಕ್ಷೆ ಶೋಭಾ ಮೋಹನ್ ದೂರಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತು, ಸುಬ್ರಮಣಿ, ತಾಲ್ಲೂಕು ಪಂಚಾಯಿತಿ ಇ.ಒ ಜೀವನ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry