ಹೊಸ ಉದಯದ ನಿರೀಕ್ಷೆಯಲ್ಲಿ ಬಂಡಾಯ

ಮಂಗಳವಾರ, ಮಾರ್ಚ್ 19, 2019
32 °C

ಹೊಸ ಉದಯದ ನಿರೀಕ್ಷೆಯಲ್ಲಿ ಬಂಡಾಯ

Published:
Updated:
ಹೊಸ ಉದಯದ ನಿರೀಕ್ಷೆಯಲ್ಲಿ ಬಂಡಾಯ

'ಬಂಡಾಯ ಒಂದು ಮನೋಧರ್ಮ; ಮಾನವೀಯತೆ ಒಂದು ಮೌಲ್ಯ' - ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ 'ಬಂಡಾಯ ಸಾಹಿತ್ಯ ನಲವತ್ತರ ಹೆಜ್ಜೆ' ಕಾರ್ಯಕ್ರಮದ ಧ್ಯೇಯವಾಕ್ಯವಿದು. ಅಲ್ಪಸಂಖ್ಯಾತರು ಹಾಗೂ ಕೆಳಸ್ತರದ ಜನರಿಗೆ ಧ್ವನಿಯಾಗುವ ಉದ್ದೇಶದಿಂದ 1979ರ ಮಾರ್ಚ್ 11ರಂದು ಆರಂಭವಾದ ಬಂಡಾಯ ಸಂಘಟನೆಯೀಗ 40ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ, ಇತ್ತೀಚಿನ ವರ್ಷಗಳಲ್ಲಿ ಚಹರೆಗಳ ರೂಪದಲ್ಲಷ್ಟೇ ಉಳಿದುಕೊಂಡಿರುವ 'ಬಂಡಾಯ ಸಂಘಟನೆ'ಗೆ ಪುನಶ್ಚೇತನ ನೀಡುವ ಪ್ರಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಬಂಡಾಯದ ಇಂದಿನ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ 'ಮುಕ್ತಛಂದ' ಕೇಳಿದ ಎರಡು ಪ್ರಶ್ನೆಗಳ ನೆಪದಲ್ಲಿ, ಇಬ್ಬರು ಕವಿಗಳು ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ಪ್ರಶ್ನೆಗಳು:

* ಬಂಡಾಯದ ಇಂದಿನ ಸ್ವರೂಪ ಯಾವ ಬಗೆಯದು?

* ಕಳೆದ ನಲವತ್ತು ವರ್ಷಗಳಲ್ಲಿ ಬಂಡಾಯದ ಮುಖ್ಯ ಸಾಧನೆಯೆಂದು ಯಾವುದನ್ನು ಗುರ್ತಿಸುವಿರಿ?

***

ಕತ್ತಲೆ ಕರಗುವ ಸಮಯ : ಮೂಡ್ನಾಕೂಡು ಚಿನ್ನಸ್ವಾಮಿ

ಇಂದಿನ ಸಾಹಿತ್ಯದಲ್ಲಿ ಮೊದಲಿನ ಬಂಡಾಯ ಕಾಣಿಸುವುದಿಲ್ಲ. ಆದರೆ, ಹೊಸ ತಲೆಮಾರಿನ ಸಾಹಿತ್ಯದಲ್ಲಿ ಬಂಡಾಯದ ಸ್ವರೂಪ ಬಹಳ ಸೂಕ್ಷ್ಮವಾಗಿ ಕಾಣಿಸುತ್ತಲೇ ಇದೆ. ಆದರೆ, ಅದರ ಸ್ವರೂಪ ಬದಲಾಗಿದೆ. ಬಹಳ ಸೊಫೆಸ್ಟಿಕೇಟೆಡ್‍ ರೀತಿಯಲ್ಲಿ ಇತ್ತೀಚಿನವರ ಬರವಣಿಗೆಯಲ್ಲಿ ಬಂಡಾಯ ಕಾಣಿಸುತ್ತಿದೆ. ಏಕೆಂದರೆ, ನಮ್ಮ ದೇಶದಲ್ಲಿ ನಾಲ್ಕು ದಶಕಗಳ ಹಿಂದೆಯಿದ್ದ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆಗಳ ಸ್ವರೂಪದಲ್ಲಿ ಈಗಲೂ ಯಾವುದೇ ಬದಲಾವಣೆಯಾಗಿಲ್ಲ. ಆಧುನಿಕತೆ ಮತ್ತು ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದ್ದರೂ ಸಂಸ್ಕೃತಿಯ ಮೂಲಗಳು ಎಂದು ನಾವು ಗುರ್ತಿಸುವ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ.

ಬಂಡಾಯ ಸಾಹಿತ್ಯ ಮೊದಲು ಹೆಚ್ಚು ನೇರವಾಗಿತ್ತು. ಹೇಳಬೇಕಾದುದನ್ನು ಗಟ್ಟಿ ಧ್ವನಿಯಲ್ಲಿ ನೇರವಾಗಿ ಹೇಳಲಾಗುತ್ತಿತ್ತು. ಭಾಷೆ ಕೂಡ ಕಚ್ಚಾ ಆಗಿತ್ತು. ಈಗ ಭಾಷೆ ಮಾಗಿದೆ. ಒಳ್ಳೆಯ ಮಾತುಗಳಲ್ಲೇ 'ಇದು ಸರಿಯಿಲ್ಲ' ಎಂದು ಹೇಳಲಾಗುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳುವ ದೃಷ್ಟಿಯಿಂದ ಇದು ಅಗತ್ಯವಿರಬಹುದು.

ಬಂಡಾಯದ ಬಹಳ ಮುಖ್ಯ ಸಾಧನೆ, ದಲಿತವನ್ನೂ ಒಳಗೊಂಡು ಒಂದು ಹೊಸ ಪರಿಭಾಷೆಯನ್ನು ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಸಿದ್ದು. ಇದರಿಂದಾಗಿ, ಭಾರತೀಯ ಬದುಕಿನ ಇನ್ನೊಂದು ಮುಖ ತೆರೆದುಕೊಳ್ಳುತ್ತಾ ಹೋಯಿತು. ಕತ್ತಲಲ್ಲಿ ಕುಳಿತುಕೊಂಡೇ 'ಇದು ಬಹಳ ಶ್ರೇಷ್ಠ' ಎನ್ನುತ್ತಿದ್ದವರಿಗೆ, 'ಇಲ್ಲಿ ಕತ್ತಲೂ ಇದೆ' ಎನ್ನುವುದು ತಿಳಿಯಿತು. ಇದು ಬಂಡಾಯದ ಬಹಳ ಮುಖ್ಯ ಸಾಧನೆ.

ಮೂಡ್ನಾಕೂಡು ಚಿನ್ನಸ್ವಾಮಿ

ಇತ್ತೀಚೆಗೆ ಮರಾಠಿ ಲೇಖಕ ಶರಣಕುಮಾರ ಲಿಂಬಾಳೆ ಅವರ ಸಂದರ್ಶನ ಗಮನಿಸಿದೆ. ಸಂದರ್ಶನ ಮಾಡಿದ ವ್ಯಕ್ತಿಗೆ ನಮ್ಮ ಲೋಕದ ಬಗ್ಗೆ ಸರಿಯಾಗಿ ತಿಳಿದೇ ಇರಲಿಲ್ಲ. ಅವರು ಮಾತ್ರವಲ್ಲ- ನಮ್ಮ ಜಾತಿವ್ಯವಸ್ಥೆ ಎಷ್ಟೊಂದು ಸಂಕೀರ್ಣವಾಗಿದೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಚೆನ್ನೈನ ಯಾವುದೋ ಅಗ್ರಹಾರದಲ್ಲಿ ಕುಳಿತವರಿಗೆ ಪೆರುಮಾಳ್‍ ಮುರುಗನ್‍ ತಳಮಳ ಅರ್ಥವಾಗುವುದಿಲ್ಲ. ಇಂಥ ಅಜ್ಞಾನವನ್ನು ಕಳೆಯುವ ಪ್ರಯತ್ನ ಆಗುತ್ತಿದೆ.

ಸಾಹಿತ್ಯ, ನಾಟಕ ಸೇರಿದಂತೆ ಚಳವಳಿಗಳ ಮೂಲಕ ಬಂಡಾಯ ಉಂಟುಮಾಡಿರುವ ಪರಿಣಾಮ ಅತ್ಯುತ್ತಮವಾದುದು. 'ಬಂಡಾಯ ಸಂಘಟನೆ' ಎನ್ನಲಾಗುತ್ತಿದೆ. ಆದರೆ, ಇದನ್ನು 'ದಲಿತ ಬಂಡಾಯ' ಎಂದು ಹೇಳುವುದೇ ಹೆಚ್ಚು ಸರಿ. ಬಂಡಾಯದ ಭೀಮಗರ್ಭದಲ್ಲಿ ಹುಟ್ಟಿದ ಘಟೋತ್ಕಚ 'ದಲಿತ' ಎನ್ನುವುದು ನನ್ನ ಅನಿಸಿಕೆ.

ಯಾವುದೇ ಚಳವಳಿ ಸವಕಲಾಗುವುದು ವ್ಯಕ್ತಿಕೇಂದ್ರಿತ ಅಹಂಕಾರಗಳಿಂದ. ಹಾಗೆಯೇ ಎಂಥ ಗಟ್ಟಿ ಚಳವಳಿಯಾದರೂ ಶಾಶ್ವತವಾಗಿ ಉಳಿಯುವುದಿಲ್ಲ. ಇದು ಬಂಡಾಯಕ್ಕೂ ಅನ್ವಯವಾಗುತ್ತದೆ. ಈಗ ಸಂಘಟನೆಯ ಪುನಶ್ಚೇತನದ ಪ್ರಯತ್ನ ನಡೆಯುತ್ತಿರುವುದು ಸ್ವಾಗತಾರ್ಹ.

***

ಹೊಸಪೀಳಿಗೆಯ ಹೆಗಲಿನ ನಿರೀಕ್ಷೆ : ಸತೀಶ ಕುಲಕರ್ಣಿ

ಎಲ್ಲ ಪ್ರಗತಿಪರ ಸಂಘಟನೆಗಳು ಈಗ ಒಂದಾಗಿರುವುದು ಗಮನಾರ್ಹ ಸಂಗತಿ. ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್‍ ಹತ್ಯೆಯ ನಂತರ ಎಲ್ಲರೂ ಒಟ್ಟಾಗಿ ಒಂದು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಹೊಸ ಪೀಳಿಗೆಯಲ್ಲಿ ಕೂಡ ಬಂಡಾಯದ ಎಚ್ಚರವಿದೆ. ಆದರೆ, ಬಂಡಾಯದ ಚೌಕಟ್ಟಿಲ್ಲ. ಅವರಲ್ಲಿ ಸಂಘಟನೆ ಇಲ್ಲ. ಹಳೆಯ ಎಲೆಗಳೆಲ್ಲ ಉದುರಿ ಗೊಬ್ಬರವಾಗಿ ಹೊಸ ಬೆಳೆ ಬಂದಿದೆ. ಈಗ ಅಭಿವ್ಯಕ್ತಿಯ ವಿಧಾನಗಳೂ ಬದಲಾಗಿವೆ. ವಾಟ್ಸ್‌ಆ್ಯಪ್‌, ಫೇಸ್‍ಬುಕ್‍ಗಳು ಬಂಡಾಯದ ಆಶಯಗಳಿಗೆ ಬಳಕೆಯಾಗುತ್ತಿವೆ. ಆದರೆ, ನೇರವಾಗಿ ಜನರ ನಡುವೆ ಬಂದಾಗ ದೊರೆಯುವ ಅನುಭವವೇ ಬೇರೆಯ ಬಗೆಯದು. ಜನರ ನಡುವೆ ಒಡನಾಡಿದಾಗ ದೊರೆಯುವ ಬಂಡಾಯದ ಎಚ್ಚರ ಬಹಳ ಮುಖ್ಯವಾದುದು.

ನಾವು ಎದುರಿಸಿದ ಎಲ್ಲ ಸವಾಲುಗಳು ಈಗ ತಾರಕಕ್ಕೆ ಬಂದುನಿಂತಿವೆ. ಕೋಮುವಾದದ ಬಗ್ಗೆ ಮಾತನಾಡುತ್ತಿದ್ದೆವು. ಅದೀಗ ದೆಹಲಿಯ ಗದ್ದುಗೆ ಮೇಲೆ ಬಂದು ಕೂತಿದೆ. ಜಾತೀಯತೆ, ಹಿಂಸೆ, ದಲಿತರ ಮೇಲಿನ ಹಿಂಸೆ - ಇವೆಲ್ಲ ಇನ್ನೂ ಹೆಚ್ಚು ಬಲಿಷ್ಠವಾಗಿ ನಮ್ಮೆದುರು ನಿಂತಿವೆ.

ಹಿಂದೆಲ್ಲ ನಾವೆಲ್ಲ ಏನಾದರೂ ಹೇಳಿದರೆ ಅದನ್ನು ಉಪೇಕ್ಷಿಸುತ್ತಿದ್ದರು. ಈಗ ಬಲಪಂಥೀಯರು ಹೆಚ್ಚು ಚುರುಕಾಗಿದ್ದಾರೆ. ನಮ್ಮ ಪ್ರತಿಯೊಂದು ಕ್ರಿಯೆಗೂ ಅವರಿಂದ ಪ್ರತಿಕ್ರಿಯೆ ಬರುತ್ತಿದೆ. ಹಾಗೆ ನೋಡಿದರೆ ನಮ್ಮ ಗುಂಪು ಸಣ್ಣದಿದೆ. ನನ್ನ ತಲೆಮಾರಿನವರೆಲ್ಲ ಈಗ ದಣಿದಿದ್ದೇವೆ. ಆದರೂ ನಮ್ಮ ನಮ್ಮ ಮಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂಘಟನೆ ಹೊಸ ಪೀಳಿಗೆ ಮಾಡಬೇಕಾದ ಕೆಲಸ. ಆ ಕೆಲಸ ಸ್ವಲ್ಪ ಕುಂಠಿತಗೊಂಡಿದೆ.

ಸತೀಶ ಕುಲಕರ್ಣಿ

ಕಾವ್ಯವನ್ನು ಜನರ ಬಳಿಗೆ ಒಯ್ದದ್ದು ಬಂಡಾಯದ ಬಹುಮುಖ್ಯ ಸಾಧನೆ. ಸಿದ್ದಲಿಂಗಯ್ಯ ಇರಬಹುದು ಅಥವಾ ನಾನಿರಬಹುದು- ನಾವೆಲ್ಲ ಕಾವ್ಯವನ್ನು ಜನರ ಬಳಿಗೆ ತಲುಪಿಸುವ ಕೆಲಸವನ್ನು ಮಾಡಿದೆವು. ಈಗಿನ ಪೀಳಿಗೆಯ ಕವಿಗಳು ಕೂಡ ಬಂಡಾಯದ ಆಶಯಗಳನ್ನು ಕವಿತೆಯಾಗಿಸುತ್ತಿದ್ದಾರೆ. ಆದರೆ, ಅವರ ಕಾವ್ಯ ಹೆಚ್ಚು ಸಂಕೀರ್ಣವಾಗಿದೆ ಎಂದು ನನಗನ್ನಿಸುತ್ತಿದೆ. ಇವರನ್ನೆಲ್ಲ ಅಲ್ಲಗಳೆಯಲು ಸಾಧ್ಯವಿಲ್ಲ. ನಮಗಿಂತಲೂ ಹೆಚ್ಚು ಓದಿಕೊಂಡಿದ್ದಾರೆ, ಗಟ್ಟಿಗರಿದ್ದಾರೆ. ಆದರೆ, ಅಭಿವ್ಯಕ್ತಿ ವ್ಯಕ್ತಿಗತವಾದುದು.

ಸಾಹಿತ್ಯ ಬರೆದರಷ್ಟೇ ಸಾಲದು, ಹೊರಗೆ ಬಂದು ಮಾತನಾಡಬೇಕು ಎನ್ನುವ ಛಾತಿಯನ್ನು ಬಂಡಾಯದ ಸಂಘಟನೆ ನಮಗೆ ಕಲಿಸಿಕೊಟ್ಟಿತು. ನಾವು ಸೈದ್ಧಾಂತಿಕವಾಗಿ ಬಹಳಷ್ಟು ಜಗಳ ಮಾಡ್ತೇವೆ. ಆದರೆ, ಬಹಳ ಹತ್ತಿರ ಇರುತ್ತೇವೆ. ಈಗ ಸಮಾನಶತ್ರುವೊಬ್ಬನನ್ನು ಗುರ್ತಿಸುವ ಒಂದು ತಂಡ ತಯಾರಾಗುತ್ತಿದೆ ಎನ್ನಿಸುತ್ತಿದೆ.

***

ಬಂಡಾಯ ಸಾಹಿತ್ಯ ಸಂಘಟನೆಗೆ ಚಾಲನೆ ದೊರೆತದ್ದು 1979ರಲ್ಲಿ. ಆ ವರ್ಷದ ಮಾರ್ಚ್ 10, 11ರಂದು ಬೆಂಗಳೂರಿನ ದೇವಾಂಗ ಹಾಸ್ಟೆಲ್‍ನಲ್ಲಿ ಸೇರಿದ್ದ ಸಮಾನ ಮನಸ್ಕರ ಸಮಾವೇಶ, ಸಂಘಟನೆಯ ರೂಪ ತಾಳುವ ನಿರ್ಧಾರವನ್ನು ಕೈಗೊಂಡಿತ್ತು. ಡಿ.ಆರ್. ನಾಗರಾಜ್‍ ನೀಡಿದ ‘ಖಡ್ಗವಾಗಲಿ ಕಾವ್ಯ; ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ಘೋಷವಾಕ್ಯ ಬಂಡಾಯ ಸಂಘಟನೆಯ ಜನಪ್ರಿಯ ಧ್ಯೇಯವಾಕ್ಯವಾಗಿತ್ತು. ಬರಗೂರು ರಾಮಚಂದ್ರಪ್ಪ ಸಂಘಟನೆಯ ಸಂಚಾಲಕರಾಗಿದ್ದರು. ಮೊದಲ ಇಪ್ಪತ್ತೈದು ವರ್ಷ ಕ್ರಿಯಾಶೀಲವಾಗಿ ಕೆಲಸ ಮಾಡಿದ ಸಂಘಟನೆ, ಕಳೆದ ಒಂದೂವರೆ ದಶಕದಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಈಗ ಸಂಘಟನೆಗೆ ಪುನಶ್ಚೇತನ ನೀಡುವ ಹಂಬಲದ ಕಾರ್ಯಕ್ರಮ ಬೆಂಗಳೂರಿನ ಸೆಂಟ್ರಲ್‍ ಕಾಲೇಜಿನ ಸೆನೆಟ್‍ ಹಾಲ್‍ನಲ್ಲಿ ಇಂದು (ಮಾರ್ಚ್ 11) ನಡೆಯುತ್ತಿದೆ. ಇದು ಬಂಡಾಯ ಸಂಘಟನೆಯ ಹಳೆ ಬೇರು, ಹೊಸ ಚಿಗುರಿನ ಸಮ್ಮಿಲನದ ಕಾರ್ಯಕ್ರಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry