ಅಭಿವೃದ್ಧಿಗಾಗಿ ಕಾಯ್ದದ್ದೇ ಬಂತು

7
ಐದು ವರ್ಷಗಳಿಂದ ಜನರಿಗೆ ಸಿಗದ ಶಾಸಕ

ಅಭಿವೃದ್ಧಿಗಾಗಿ ಕಾಯ್ದದ್ದೇ ಬಂತು

Published:
Updated:
ಅಭಿವೃದ್ಧಿಗಾಗಿ ಕಾಯ್ದದ್ದೇ ಬಂತು

ಬಳ್ಳಾರಿ: ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಪಾದಯಾತ್ರೆ ನಡೆಸಿದ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ ದೊರಕಿಸಿಕೊಟ್ಟ ಮಹತ್ವದ ಕ್ಷೇತ್ರ ಬಳ್ಳಾರಿ. ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಕ್ಷೇತ್ರ ಮಾತ್ರ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ.

ಅಂದು ಬೃಹತ್ ಸಮಾವೇಶ ನಡೆದಿದ್ದ ಜಿಲ್ಲಾ ಕ್ರೀಡಾಂಗಣ ಸಮಾವೇಶಗಳಿಗಾಗಿಯೇ ಹೆಚ್ಚು ಬಳಕೆಯಾಗಿದೆ. ಅಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ಇಲ್ಲ.

ಮೂರು ವರ್ಷ ಸತತ ಬರಗಾಲವಿದ್ದ ಜಿಲ್ಲಾ ಕೇಂದ್ರವಾದ ನಗರದಲ್ಲಿ, ಪಾಲಿಕೆಯು ಹಿಂದೆ ಬೇಸಿಗೆಯಲ್ಲಿ ಇಪ್ಪತ್ತು ದಿನಕ್ಕೊಮ್ಮೆ ನೀರು ಪೂರೈಸಿತ್ತು. ಈಗಲೂ ಹತ್ತು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

‘ಎರಡು ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು. ಇನ್ನೇನೂ ಬೇಡ’ ಎಂಬ ಕೂಗು ಸರ್ಕಾರಕ್ಕೆ ಕೇಳಿಸಿಲ್ಲ. ವಾರ್ಡ್‌ಗೆ ಒಂದರಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂಬ ಆಗ್ರಹವೂ ಅನಾಥವಾಗಿದೆ. 20 ಲೀಟರ್‌ ಕ್ಯಾನ್‌ಗೆ ₹ 30 ಕೊಟ್ಟು ನೀರು ಕುಡಿಯಬೇಕಾಗಿದೆ.

ಬಿಜೆಪಿ ಬೆಂಬಲ ಪಡೆದು ಮೇಯರ್‌ ಆಗಿರುವ ಕಾಂಗ್ರೆಸ್‌ನ ಜಿ.ವೆಂಕಟರಮಣ, ‘ಬೇಸಿಗೆಯಲ್ಲಿ ಎಂಟು ದಿನಕ್ಕೊಮ್ಮೆಯಾದರೂ ನೀರು ಪೂರೈಸುತ್ತೇವೆ. ಬರೆದಿಟ್ಟುಕೊಳ್ಳಿ’ ಎಂದು ಕೆಲವೇ ದಿನಗಳ ಹಿಂದೆ ಬಜೆಟ್‌ ಪೂರ್ವ ಸಭೆಯಲ್ಲಿ ಭರವಸೆ ನೀಡಿದ್ದರು!

2013ಕ್ಕೂ ಮುನ್ನ ರೂಪಿಸಲಾಗಿದ್ದ 24x 7 ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಜಾರಿಯಾಗಿಲ್ಲ. ಕಾಂಗ್ರೆಸ್‌ ಶಾಸಕ ಅನಿಲ್‌ ಲಾಡ್‌ ಮತ್ತು ಬಿಜೆಪಿ ಬಲ ಹೆಚ್ಚಿರುವ ಪಾಲಿಕೆಯ ನಡುವಿನ ವೈಮನಸ್ಯ– ಅಸಹಕಾರವೂ ಇದಕ್ಕೆ ಕಾರಣ.

ಅಲಭ್ಯ ಶಾಸಕ: ‘ಜನರಿಗೆ ಅಲಭ್ಯ ಶಾಸಕ’ ಎಂಬ ಆರೋಪದ ನಡುವೆ, ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಈವರೆಗೆ ಸುದ್ದಿಗೋಷ್ಠಿ ನಡೆಸಿದ್ದೂ ಮೂರ್ನಾಲ್ಕು ಬಾರಿ ಮಾತ್ರ. ಶಾಸಕರ ನಿಧಿಯಿಂದ ತಮ್ಮ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಿದರು ಎಂಬ ಕುರಿತೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಎಚ್‌.ಆರ್‌.ಗವಿಯಪ್ಪ ವೃತ್ತ ಹಾಗೂ ರೈಲ್ವೆ– ಲೋಕೋಪಯೋಗಿ ಇಲಾಖೆ ಜಂಟಿಯಾಗಿ ನಿರ್ಮಿಸಿದ ಮೇಲ್ಸೇತುವೆ ಬಿಟ್ಟರೆ ನಗರದ ಪ್ರಮುಖ ರಸ್ತೆ, ವೃತ್ತಗಳ ಅಭಿವೃದ್ಧಿಯಾಗಿಲ್ಲ. ಪಾದಚಾರಿ ರಸ್ತೆ ಒತ್ತುವರಿ, ವಾಹನ ಪಾರ್ಕಿಂಗ್‌ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ನಿರ್ವಹಣೆ, ಕಸ ಸಂಗ್ರಹದಂತಹ ಮೂಲಸೌಕರ್ಯ ಅಭಿವೃದ್ಧಿ ಕುರಿತೂ ಶಾಸಕರು ಮಾತನಾಡಿದ್ದು ಕಡಿಮೆ.

ಅಕ್ರಮ ಗಣಿಗಾರಿಕೆಯ ಆರೋಪದಲ್ಲಿ ಜೈಲಿಗೂ ಹೋಗಿ ಬಂದಿರುವ ಅನಿಲ್‌ ಲಾಡ್‌, 2004ರಲ್ಲಿ ಕೂಡ್ಲಿಗಿಯಲ್ಲಿ ಬಿಜೆಪಿ ಶಾಸಕರಾಗಿದ್ದರು. ಈಗ, ಕಾಂಗ್ರೆಸ್‌ ಪಕ್ಷದ ಒಳಗಿನವರೇ ತಮಗೆ ಟಿಕೆಟ್‌ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲ ದಿನದ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಮತ್ತೊಮ್ಮೆ, ‘ನನಗೆ ಮೂರೂ ಪಕ್ಷಗಳಿಂದ ಆಹ್ವಾನವಿದೆ. ನಾನು ಬೇವರ್ಸಿ ಅಲ್ಲ’ ಎಂದೂ ಹೇಳಿದ್ದರು. ಪರಿಶಿಷ್ಟರು ಮತ್ತು ಮುಸ್ಲಿಮರು ಹೆಚ್ಚಿರುವ ನಗರ ಕ್ಷೇತ್ರದಲ್ಲಿ ವಿರಳರಾಗಿರುವ ಮರಾಠಾ ಸಮುದಾಯದ ಲಾಡ್‌ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ.–ಅನಿಲ್‌ ಲಾಡ್‌

ಮೈಲಿಗಲ್ಲು ಎಲ್ಲಿ?: ‘ಲಾಡ್‌ ಕ್ಷೇತ್ರದಲ್ಲಿ ಮೈಲಿಗಲ್ಲು ಎನ್ನುವಂಥ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಜನರ ನಡುವೆಯೂ ಕಾಣಿಸಿಕೊಳ್ಳಲಿಲ್ಲ' ಎಂಬ ಆರೋಪವಿದೆ.

ಕೊಳೆಗೇರಿ ನಿವಾಸಿಗಳಿಗೆ ಪರಿಚಯ ಪತ್ರ ವಿತರಣೆ, ಕಾಂಕ್ರೀಟ್ ರಸ್ತೆ ಅಭಿವೃದ್ಧಿಯಿಂದ ಆಗಾಗ ಸುದ್ದಿಯಾಗುತ್ತಿದ್ದ ಶಾಸಕರು ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸಿದ್ದರು. ಆಶ್ರಯ ಯೋಜನೆಗೆ ಫಲಾನುಭವಿಗಳಿಂದ ವಸೂಲು ಮಾಡುವ ವಂತಿಗೆ ದುಬಾರಿಯಾಯಿತು ಎಂದು ಪ್ರಧಾನಿಗೆ ಪತ್ರ ಬರೆಯುವುದಾಗಿ ಸುದ್ದಿಗೋಷ್ಠಿ ನಡೆಸಿದ್ದರು.

ಇಂಥ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಅವರು ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಸಂಚರಿಸಿದ್ದು ಅತಿ ಕಡಿಮೆ.

ಕ್ಷೇತ್ರ ಬದಲಾವಣೆ?

ಬಳ್ಳಾರಿ:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಜಿ.ಸೋಮಶೇಖರ ರೆಡ್ಡಿ ಅವರನ್ನು ನಗರದಲ್ಲಿ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದಾಗಿದೆ.

ಹಾಲಿ ಶಾಸಕರಿಗೇ ಕಾಂಗ್ರೆಸ್‌ ಟಿಕೆಟ್ ನೀಡುತ್ತದೆ ಎಂಬ ಮಾತಿನ ಆಚೆಗೆ, ಅನಿಲ್‌ ಲಾಡ್‌ ಕಾರ್ಯವೈಖರಿಯ ಬಗ್ಗೆ ಜನರಿಗಿರುವ ಅಸಮಾಧಾನ ಅವರಿಗೆ ಟಿಕೆಟ್‌ ತಪ್ಪಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ. ಲಾಡ್‌ ಕ್ಷೇತ್ರ ಬದಲಿಸುವ ಯೋಚನೆಯಲ್ಲಿದ್ದು, ತಮ್ಮ ಸಮುದಾಯದವರು ಹೆಚ್ಚಿರುವ ಶಹಾಪುರದಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಅಭಿವೃದ್ಧಿ ಪುಸ್ತಕವೇ ಇದೆ!

‘ಜನರಿಗೆ ನಾನು ಲಭ್ಯವಾಗಿಲ್ಲ ಎಂಬುದನ್ನು ಜನರೇ ಹೇಳಬೇಕು. ಲಭ್ಯವಾಗಿಲ್ಲ ಎನ್ನುವವರ ಹೆಸರು ಕೊಡಿ. ನನ್ನ ಬಳಿ ಕ್ಷೇತ್ರದ 60 ಸಾವಿರ ಜನರ ಫೋನ್‌ ನಂಬರ್‌ಗಳಿವೆ. ಅವುಗಳನ್ನು ಕೊಡುತ್ತೇನೆ. ಮಾತನಾಡಿ’ ಎಂದು ಅನಿಲ್‌ ಲಾಡ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕ್ಷೇತ್ರದ ಅಭಿವೃದ್ಧಿ ಕುರಿತು ಪುಸ್ತಕವನ್ನೇ ಪ್ರಕಟಿಸಲಾಗಿದೆ. ಕೊಡುತ್ತೇನೆ, ಓದಿಕೊಳ್ಳಿ. ಬಳ್ಳಾರಿ ಸಿಟಿಯನ್ನು ಸಿಂಗಪುರವನ್ನಾಗಿ ಮಾಡಿದ್ದರೆ ಅದೊಂದು ಮೈಲಿಗಲ್ಲಾಗುತ್ತಿತ್ತು. ನನ್ನ ಕೈಯಲ್ಲಿ ಕಾರ್ಪೊರೇಷನ್‌ ಇದೆಯಾ? ಏನಿದೆ‌?’

*

ಶಾಸಕರು ಜನರಿಗೆ ಲಭ್ಯವಿಲ್ಲದ ಪರಿಸ್ಥಿತಿಯಲ್ಲೇ ಐದು ವರ್ಷ ಮುಗಿಯುತ್ತಿದೆ. ಹಿಂದಿನವರು ಕೆಲಸ ಮಾಡದಿದ್ದರೂ ಕಾಣಿಸಿಕೊಳ್ಳುತ್ತಿದ್ದರು. ಈಗಿನವರಿಗೆ ಅದಕ್ಕೂ ಪುರುಸೊತ್ತಿಲ್ಲ.

–ಸಿ.ಚನ್ನಬಸವಣ್ಣ, ಪ್ರಕಾಶಕರು

*

ನೀರು ಪೂರೈಸುವ ಅವ್ಯವಸ್ಥೆಯನ್ನು ಸರಿಪಡಿಸುವತ್ತ ಶಾಸಕರು ಗಮನ ಹರಿಸಲಿಲ್ಲ. ನಗರದ ಒಳಾಂಗಣ ಅಭಿವೃದ್ಧಿ ದೂರವಾಗಿದೆ. ಈಗ ಗಲ್ಲಿಗಳ ಅಭಿವೃದ್ಧಿ ಆರಂಭವಾಗಿದೆ.

–ರಾಜಶೇಖರ್‌, ಬೆಂಗಳೂರು ರಸ್ತೆ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry