ಭಾರತಕ್ಕೆ ಐದನೇ ಸ್ಥಾನ

7
ಅಜ್ಲಾನ್‌ ಶಾ ಕಪ್‌ ಹಾಕಿ: ಐರ್ಲೆಂಡ್‌ ಎದುರು ಗೆದ್ದ ಸರ್ದಾರ್‌ ಪಡೆ

ಭಾರತಕ್ಕೆ ಐದನೇ ಸ್ಥಾನ

Published:
Updated:
ಭಾರತಕ್ಕೆ ಐದನೇ ಸ್ಥಾನ

ಇಫೊ, ಮಲೇಷ್ಯಾ: ಭಾರತ ಪುರುಷರ ತಂಡದವರು ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ.

ಐದು ಮತ್ತು ಆರನೇ ಸ್ಥಾನ ನಿರ್ಧರಿಸಲು ಶನಿವಾರ ನಡೆದ ಪಂದ್ಯದಲ್ಲಿ ಸರ್ದಾರ್‌ ಸಿಂಗ್‌ ಬಳಗ 4–1 ಗೋಲುಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು.

ಶುಕ್ರವಾರ ನಡೆದಿದ್ದ ತನ್ನ ಅಂತಿಮ ರೌಂಡ್‌ ರಾಬಿನ್‌ ಲೀಗ್‌ ಹೋರಾಟದಲ್ಲಿ ಭಾರತ 2–3 ಗೋಲುಗಳಿಂದ ಐರ್ಲೆಂಡ್‌ ಎದುರು ಆಘಾತ ಅನುಭವಿಸಿತ್ತು. ಹೀಗಾಗಿ ಶನಿವಾರ ಎಚ್ಚರಿಕೆಯಿಂದ ಆಡಿತು.

ಮೊದಲ ಕ್ವಾರ್ಟರ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ದಾರ್‌ ಪಡೆ 5ನೇ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು. ಮೊದಲ ಅವಕಾಶ ಕೈಚೆಲ್ಲಿದ ವರುಣ್‌ ಕುಮಾರ್‌, ಎರಡನೇ ಪ್ರಯತ್ನದಲ್ಲಿ ಗೋಲು ಬಾರಿಸಿದರು.

ಎರಡನೇ ಕ್ವಾರ್ಟರ್‌ನಲ್ಲೂ ಭಾರತದ ಆಟ ರಂಗೇರಿತು. 28ನೇ ನಿಮಿಷದಲ್ಲಿ ಸ್ಟ್ರೈಕರ್‌ ಶಿಲಾನಂದ ಲಾಕ್ರಾ ಕೈಚಳಕ ತೋರಿದರು. ನೀಲಂ ಸಂಜೀಪ್‌ ಎದುರಾಳಿ ಆವರಣದ ಬಲತುದಿಯಿಂದ ತಮ್ಮತ್ತ ತಳ್ಳಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಶಿಲಾನಂದ, ಅದನ್ನು ಲೀಲಾಜಾಲವಾಗಿ ಗುರಿ ಮುಟ್ಟಿಸಿದರು. ಹೀಗಾಗಿ ಸರ್ದಾರ್‌ ಬಳಗ 2–0ರ ಮುನ್ನಡೆ ಗಳಿಸಿತು.

ಆ ನಂತರ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿತು. ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ (32ನೇ ನಿಮಿಷ) ವರುಣ್‌, ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಅವರು ಚೆಂಡನ್ನು ‘ಡ್ರ್ಯಾಗ್‌ಫ್ಲಿಕ್‌’ ಮೂಲಕ ಗುರಿ ತಲುಪಿಸಿದರು. ಹೀಗಾಗಿ ತಂಡದ ಮುನ್ನಡೆ 3–0ಗೆ ಹೆಚ್ಚಿತು.

37ನೇ ನಿಮಿಷದಲ್ಲಿ ಗುರ್ಜಂತ್‌ ಸಿಂಗ್‌ ತಂಡದ ಸಂಭ್ರಮ ಹೆಚ್ಚಿಸಿದರು. ತಲ್ವಿಂದರ್‌ ಸಿಂಗ್‌ ತಮ್ಮತ್ತ ಬಾರಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಸಿಮ್ರನ್‌ಜೀತ್‌ ಸಿಂಗ್‌ ಅದನ್ನು ಗುರ್ಜಂತ್‌ ಅವರಿಗೆ ವರ್ಗಾಯಿಸಿದರು. ತಮ್ಮತ್ತ ಬಂದ ಚೆಂಡನ್ನು ಗುರ್ಜಂತ್ ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಮುಟ್ಟಿಸಿದರು. 48ನೇ ನಿಮಿಷದಲ್ಲಿ ಐರ್ಲೆಂಡ್‌ ತಂಡದ ಜೂಲಿಯನ್‌ ಡೇಲ್‌ ಗೋಲು ಬಾರಿಸಿ ಹಿನ್ನಡೆಯನ್ನು ತಗ್ಗಿಸಿದರು. 50ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ಹೆಚ್ಚಿಸಿಕೊಳ್ಳುವ ಅವಕಾಶ ಲಭ್ಯವಾಗಿತ್ತು. ಆದರೆ ಇದರ ಲಾಭ ಎತ್ತಿಕೊಳ್ಳಲು ಸರ್ದಾರ್‌ ಪಡೆಯ ಆಟಗಾರರಿಗೆ ಆಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry