ಮುಂಬೈ: ಆಜಾದ್ ಮೈದಾನ ತಲುಪಿದ ರೈತರ ಮೆರವಣಿಗೆ

ಶುಕ್ರವಾರ, ಮಾರ್ಚ್ 22, 2019
27 °C

ಮುಂಬೈ: ಆಜಾದ್ ಮೈದಾನ ತಲುಪಿದ ರೈತರ ಮೆರವಣಿಗೆ

Published:
Updated:
ಮುಂಬೈ: ಆಜಾದ್ ಮೈದಾನ ತಲುಪಿದ ರೈತರ ಮೆರವಣಿಗೆ

ಮುಂಬೈ: ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ರೈತರು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಸೋಮವಾರ ಬೆಳಿಗ್ಗೆ ಇಲ್ಲಿನ ಆಜಾದ್ ಮೈದಾನ ತಲುಪಿದೆ.

ಕೆಲವೇ ಕ್ಷಣಗಳಲ್ಲಿ ರೈತರು ನಾರಿಮನ್ ಪಾಯಿಂಟ್‌ನಲ್ಲಿರುವ ವಿಧಾನಭವನದ ಬಳಿ ತಲುಪಿ ಪ್ರತಿಭಟನೆ ನಡೆಸಲಿದ್ದಾರೆ. ಕೆಲವು ಮೂಲಗಳ ಪ್ರಕಾರ, ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವ ಕಾರಣ, ಅವರನ್ನು ಆಜಾದ್ ಮೈದಾನದಲ್ಲೇ ತಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಅಖಿಲ ಭಾರತೀಯ ಕಿಸಾನ್ ಸಭಾ, ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದ) ರೈತ ವಿಭಾಗದ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಶಿವಸೇನಾ ಬೆಂಬಲ: ಮಹಾರಾಷ್ಟ್ರದ ಆಡಳಿತಾರೂಢ ಮಿತ್ರಪಕ್ಷ ಶಿವಸೇನಾ ಸಹ ರೈತರ ಪ್ರತಿಭಟನೆಗೆ ಬೆಂಬಲ ನೀಡಿದೆ.

ಬಿಗಿ ಭದ್ರತೆ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದಕ್ಷಿಣ ಮುಂಬೈನ ಪ್ರದೇಶಗಳಲ್ಲಿ ಮತ್ತು ಆಜಾದ್ ಮೈದಾನದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಪಾರ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು, ರಾಜ್ಯ ಮೀಸಲು ಪೊಲೀಸ್ ಪಡೆ ಹಾಗೂ ದಂಗೆ ನಿಯಂತ್ರಣ ಪಡೆಯನ್ನು ಮೈದಾನದಲ್ಲಿ ನಿಯೋಜಿಸಲಾಗಿದೆ.

ಈ ಮಧ್ಯೆ, ನಾಸಿಕ್‌ ಜಿಲ್ಲೆಯ ಪನ್‌ಗಾರ್‌ಬರಿ ಗ್ರಾಮದಿಂದ ಬಂದ ನೂರಾರು ರೈತರು ಆಜಾದ್ ಮೈದಾನದಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುತ್ತಿದ್ದಾರೆ.‘ಇದು ಮನರಂಜನೆಗಾಗಿ ಅಲ್ಲ. ಗಮನ ಸೆಳೆಯುವ ಸಲುವಾಗಿ ನಾವು ನೃತ್ಯ ಪ್ರದರ್ಶನ ಮಾಡುತ್ತಿದ್ದೇವೆ’ ಎಂದು ರೈತರು ತಿಳಿಸಿದ್ದಾರೆ.

ಚಿಕಿತ್ಸೆಗೆ ವ್ಯವಸ್ಥೆ: ನೂರಾರು ಕಿಲೋಮೀಟರ್ ದೂರದಿಂದ ಬರಿಗಾಲಿನಲ್ಲಿ ಕ್ರಮಿಸಿ ಬಂದು ಅಸ್ವಸ್ಥರಾಗಿರುವ ರೈತರ ಚಿಕಿತ್ಸೆಗಾಗಿ ಆಜಾದ್ ಮೈದಾನದ ಬಳಿ ಠಾಣೆ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಸಂಜಯ್ ಕರೋಲ್ ನೇತೃತ್ವದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ‘ಬೆಳಿಗ್ಗೆಯಿಂದ ಇದುವರೆಗೆ ಸುಮಾರು 50 ರೈತರಿಗೆ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನವರು ಕಾಲು ನೋವಿನಿಂದ ಬಳಲುತ್ತಿದ್ದಾರೆ. ಬರಿಗಾಲಿನಲ್ಲಿ ನಡೆದುಕೊಂಡು ಬಂದಿರುವುದರಿಂದ ಅವರ ಪಾದಗಳು ಊದಿಕೊಂಡಿರುವುದಲ್ಲದೆ, ಗಾಯಗಳಾಗಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರದಲ್ಲೇ ರೈತರು ವಿಧಾನಭವನದತ್ತ ತೆರಳುವ ಸಾಧ್ಯತೆ ಇದೆ. ‘ಸಂಪೂರ್ಣ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ ನಿಗದಿ ಸಂಬಂಧ ಡಾ. ಸ್ವಾಮಿನಾಥನ್ ಸಮಿತಿ ನೀಡಿರುವ ವರದಿ ಅನುಷ್ಠಾನ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ’ಕ್ಕೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ...

* ಮುಂಬೈ ತಲುಪಿದ ರೈತರ ಮೆರವಣಿಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry