ಬೇಸಿಗೆ ಜತೆಗೆ ಬಂತು ‘ಬಡವರ ಫ್ರಿಜ್’

ಮಂಗಳವಾರ, ಮಾರ್ಚ್ 19, 2019
27 °C
ನಗರದಲ್ಲಿ ಮುಖ್ಯ ರಸ್ತೆ ಬದಿ ತಲೆ ಎತ್ತುತ್ತಿರುವ ಮಡಿಕೆ ವ್ಯಾಪಾರ, ಭರ್ಜರಿ ವಹಿವಾಟು ನಿರೀಕ್ಷೆಯಲ್ಲಿ ವ್ಯಾಪಾರಿಗಳು

ಬೇಸಿಗೆ ಜತೆಗೆ ಬಂತು ‘ಬಡವರ ಫ್ರಿಜ್’

Published:
Updated:
ಬೇಸಿಗೆ ಜತೆಗೆ ಬಂತು ‘ಬಡವರ ಫ್ರಿಜ್’

ಚಿಕ್ಕಬಳ್ಳಾಪುರ: ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಸುಡುವ ಬಿಸಿಲಿನೊಂದಿಗೆ ದಾಹವೂ ಹೆಚ್ಚಾಗುತ್ತಿದೆ. ದಾಹ ತಣಿಸಲು ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದರೆ, ಇನ್ನೊಂದೆಡೆ ಧಗೆಯ ನಡುವೆಯೂ ನೈಸರ್ಗಿಕವಾಗಿ ನೀರನ್ನು ತಣ್ಣಗೆ ಇಡುವ ‘ಬಡವರ ಫ್ರಿಜ್’ (ಮಣ್ಣಿನ ಮಡಿಕೆ)ಗಳ ವ್ಯಾಪಾರ ಗರಿಗೆದರುತ್ತಿದೆ.

ಸದ್ಯ ನಗರದ ಪಾದಚಾರಿ ಮಾರ್ಗ ಮತ್ತು ಹೆದ್ದಾರಿ ಇಕ್ಕೆಲಗಳಲ್ಲಿ ಮಡಿಕೆ ಮಾರಾಟ ಮಾಡುತ್ತಿರುವ ದೃಶ್ಯಗಳು ಕಾಣ ಸಿಗುತ್ತವೆ. ಬೇಸಿಗೆ ಋತುಮಾನದ ಮುಖ್ಯ ವ್ಯಾಪಾರಗಳಲ್ಲಿ ಇದು ಒಂದಾಗಿದೆ. ಮಾರ್ಚ್‌ ಆರಂಭದಲ್ಲೇ ನೆತ್ತಿ ಸುಡುವ ಬಿಸಿಲಿರುವ ಕಾರಣ ಈ ಬಾರಿ ಮಡಿಕೆ ವ್ಯಾಪಾರಿಗಳು ಒಳ್ಳೆಯ ವಹಿವಾಟಿನ ನಿರೀಕ್ಷೆಯಲ್ಲಿದ್ದಾರೆ.

ನಗರದ ಬಿ.ಬಿ ರಸ್ತೆಯ ಶನಿಮಹಾತ್ಮ ದೇವಾಲಯದ ಬಳಿ ರಸ್ತೆ ಎರಡು ಬದಿ, ನಂದಿ ಕ್ರಾಸ್‌, ಚದಲಪುರ ಕ್ರಾಸ್‌ ಬಳಿ ಬಳಿ ಈಗಾಗಲೇ ಕುಂಬಾರರು ತಮ್ಮ ಸರಕುಗಳೊಂದಿಗೆ ಠಿಕಾಣಿ ಹೂಡಿದ್ದಾರೆ. ನಲ್ಲಿ ಅಳವಡಿಸಿರುವುದು ಸೇರಿದಂತೆ ವಿವಿಧ ಬಗೆಯ, ಆಕೃತಿಯ ಮಡಿಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ವಿನ್ಯಾಸ, ಗಾತ್ರ ಆಧರಿಸಿ ಬೆಲೆ ನಿಗದಿ ಮಾಡಲಾಗಿದೆ.

‘ಶ್ರೀಮಂತರು ಬೇಸಿಗೆಯಲ್ಲಿ ತಣ್ಣನೆಯ ನೀರಿಗಾಗಿ ಫ್ರಿಜ್ ಬಳಸುತ್ತಾರೆ. ವಿದ್ಯುತ್ ಕಡಿತದಿಂದ ಆಗಾಗ ಫ್ರಿಜ್ ಕೂಡ ಕೆಲಸ ಮಾಡದು. ಆದರೆ ಬಡವರು ತಣ್ಣನೆಯ ನೀರಿಗಾಗಿ ಮಡಿಕೆ ಮೊರೆ ಹೋಗುವರು. ಅದಕ್ಕೆ ವಿದ್ಯುತ್ ಕಡಿತದ ಸಮಸ್ಯೆ ಇಲ್ಲ, ವಿದ್ಯುತ್‌ ಇರಲಿ, ಬಿಡಲಿ ಸದಾ ಕಾಲ ತಣ್ಣನೆಯ ನೀರು ಸಿಗುವುದು. ಎನ್ನುತ್ತಾರೆ ಎಂದು ಕಂದವಾರ ಬಾಗಿಲು ನಿವಾಸಿ ಶ್ರೀನಿವಾಸ್.

ದೇಹಕ್ಕೆ ತಂಪು: ‘ನೈಸರ್ಗಿಕವಾಗಿ ನೀರನ್ನು ತಂಪಾಗಿಸುವ ಗುಣ ಹೊಂದಿರುವ ಮಡಿಕೆ, ಫ್ರಿಜ್‌ಗಿಂತ ಉತ್ತಮ. ಆರೋಗ್ಯದ ದೃಷ್ಟಿಯಿಂದಲೂ ಅನುಕೂಲ. ದಾಹವನ್ನು ಬೇಗ ತಣಿಸಿ, ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಮಣ್ಣಿನಲ್ಲಿರುವ ವಿಶಿಷ್ಟ ಗುಣಗಳು ದೇಹದೊಳಗಿನ ಕೆಲವು ಬ್ಯಾಕ್ಟೀರಿಯಗಳ ಮೇಲೆ ಪರಿಣಾಮ ಬೀರಿ, ಆರೋಗ್ಯ ರಕ್ಷಣೆಗೆ ನೆರವಾಗುತ್ತವೆ. ಕಡಿಮೆ ಖರ್ಚಿನಲ್ಲಿ ಬಹು ವಿಧದ ಲಾಭ ನೀಡುವ ಪರಿಸರಪ್ರಿಯ ಎನಿಸಿದೆ.

ಫ್ರಿಜ್‌ನಲ್ಲಿರುವ ನೀರಿನ ಬಳಕೆ ಅನಾರೋಗ್ಯಕಾರಿ. ಫ್ರಿಜ್‌ನಲ್ಲಿಟ್ಟ ತಣ್ಣಗೆ ನೀರು ಕುಡಿದರೆ ಗಂಟಲು ಬೇನೆಗೆ ಕಾರಣವಾಗುವುದು. ಕೆಲವೊಮ್ಮೆ ಅರೆ ತಲೆನೋವು, ಚರ್ಮ ವ್ಯಾಧಿಗೂ ಕಾರಣವಾಗುತ್ತದೆ. ಪಿತ್ತಕೋಶ, ಮೂತ್ರಪಿಂಡ, ಯಕೃತ್ತು, ಕರುಳಿನ ಮೇಲೂ ಫ್ರಿಜ್‌ ನೀರು ಅಡ್ಡ ಪರಿಣಾಮ ಬೀರುವುದು ಎಂದು ಡಾ. ಮಹೇಶ್‌ ಹೇಳುವರು.

‘ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ ಉತ್ಪನ್ನಗಳ ಬಳಕೆ ಹೆಚ್ಚಾದಂತೆ ಮಣ್ಣಿನ ಮಡಿಕೆಗೆ ಬೇಡಿಕೆ ಕಡಿಮೆಯಾಯಿತು. ಕುಂಬಾರರು ನಂಬಿಕೊಂಡಿದ್ದ ಕುಲಕಸುಬು ಸಂಕಷ್ಟಕ್ಕೆ ಸಿಲುಕಿತು. ಬೇಸಿಗೆಯಲ್ಲಿ ತಣ್ಣನೆ ನೀರಿಗಾಗಿ ಜನರು ಮಡಿಕೆ ಮೊರೆ ಹೋಗುವರು. ಉಳಿದಂತೆ ಅವರನ್ನು ಕೇಳುವವರು ಇರಲ್ಲ. ಮಡಿಕೆ ಬಿಟ್ಟರೆ ಮಣ್ಣಿನ ಪಾತ್ರೆ, ತಟ್ಟೆಗಳನ್ನು ಯಾರೂ ಕೇಳಲ್ಲ. ಹೀಗಾಗಿ ಕುಂಬಾರರೂ ನೀರಿನ ಮಡಿಕೆ, ಹೂವಿನ ಕುಂಡಗಳ ತಯಾರಿಕೆಗಷ್ಟೇ ಸೀಮಿತವಾಗಿದ್ದಾರೆ.

ವಿವಿಧ ಗಾತ್ರದ ಮಡಿಕೆ: ‘ನಮ್ಮಲ್ಲಿ ಒಂದು ಲೀಟರ್‌ನಿಂದ ಹಿಡಿದು 15 ಲೀಟರ್ ಸಾಮರ್ಥ್ಯದ ತರಹೇವಾರಿ ಮಡಿಕೆಗಳು ಸಿಗುತ್ತವೆ. ನಲ್ಲಿ ಅಳವಡಿಸಿರುವ ದೊಡ್ಡ ಮಡಿಕೆಗಳೂ ಇವೆ. ಹೋದ ವರ್ಷ ವ್ಯಾಪಾರ ಜೋರಾಗಿತ್ತು. ಈ ವರ್ಷ ಈಗಷ್ಟೇ ವ್ಯಾಪಾರ ಶುರುವಾಗಿದೆ. ಇನ್ನೂ ಬಹುತೇಕ ಜನರಿಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿಲ್ಲ. ಗೊತ್ತಾಗಿದ್ದರೆ ಮುಗಿಬೀಳುತ್ತಿದ್ದರು...’ ಎಂದು ಕೊಂಡೇನಹಳ್ಳಿ ಅಶ್ವತ್‌ ಹೇಳುವರು.

‘ಗಾತ್ರ ಆಧರಿಸಿ ₹ 120ರಿಂದ ₹ 350 ವರೆಗಿನ ಬೆಲೆಗೆ ಮಡಿಕೆ ಮಾರಾಟ ಮಾಡಲಾಗುತ್ತದೆ. ಮೇ–ಜೂನ್ ವರೆಗೆ ವ್ಯಾಪಾರ ಇರುತ್ತದೆ. ಸುಮಾರು ₹ 2 ಲಕ್ಷದ ವರೆಗೆ ವಹಿವಾಟು ನಡೆಯುವುದು.

ಈ ನಡುವೆ ಸ್ಥಳೀಯ ಕುಂಬಾರರಿಗೆ ಪೈಪೋಟಿ ನೀಡುವಂತೆ ಮಂಗಳೂರು ಮತ್ತು ರಾಜಸ್ಥಾನದಲ್ಲಿ ತಯಾರಾದ ಕೆಂಪು ಮಡಿಕೆಗಳು ಮಾರಾಟಕ್ಕೆ ಬಂದಿದೆ. ಸ್ವಲ್ಪ ದುಬಾರಿ (ಪ್ರತಿ ಮಡಿಕೆಗೆ 450ರಿಂದ 600) ಎನಿಸಿದರೂ ಗಟ್ಟಿಮುಟ್ಟಾಗಿವೆ. ನೋಡಲು ಚೆಂದ ಇವೆ. ಜನರೂ ಅವುಗಳ ಖರೀದಿಗೂ ಒಲವು ತೋರುತ್ತಿದ್ದಾರೆ.

-ಕೆಂಪೇಗೌಡ ಎನ್.ವೆಂಕಟೇನಹಳ್ಳಿ

*

ಬೇಸಿಗೆಯಲ್ಲಿ ಶ್ರೀಮಂತರು ‘ಫ್ರಿಜ್’ ಖರೀದಿಸಿದರೆ ಹೆಚ್ಚು ಹಣ ಖರ್ಚು ಮಾಡುವ ಸಾಮರ್ಥ್ಯ ಇಲ್ಲದ ಬಡ ಜನರು ತಣ್ಣೀರಿಗಾಗಿ ಮಡಿಕೆ ಖರೀದಿಸುತ್ತಾರೆ.

-ಕೊಂಡೇನಹಳ್ಳಿ ಅಶ್ವತ್ಥ್‌, ಮಡಿಕೆ ವ್ಯಾಪಾರಿ

*

ಮನೆಯಲ್ಲಿ ಫ್ರಿಜ್‌ ಇದೆ. ಆದರೂ ಬೇಸಿಗೆಯಲ್ಲಿ ಮನೆಯವರೆಲ್ಲ ಮಡಿಕೆ ನೀರನ್ನೇ ಕುಡಿತೀವಿ. ಆರೋಗ್ಯಕ್ಕೂ ಒಳ್ಳೆಯದು, ದೇಹಕ್ಕೂ ತಂಪು.

-ವಿಶ್ವನಾಥ ಗೌಡ, ಗ್ರಾಹಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry