ಸಿಎಂ ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ ಮನೆ ಇಲ್ಲ

7
ತುರುವೇಕೆರೆಯಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

ಸಿಎಂ ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ ಮನೆ ಇಲ್ಲ

Published:
Updated:
ಸಿಎಂ ಕ್ಷೇತ್ರದಲ್ಲೇ ದಲಿತ ಕುಟುಂಬಕ್ಕೆ ಮನೆ ಇಲ್ಲ

ತುರುವೇಕೆರೆ: ‘ರಾಜ್ಯದಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಿಸಿರುವುದಾಗಿ ಜಾಹೀರಾತು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೇ ದಲಿತ ಕುಟುಂಬದ ವ್ಯಕ್ತಿಗೆ ಮನೆ ಇಲ್ಲವಾಗಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಅರೆಮಲ್ಲೇನಹಳ್ಳಿ ಶ್ರೀರಂಗನಾಥಸ್ವಾಮಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದಲಿತ ಕುಟುಂಬದ ವ್ಯಕ್ತಿಯೊಬ್ಬ ನನಗೆ ಮನೆ ಇಲ್ಲ ಎಂದು ಪತ್ರ ಬರೆದಿದ್ದಾನೆ. ನನ್ನ ಮುಪ್ಪಿನಲ್ಲಾದರೂ ಮನೆ ಕಲ್ಪಿಸಿ, ನಿಶ್ಚಿಂತೆಯಿಂದ ಪ್ರಾಣಬಿಡುತ್ತೇನೆ ಎಂದು ಹೇಳಿದ್ದಾನೆ. ಇದು ರಾಜ್ಯ ಸರ್ಕಾರದ ಗುಡಿಸಲು ರಹಿತ ಮನೆಯ ವಸತಿ ಕ್ರಾಂತಿ’ ಎಂದು ಗೇಲಿ ಮಾಡಿದರು. 

‘ಇನ್ನು ಮುಂದೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಎಲ್ಲ ರೈತರ ಸಾಲವನ್ನು ಅಧಿಕಾರ ಕೊಟ್ಟ 24 ಗಂಟೆಯಲ್ಲಿ ಮನ್ನಾ ಮಾಡುತ್ತೇನೆ’ ಎಂದು ಭರವಸೆ ನೀಡಿದರು. 

‘ದಾವಣೆಗೆರೆಯ ರೈತನೊಬ್ಬ ಭತ್ತದ ಬೆಳೆಗೆ ನೀರಿಲ್ಲದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ’ಪ್ರಜಾವಾಣಿ’ಯಲ್ಲಿ ವರದಿ ಆಗಿದೆ. ಆದರೆ ನೀರಾವರಿ ಸಚಿವರು  ಮುಖಕ್ಕೆ ಬಣ್ಣ, ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿಕೊಂಡು ಟಿ.ವಿಯಲ್ಲಿ ಜಾಹೀರಾತು ನೀಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮೊದಲೆಲ್ಲ ಮಾಧ್ಯಮಗಳು ಜೆಡಿಎಸ್‌ ಎರಡು-ಮೂರು ಸೀಟು ಗೆಲ್ಲಲಿದೆ ಎಂದು ವರದಿ ನೀಡುತ್ತಿದ್ದವು. ಈಗ 40-50 ಸೀಟು ಗೆಲ್ಲುತ್ತದೆ ಎಂದು ಹೇಳುತ್ತಿವೆ. ಈ ಯಾವುದೇ ಸಮೀಕ್ಷಾ ವರದಿಯನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ’ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧುಬಂಗಾರಪ್ಪ ಮಾತನಾಡಿ ಬಿಜೆಪಿಯ 150 ಮಿಷನ್ ಈಗಾಗಲೇ ಕೆಟ್ಟು ಹೋಗಿದೆ. ಈ ಮಿಷನ್ ರಿಪೇರಿ ಮಾಡುವುದಕ್ಕೆ ಅಮಿತ್ ಶಾ, ನರೇಂದ್ರ ಮೋದಿ ಬಂದರೂ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ‘ಸಿಂದಗಿ ಹಾಗೂ ತುರುವೇಕೆರೆಯಲ್ಲಿ ಮಾತ್ರ ದೇವೇಗೌಡರ ಪುತ್ಥಳಿ ಇದೆ. ಇದು ಜೆಡಿಎಸ್ ಭದ್ರ ಕೋಟೆ’ ಎಂದರು.

ಮುಖಂಡರಾದ ವರಲಕ್ಷ್ಮಿ ಎಂ.ಟಿ.ಕೃಷ್ಣಪ್ಪ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್,  ‌ಶಾಸಕ ಕೆ.ಎಂ.ತಿಮ್ಮರಾಯಪ್ಪ, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಮುಖಂಡರಾದ ಬಿ.ಸಿ.ಗೌರಿಶಂಕರ್, ಲೋಕೇಶ್ವರ್, ಆಂಜಿನಪ್ಪ, ಪಟೇಲ್ ಶಿವರಾಮ್ ಇದ್ದರು.

ದುಡ್ಡು ಇಸ್ಕೊಳ್ಳಿ

ತುರುವೇಕರೆ ವಿಧಾನ ಸಭಾ ಕ್ಷೇತ್ರದಲ್ಲಿ ನನ್ನ ಚಿತ್ರ ಬಳಸಿಕೊಂಡು ನಾರಾಯಣಗೌಡ ಜೆಡಿಎಸ್ ಅಭ್ಯರ್ಥಿ ಎಂದು ಪ್ರಚಾರ ಪಡೆದರೆ ನಾನೇ ಖುದ್ದು ಪೊಲೀಸರಿಗೆ ದೂರು ನೀಡುತ್ತೇನೆ. ಆತನ ಹತ್ತಿರ ದುಡ್ಡು ಹೆಚ್ಚಾಗಿದ್ದರೆ ನೀವು ಇಸ್ಕೊಳ್ಳಿ. ಎಂ.ಟಿ.ಕೃಷ್ಣಪ್ಪನಿಗೆ ಮತ ನೀಡಿ. ಯಾರಿಗೂ ನಮ್ಮ ಅಭ್ಯರ್ಥಿಯ ಬಗ್ಗೆ ಸಂಶಯ ಬೇಡ’ ಎಂದು ‌ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಿಪಟೂರು ಜಿಲ್ಲಾ ಕೇಂದ್ರ; ಭರವಸೆ

ತಿಪಟೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು. ಸ್ತ್ರೀಶಕ್ತಿ ಸಂಘಗಳಿಗೆ ₹ 5 ಲಕ್ಷ ರೂವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು  ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಜೆಡಿಎಸ್ ತಿಪಟೂರು ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ತಿಪಟೂರನ್ನು ಜಿಲ್ಲಾ ಕೇಂದ್ರ ಮಾಡಲು ಪ್ರಯತ್ನಿಸಲಾಗುವುದು. ತೆಂಗಿನಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು.ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸಲು ಸೂಕ್ತ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಮುಖಂಡ ಲೋಕೇಶ್ವರ ಸ್ಥಳೀಯ ಸಮಸ್ಯೆಗಳನ್ನು ಕುಮಾರಸ್ವಾಮಿ ಗಮನಕ್ಕೆ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry