ಚಿಕ್ಕಬುದ್ಧಿಯವರ ದೊಡ್ಡ ಕೃಷಿ

7
ಹರೀಶ್‌ ಬಿ.ಎಸ್.

ಚಿಕ್ಕಬುದ್ಧಿಯವರ ದೊಡ್ಡ ಕೃಷಿ

Published:
Updated:
ಚಿಕ್ಕಬುದ್ಧಿಯವರ ದೊಡ್ಡ ಕೃಷಿ

ಹಸರು ಚಿಕ್ಕಬುದ್ಧಿ. ಚಿಕ್ಕವರಿದ್ದಾಗಿನಿಂದ ಕೃಷಿಯ ಬಗೆಗೆ ವಿಶೇಷ ಆಸಕ್ತಿ. ಬಂಡವಾಳದ ಜೊತೆ ಬುದ್ಧಿಯೂ ಸೇರಿ ಇವರೀಗ ಕೃಷಿಯಲ್ಲಿ ದೊಡ್ಡಬುದ್ಧಿಯಾಗಿದ್ದಾರೆ. ಹಿರಿಯ ಮಗ ಪರಶಿವ ಕೃಷಿಯಲ್ಲೇ ಪರವಶ. ಕಿರಿಯ ಮಗ ಪ್ರಶಾಂತನನ್ನು ಕೃಷಿ ಸ್ನಾತಕೋತ್ತರ ಪದವೀಧರನನ್ನಾಗಿ ಮಾಡಿದ ಸಂತೃಪ್ತಿ ಇವರದ್ದು. ಎಲ್ಲದಕ್ಕೂ ಮಿಗಿಲಾಗಿ ಪತ್ನಿ ಶಿವಮ್ಮ ಇವರ ಕೃಷಿ ಕೆಲಸಗಳಲ್ಲಿ ಸಮನಾಗಿ ತೊಡಗಿಸಿಕೊಂಡಿರುವುದು ಇವರಿಗೆ ಖುಷಿ. ಕೃಷಿಯಿಂದಾಗಿ ಇವರಿಗೆ ನೆಮ್ಮದಿ, ಗೌರವ, ಸಂತೃಪ್ತಿ, ಹಣ ಎಲ್ಲವೂ. ನಂಜನಗೂಡು ತಾಲ್ಲೂಕಿನ ಚಿನ್ನಂಬಳ್ಳಿಯಲ್ಲೇ ಇವರ ಕೃಷಿ ಕಾಯಕ.

ಆರ್ಥಿಕ ಯಶಸ್ಸಿಗೆ ಪ್ರಮುಖ ಕಾರಣ ತೋಟಗಾರಿಕೆ ಹಾಗೂ ರೇಷ್ಮೆ ಕೃಷಿ. ಇರುವ 20 ಎಕರೆಯೊಳಗೆ ಆರು ಎಕರೆಯಲ್ಲಿ ತೆಂಗು, ಎರಡು ಎಕರೆಯಲ್ಲಿ ಹಿಪ್ಪುನೇರಳೆಯಿದ್ದರೆ, ನಾಲ್ಕು ಎಕರೆಯಲ್ಲಿ ಹೆಬ್ಬೇವು ಬೆಳೆದುನಿಂತಿದೆ. ವರ್ಷಕ್ಕೆ 100 ಕೆ.ಜಿಯಷ್ಟು ಹಣ್ಣು ನೀಡುವ ಹತ್ತು ಸಪೋಟ ಗಿಡಗಳು, ತಲಾ ನಾಲ್ಕು ಸಾವಿರ ರೂಪಾಯಿಗೂ ಹೆಚ್ಚು ಆದಾಯ ತರುತ್ತಿರುವ ನಾಲ್ಕೇ ನಾಲ್ಕು ಹಲಸಿನ ಮರಗಳು, ಮನೆಮಂದಿಗೆ ನೆಂಟರಿಷ್ಟರಿಗೆ ಆದೀತೆಂದು ಎರಡೇ ಎರಡು ಸೀಬೆ ಗಿಡಗಳು.

ಮುಂದಾಲೋಚನೆಯಿಂದ ಹತ್ತು ವರ್ಷಗಳ ಹಿಂದೆಯೇ ಹಾಕಿರುವ 50 ತೇಗದ ಸಸಿಗಳು ಈಗ ಮರಗಳಾಗಿವೆ. ಹಾಲು-ಹೈನಿಗಾಗಿ ಒಂದೆರಡು ಹಸುಗಳು; ಟಿಲ್ಲರ್ ಕೈಕೊಟ್ಟರೆ ಕೆಲಸಕ್ಕೆ ಬರಲೆಂದು ಜೋಡೆತ್ತುಗಳಿವೆ. ಅವುಗಳ ಸಗಣಿಯಿಂದ ಅಲ್ಪ-ಸ್ವಲ್ಪ ಗೊಬ್ಬರವೂ ಆದೀತೆಂಬ ಸಣ್ಣ ಲೆಕ್ಕಾಚಾರ. ದೊಡ್ಡ ಗಂಟು ತಂದುಕೊಡಬಲ್ಲ ಬಾಳೆ-ಪಪ್ಪಾಯಗಳನ್ನು ಪ್ರತಿವರ್ಷ ಎರಡರಿಂದ ಮೂರು ಎಕರೆಯಲ್ಲಿ ಹೆಚ್ಚು ನಿಗಾವಹಿಸಿ ಪ್ರತ್ಯೇಕವಾಗಿ ಬೆಳೆಯುತ್ತಾರೆ.

ಸುಸ್ಥಿರತೆಗೆ ಕಾರಣ: ದೊಡ್ಡ ಹಿಡುವಳಿ ದೀರ್ಘಕಾಲದಲ್ಲಿ ಸುಸ್ಥಿರವಾಗಿರಬೇಕು ಎಂಬುದು ಚಿಕ್ಕಬುದ್ಧಿಯವರ ಸದಾಶಯ. ಒಂದೆರಡು ಬೆಳೆಗೆ ಜೋತು ಬೀಳದೆ ಬೆಳೆಗಳ ಆಯ್ಕೆಯಲ್ಲಿ ಜಾಣ್ಮೆ ಮೆರೆದಿದ್ದಾರೆ. ದೀರ್ಘಾವಧಿ ಬೆಳೆಗಳು, ಅವುಗಳ ಜೊತೆ ಅಂತರ ಬೆಳೆಗಳು, ಕಡಿಮೆ ನೀರಿನಲ್ಲೂ ನಿರ್ವಹಿಸಬಹುದಾದ ಹಿಪ್ಪುನೇರಳೆ, ಭೂಮಿಯ ಫಲವತ್ತತೆ ಹೆಚ್ಚಿಸಲು ಮೂರ್ನಾಲ್ಕು ವರ್ಷಗಳಿಗೊಮ್ಮೆ ಫಲವತ್ತಾದ ಕೆರೆಗೋಡು, ಪ್ರತಿವರ್ಷ ತಪ್ಪದೆಯೇ ಸೆಣಬು, ಚೆಂಬೆ, ಹುರಳಿ, ಅಲಸಂದೆ ಮುಂತಾದ ಹಸಿರೆಲೆ/ದ್ವಿದಳ ಧಾನ್ಯಗಳ ಬೆಳೆಗಳು.

ನೀರಿನ ಮಿತ ಹಾಗೂ ಬಳಕೆಯ ಕ್ಷಮತೆ ಹೆಚ್ಚಿಸಲು ಎಲ್ಲ ಬೆಳೆಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಬೆಳೆ ತ್ಯಾಜ್ಯಕ್ಕೆ ಅಪ್ಪಿತಪ್ಪಿಯೂ ಬೆಂಕಿಯಿಡದೆ ಅದನ್ನು ಒಟ್ಟಿಗೆ ಸೇರಿಸಿ ಗೊಬ್ಬರಮಾಡಿ ಮತ್ತೆ ಭೂಮಿಗೆ ಸೇರಿಸುತ್ತಾರೆ. ಮಳೆ ನೀರ ಹಿಡಿದಿಟ್ಟು ಅಂತರ್ಜಲ ಹೆಚ್ಚಾಗಲೆಂದು ಎರಡು ಕುಂಟೆಯಲ್ಲಿ ಮಾಡಿರುವ ಕೃಷಿಹೊಂಡವೂ ಇದೆ.

ಹತ್ತು ವರ್ಷಗಳ ಹಿಂದೆ ತಮ್ಮ ಹಳೆಯ ತೋಟದ ಆಯ್ದ ತಾಯಿಮರಗಳಿಂದ ಉತ್ತಮ ಬೀಜದ ಕಾಯಿಗಳಿಂದ ಉತ್ಕೃಷ್ಟ ಸಸಿ ತಯಾರಿಸಿ ಮೂರೆಕರೆಯಲ್ಲಿ ಸಾಲುಗಳ ನಡುವೆ 30 ಅಡಿ ಹಾಗೂ ಗಿಡಗಳೆರಡರ ನಡುವೆಯೂ ಅಷ್ಟೇ ಅಂತರ ಕೊಟ್ಟು, ಒಟ್ಟು 145 ತೆಂಗಿನ ಗಿಡಗಳನ್ನು ನಾಟಿ ಮಾಡಿದ್ದಾರೆ. ಕಳೆದೆರಡು ವರ್ಷಗಳಿಂದ ಈ ಗಿಡಗಳ ಸರಾಸರಿ ಇಳುವರಿ ಮರಕ್ಕೆ ಕನಿಷ್ಠ 200 ಕಾಯಿಗಳು. 300ಕ್ಕೂ ಹೆಚ್ಚು ಕಾಯಿ ಬಿಡುವ ಅನೇಕ ಮರಗಳಿವೆ ಎಂಬ ಹೆಮ್ಮೆ ಚಿಕ್ಕಬುದ್ಧಿಯವರಿಗೆ. ಕಾಯಿಯೊಂದು ಹತ್ತು-ಹನ್ನೆರಡು ರೂಪಾಯಿಗೆ ಮಾರಾಟವಾದರೂ ಈ ಮೂರೆಕರೆಯಲ್ಲಿ ಮೂರು ಲಕ್ಷ ರೂಪಾಯಿ ಆದಾಯಕ್ಕೆ ಮೋಸವಿಲ್ಲ.

ಬೆಳೆಗಳು ಬಳಸದೇ ಬಿಟ್ಟ ನೀರು-ಗೊಬ್ಬರ ತೆಂಗಿಗೆ ಸಿಗುವಂತೆ ವ್ಯವಸ್ಥೆ ರೂಪಿಸಿದ್ದಾರೆ ಈ ಕೃಷಿಕ. ನಾಲ್ಕು ವರ್ಷದ ಹಿಂದೆ ನೆಟ್ಟ 150 ಹೈಬ್ರೀಡ್ ತೆಂಗಿನ ಗಿಡಗಳು ಕಳೆದ ವರ್ಷವೇ ಗಿಡವೊಂದಕ್ಕೆ 200-250 ಎಳನೀರು ಕಾಯಿಗಳನ್ನು ನೀಡಿವೆ. ‘30 ಸಾವಿರ ಎಳನೀರು ಕಾಯಿಗಳು, ಹತ್ತು ರೂಪಾಯಿಗೆ ಒಂದರಂತೆ ಹೋದರೂ ಮೂರ ಲಕ್ಷ ರೂಪಾಯಿ ಆಗೋಲ್ವಾ’ ಎಂದು ಅವರು ಪ್ರಶ್ನಿಸುತ್ತಾರೆ.

ಕುಲಕಸುಬು ಕೈ ಹಿಡಿದಿದೆ: ಸಾಂಪ್ರದಾಯಿಕವಾಗಿ ಇವರ ಹಾಗೂ ಪಕ್ಕದ ಚಾಮರಾಜನಗರ ಜಿಲ್ಲೆಯ ಅದೆಷ್ಟೋ ಹಳ್ಳಿಯ ಕೃಷಿಕರ ಬದುಕು ಹಸನಾಗಿಸಿದ್ದ ಬೆಳೆ ರೇಷ್ಮೆ. ಬರುಬರುತ್ತಾ ನೀರಿನ ಸಮಸ್ಯೆಯಿಂದ ಬಹುತೇಕ ಜನ ಅದನ್ನು ಕೈಬಿಟ್ಟರು. ಏನೇ ಆದ್ರೂ ಇರುವ ನೀರಿನಲ್ಲೇ, ಹರಿಸೋದು ನಿಲ್ಲಿಸಿ, ಹನಿಸುವ ಮೂಲಕ ಇವರು ಹಿಪ್ಪು ನೇರಳೆಯನ್ನು ಬಿಡಲೇ ಇಲ್ಲ.

ಕಾರ್ಮಿಕರ ಅವಲಂಬನೆ ತಗ್ಗಿಸಲು 17 ವರ್ಷಗಳ ಹಿಂದೆಯೇ ರೆಂಬೆ ಪದ್ಧತಿ ಅಳವಡಿಸಿದ ಮೊದಲಿಗರು. ರೆಂಬೆ ಪದ್ಧತಿ, ಹನಿ ನೀರಾವರಿ, ಉತ್ತಮ ತಳಿಯ ಹಿಪ್ಪುನೇರಳೆ ಹಾಗೂ ರೇಷ್ಮೆ ತಳಿಗಳ ಅಳವಡಿಕೆ, ಕಳೆ ತೆಗೆಸಲು ಜನ ಸಿಗದಾದಾಗ ಬೆಳೆಗೆ ಇಲಾಖೆಯವರು ಸೂಚಿಸುವ ಜೋಡಿಸಾಲು ಪದ್ಧತಿ ಬಿಟ್ಟು ಸಾಲುಗಳ ನಡುವೆ ಐದು ಅಡಿ, ಗಿಡಗಳ ನಡುವೆ 2.5 ಅಡಿ ಅಂತರಕೊಟ್ಟು ಗಿಡ ನಾಟಿ ಮಾಡಿದ್ದಾರೆ.

ಬಹುಹಿಂದೆಯೇ ಹುಳು ಸಾಕಲು ಸುಸಜ್ಜಿತವಾದ 60 ಅಡಿ ಉದ್ದ, 21 ಅಡಿ ಅಗಲ ಹಾಗೂ 16 ಅಡಿ ಎತ್ತರದ ಮನೆಯನ್ನು ನಿರ್ಮಿಸಿಕೊಂಡು ಅದರ ಕೃಷಿಯನ್ನು ಬಿಡದೆ ಮಾಡುತ್ತಾ ಬಂದಿರುವುದು ಇವರ ಆಸಕ್ತಿ ತೋರಿಸುತ್ತದೆ. ಹಿಪ್ಪು ನೇರಳೆಗೆ ಬರುವ ಬಿಳಿ ಹೇನು, ಥ್ರಿಪ್ಸ್ ನಿರ್ವಹಣೆಗೆ ಡಿಡಿವಿಪಿ ಸಿಂಪಡಿಸಿದರೆ, ಅದರ ಸೊಪ್ಪನ್ನು ಹನ್ನೆರಡು ದಿನ ಹುಳುಗಳಿಗೆ ಹಾಕುವಂತಿಲ್ಲ ಎಂಬ ವೈಜ್ಞಾನಿಕ ಅಂಶವನ್ನು ಹೇಳುವಷ್ಟರ ಮಟ್ಟಿಗೆ ಬುದ್ಧಿವಂತರು. ವರ್ಷಕ್ಕೆ 60-65 ದಿನಗಳಲ್ಲಿ ಪ್ರತಿ ಬ್ಯಾಚ್ ಮುಗಿಯುವಂತಹ 300 ಮೊಟ್ಟೆಗಳ ಆರು ಬೆಳೆಗಳನ್ನು ಮಾಡುತ್ತಾರೆ. 300 ಮೊಟ್ಟೆಗೆ ಸರಾಸರಿ 250 ಕಿಲೋ ರೇಷ್ಮೆ ಗೂಡು ಪಡೆಯುತ್ತಿದ್ದಾರೆ. ಸದ್ಯದ ದರ ಕಿಲೋಗೆ 600 ಸಿಗುತ್ತಿದೆ. ಎರಡು ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಆದಾಯ. ಖರ್ಚು ಕಳೆದರೆ ಉಳಿಯುವುದು ₹75,000. ವರ್ಷಕ್ಕೆ ನಾಲ್ಕೂವರೆ ಲಕ್ಷ ರೂಪಾಯಿ ನಿವ್ವಳ ಲಾಭ.

‘ಯಾರೋ ದಲ್ಲಾಳಿಗೆ ಮನೆ ಬಾಗಿಲಿನಲ್ಲೇ ಮಾರೋ ಬದಲು ರಾಮನಗರದವರೆಗೆ ನಮ್ಮದೇ ಬೊಲೆರೋನಲ್ಲಿ ಹೋದ್ರೆ ಹೆಚ್ಚಿನ ಲಾಭ ಸಿಗುತ್ತೆ’ ಎನ್ನುತ್ತಾರೆ.

ನೀರಿಗಾಗಿ ನಾಲ್ಕು ಬೋರ್‌ವೆಲ್‌ಗಳಿವೆ. ಕರೆಂಟ್ ಆಗಾಗ ಕೈಕೊಡೋದ್ರಿಂದ, ಎಲ್ಲ ಬೋರ್‌ವೆಲ್‌ಗಳ ನೀರನ್ನೂ ನಾಲ್ಕು ಗುಂಟೆಯ ಸಂಗ್ರಹಣಾ ತೊಟ್ಟಿಗೆ ತುಂಬಿಸಿ, ಅಲ್ಲಿಂದ ಬೇಕಾದಾಗ ಬೇಕಾದಷ್ಟನ್ನು ಮಾತ್ರ ಆದ್ಯತೆಯ ಮೇರೆಗೆ ಹನಿ ನೀರಾವರಿ ವ್ಯವಸ್ಥೆಯ ಮೂಲಕ ಕೊಡುತ್ತಾರೆ. ಮಳೆ ನೀರಿನ ಸಂಗ್ರಹಣೆಗೆಂದೇ ಕೃಷಿಹೊಂಡವನ್ನೂ ಮಾಡಿಕೊಂಡಿದ್ದಾರೆ.

ಮಣ್ಣಿನ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿಯೇ ತಪ್ಪದೇ ಪ್ರತಿ ಎಕರೆಗೆ ವರ್ಷವೊಂದಕ್ಕೆ 8-10 ಟನ್ ಕೊಟ್ಟಿಗೆ ಗೊಬ್ಬರ ಕೊಡುತ್ತಾರೆ; ಜೊತೆಗೆ ಮೂರ್ನಾಲ್ಕು ವರ್ಷಗಳಿಗೊಮ್ಮೆ ಕೆರೆಗೋಡು, ದಿಢೀರ್ ದುಡ್ಡು ತಂದುಕೊಡಬಲ್ಲಂಥ ಕಲ್ಲಂಗಡಿ, ಮೆಣಸಿನಕಾಯಿ ಮೊದಲಾದ ಅಲ್ಪಾವಧಿ ಬೆಳೆಗಳ ನೀರಿನ ಅವಶ್ಯಕತೆ ತಗ್ಗಸಿಲು ಮಲ್ಚಿಂಗ್ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿದ್ದಾರೆ.

ಯಾವ ಬೆಳೆ? ಯಾವ ತಳಿ? ಯಾವಾಗ ಹಾಕೋದು? ಮಕ್ಕಳು, ಮಡದಿಯ ಜೊತೆ ಚರ್ಚಿಸಿದ ನಂತರವೇ ಮುಂದಿನ ಕೆಲಸ. ಎಲ್ಲರ ಪಾಲ್ಗೊಳ್ಳುವಿಕೆಯೂ ಇವರ ಯಶಸ್ಸಿನ ಗುಟ್ಟು. ಬಿ.ಎ. ಪದವೀಧರನಾದ ದೊಡ್ಡ ಮಗ ಪರಶಿವನಿಗೆ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ತುಡಿತ. ಅಪ್ಪನ ಕೃಷಿಗೆ ಅವನದೇ ಹೆಚ್ಚಿನ ಬಲ. ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಿರಿಯ ಮಗ ಪ್ರಶಾಂತ್ ದೂರದ ಚೆನ್ನೈನಲ್ಲಿ ಕೇಂದ್ರ ಸರ್ಕಾರಿ ನೌಕರ. ತಮ್ಮ ಬೆಳೆಗಳನ್ನು ಕಾಡುವ ಕೀಟ-ರೋಗಗಳನ್ನು ಖುದ್ದು ಪರೀಕ್ಷಿಸಿ ಸೂಕ್ತ ನಿರ್ವಹಣೆ ಸೂಚಿಸುವಷ್ಟು ಬುದ್ಧಿವಂತ.

ಕಾರ್ಮಿಕರ ಕೊರತೆ ನೀಗಿಸಲು...

ಟ್ರ್ಯಾಕ್ಟರ್‌ನ ಅನನುಕೂಲ ಅರಿತು ಎರಡು ಚಿಕ್ಕ ಟಿಲ್ಲರ್‌ಗಳನ್ನು ಇಟ್ಟುಕೊಂಡಿದ್ದಾರೆ. ಬಹುತೇಕ ಕೃಷಿ ಕೆಲಸಗಳು ಇವುಗಳಿಂದಲೇ. ಉಳುಮೆ, ಅಂತರ ಬೇಸಾಯ, ಕೆಲ ಬೀಜಗಳ ಬಿತ್ತನೆ... ಹೀಗೆ ಹತ್ತು ಹಲವು ಕೃಷಿ ಕೆಲಸಗಳನ್ನು ಟಿಲ್ಲರಿನಿಂದಲೇ ನಡೆಸುತ್ತಿದ್ದಾರೆ. ಕೃಷಿ ಒಳಸುರಿಗಳ ಹಾಗೂ ಕಟಾವಾದ ಉತ್ಪನ್ನ ಸಾಗಾಟಕ್ಕೆ ಅನುಕೂಲವಾಗಲೆಂದು ಬೊಲೆರೊ ಕ್ಯಾಂಪರ್ ಖರೀದಿಸಿದ್ದಾರೆ. ಬೆಳೆ ಮುಗಿದ ನಂತರ ಉಳಿಕೆಗಳನ್ನು ತುಂಡರಿಸಿ ಭೂಮಿಗೆ ವಾಪಸ್ ಸೇರಿಸುವ ಸುಲವಾಗಿಯೇ ಟಿಲ್ಲರ್ ಚಾಲಿತ ರೋಟೊವೇಟರ್ ಇದೆ. ಮಕ್ಕಳ, ಮನೆಯವರ ಓಡಾಟಕ್ಕೆ ಐ-10 ಕಾರು ತೆಗೆದುಕೊಂಡಿದ್ದಾರೆ. ಹತ್ತಿರದ ಓಡಾಟಕ್ಕೆ ಬುಲೆಟ್ ಕೂಡ ಇದೆಯೆನ್ನಿ.

ತೆಂಗು, ತೇಗ, ಹೆಬ್ಬೇವಿನ ಪ್ರದೇಶ ವಿಸ್ತರಣೆಯನ್ನು ವಿವೇಚನೆಯಿಂದಲೇ ಮಾಡಿದ್ದಾರೆ. ಸಹಕಾರಿ ಬ್ಯಾಂಕಿನಲ್ಲಿ ಬಹಳ ಹಿಂದೆ ತೆಗೆದುಕೊಂಡ ಸಾಲ, ಬಡ್ಡಿ ಸೇರಿಸಿ ಐದು ಲಕ್ಷ ಆಗಿದೆ. ‘ಎಲೆಕ್ಷನ್ ಟೈಂ ಅಲ್ವಾ ಸಾರ್, ಮನ್ನಾ ಏನಾದ್ರೂ ಆಗಹುದೆಂಬ ನಿರೀಕ್ಷೆಯಿದೆ’ ಎಂದು ತಮಾಷೆ ಮಾಡುವ ಅವರು, ‘ಅದಕ್ಕೆಲ್ಲಾ ಕಾಯೋದಿಲ್ಲ. ಭೂತಾಯಿ ಇಷ್ಟೊಂದು ಕೊಟ್ಟಿರೋದ್ರಿಂದ ತೀರಿಸಿಯೇ ಬಿಡುತ್ತೇನೆ’ ಎಂದು ಸಂತೃಪ್ತಿಯಿಂದ ಹೇಳುತ್ತಾರೆ. ಸಂಪರ್ಕ: 9945289430.

**

ಬಾಳೆಯಲ್ಲಿ ಜಾಕ್‌ಪಾಟ್

ಬಹುತೇಕ ಪ್ರತಿವರ್ಷ ಇವರು ಬಾಳೆಯನ್ನು ಬಿಡದೆಯೇ ಬೆಳೆಯುತ್ತಾರೆ. ಕಳೆದ ಸಲ ಎರಡೆಕರೆಯಲ್ಲಿ 1800 ಗಿಡ ಏಲಕ್ಕಿ ಬಾಳೆ ಬೆಳೆದಿದ್ದರು. ಅವರು ಬಳಸಿದ ಕೊಟ್ಟಿಗೆ ಗೊಬ್ಬರ, ಕೆರೆಗೋಡು ಕೇಳಿ ನಾನೂ ಅವಕ್ಕಾಗಿಬಿಟ್ಟೆ. ಎರಡೆಕರೆ ಬಾಳೆಗೆ 40 ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರ ಅಂದರೆ ಬರೋಬ್ಬರಿ 80 ಟನ್; ಅದರ ಖರ್ಚೇ ಬರೋಬ್ಬರಿ ಒಂದು ಲಕ್ಷ ರೂಪಾಯಿ. ಜೊತೆಗೆ ₹ 40 ಸಾವಿರ ಖರ್ಚು ಮಾಡಿ ಹೊಡೆಸಿದ 200 ಲೋಡ್ ಕೆರೆಗೋಡು.

ಹನಿ ನೀರಾವರಿ ತಪ್ಪಿಸುವ ಮಾತೇ ಇಲ್ಲ. ಪರಿಣಾಮ ಅದ್ಭುತ. 36 ಟನ್ ಇಳುವರಿ. ಗೊನೆಯೊಂದರ ಸರಾಸರಿ ತೂಕ 20 ಕಿಲೋ. ಬಹುತೇಕ ಕಟಾವಾದದ್ದು ಜುಲೈ-ಅಕ್ಟೋಬರ್ ನಡುವೆಯಾದ್ದರಿಂದ ಸಾಲುಸಾಲು ಹಬ್ಬಗಳು. ಮಾರಿದ ದರ ಕಿಲೋಗೆ ಸರಾಸರಿ ₹60. ಸಿಕ್ಕ ನಿವ್ವಳ ಲಾಭ ಹದಿನೆಂಟು ಲಕ್ಷಕ್ಕೂ ಹೆಚ್ಚು. ‘ಮರೆತೇ ಹೋಗಿತ್ತು, ಬಾಳೆಯೊಳಗೆ ಅಂತರ ಬೆಳೆಯಾಗಿ ಮಂಗ್ಳೂರ್ ಸೌತೆ ಹಾಕಿದ್ದೆ. ಎರಡು ಎಕರೆಗೆ ಇಳುವರಿ 20 ಟನ್ ಸಿಕ್ಕಿ ಒಟ್ಟು ಆದಾಯ ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು’ ಅಂತಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry