ರಾಜೀವ್‌ ಚಂದ್ರಶೇಖರ್‌ ಕನ್ನಡದವರೆ: ಯಡಿಯೂರಪ್ಪ

ಭಾನುವಾರ, ಮಾರ್ಚ್ 24, 2019
31 °C

ರಾಜೀವ್‌ ಚಂದ್ರಶೇಖರ್‌ ಕನ್ನಡದವರೆ: ಯಡಿಯೂರಪ್ಪ

Published:
Updated:
ರಾಜೀವ್‌ ಚಂದ್ರಶೇಖರ್‌ ಕನ್ನಡದವರೆ: ಯಡಿಯೂರಪ್ಪ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 23ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಲ್‌. ಹನುಮಂತಯ್ಯ, ಸಯ್ಯದ್‍ ನಾಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದ ಸೋಮವಾರ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ರಾಜ್ಯಸಭೆ ಚುನಾವಣಾ ಅಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿಗೆ ಉಮೇದುವಾರಿಕೆ ಸಲ್ಲಿಸಿದರು. ಈಗಾಗಲೇ ನಾಮಪತ್ರ ಸಲ್ಲಿಸಿರುವ ಜೆಡಿಎಸ್‌ ಅಭ್ಯರ್ಥಿ ಬಿ.ಎಂ. ಫಾರೂಕ್‌ ಕೂಡಾ ಮತ್ತೊಂದು ಸೆಟ್‌ ನಾಮಪತ್ರ ಸಲ್ಲಿಸಿದರು. ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದೆ.

‘ಪಕ್ಷ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಹಲವು ವರ್ಷಗಳಿಂದ ಕರ್ನಾಟಕದಲ್ಲೇ ನೆಲೆಸಿದ್ದಾರೆ. ಹೀಗಾಗಿ ಅವರು ಕನ್ನಡದವರೆ. ಕನ್ನಡಪರ ವಿಚಾರಗಳಲ್ಲಿ ಹೋರಾಟ ನಡೆಸಿದವರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ರಾಜೀವ್ ಚಂದ್ರಶೇಖರ್ 12 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಬೆಂಗಳೂರು ನಗರಕ್ಕೆ ಸಂಬಂಧಿಸಿದ ಹಲವು ಜನಪರ ವಿಚಾರಗಳಲ್ಲಿ ಹೋರಾಟ ನಡೆಸಿದ್ದಾರೆ. ಕೆರೆ ಸಂರಕ್ಷಣೆ, ಉಕ್ಕಿನ ಸೇತುವೆ ಸೇರಿದಂತೆ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ’ ಎಂದರು.

‘ಈ ಹಿಂದೆ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಈಗ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ’ ಎಂದರು.

‘ಕಾಂಗ್ರೆಸ್ ಮುಕ್ತ ಕರ್ನಾಟಕ, ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ನನ್ನ ಉದ್ದೇಶ. ಈ ಕಾರಣಕ್ಕೆ ಬಿಜೆಪಿ ಜತೆ ಕೈಜೋಡಿಸಿದ್ದೇನೆ’ ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

ಮೂರನೇ ಅಭ್ಯರ್ಥಿ ಗೆಲುವು ಖಚಿತ– ಪರಮೇಶ್ವರ ವಿಶ್ವಾಸ

‘ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿ ಜೆ.ಸಿ. ಚಂದ್ರಶೇಖರ್ ಗೆಲುವಿಗೆ ಅಗತ್ಯವಾದ ಮತಗಳು ನಮ್ಮಲ್ಲಿವೆ. ಹೀಗಾಗಿ ಅವರು ಗೆಲುವು ಖಚಿತ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಮೂವರು ಅಭ್ಯರ್ಥಿಗಳು ಹೊಸಬರಾದರೂ ಉತ್ಸಾಹಿಗಳಾಗಿದ್ದಾರೆ. ಹೈಕಮಾಂಡ್ ಈ ಮೂವರನ್ನು ಆಯ್ಕೆ ಮಾಡಿದೆ’ ಎಂದರು.

‘ನಾಲ್ಕನೇ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಆ ಪಕ್ಷದ ಯಾವುದೇ ನಾಯಕರು ತಮ್ಮ ಜತೆ ಮಾತುಕತೆ ನಡೆಸಿಲ್ಲ. ಮೈತ್ರಿ ಬಗ್ಗೆ ಜೆಡಿಎಸ್ ಮಾತನಾಡಿದ್ದರೆ ನಾವು ಹೈಕಮಾಂಡ್ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಿದ್ದೆವು’ ಎಂದು ಸ್ಪಷ್ಟಪಡಿಸಿದರು.

‘ಜೆಡಿಎಸ್‌ನ 7 ಬಂಡಾಯ ಶಾಸಕರು ಶೀಘ್ರದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಅವರು ಈ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿಗೆ ಮತ ಹಾಕಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry