ಸಿಬಿಐ ಅಭಿಪ್ರಾಯ ಕೇಳಿದ ಹೈಕೋರ್ಟ್

7

ಸಿಬಿಐ ಅಭಿಪ್ರಾಯ ಕೇಳಿದ ಹೈಕೋರ್ಟ್

Published:
Updated:
ಸಿಬಿಐ ಅಭಿಪ್ರಾಯ ಕೇಳಿದ ಹೈಕೋರ್ಟ್

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರ್ತಿ ಚಿದಂಬರಂ ಅವರ ಜಾಮೀನು ಅರ್ಜಿ ಕುರಿತು ಸಿಬಿಐಯಿಂದ ದೆಹಲಿ ಹೈಕೋರ್ಟ್‌ ಪ್ರತಿಕ್ರಿಯೆ ಕೇಳಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಪಿ. ಗರ್ಗ್‌, ಇದೇ 16ರ ಒಳಗಾಗಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದ್ದಾರೆ.

ಇದಕ್ಕೂ ಮೊದಲು ನಡೆದ ಬೆಳವಣಿಗೆಯೊಂದರಲ್ಲಿ ಕಾರ್ತಿ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕಾಗಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಇಂದರ್‌ಮೀತ್‌ ಕೌರ್‌ ಅವರು ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದರು.

ಅರ್ಜಿಯ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಅವರಿಗೆ ಮನವಿ ಮಾಡಿದರು. ಹಾಗಾಗಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಗರ್ಗ್‌ ಪೀಠಕ್ಕೆ ವರ್ಗಾಯಿಸಲಾಯಿತು.

ವೃತ್ತಿಯಲ್ಲಿ ಹಿರಿಯ ವಕೀಲರಾ

ಗಿರುವ ಕಾರ್ತಿ ಅಪ್ಪ ಪಿ.ಚಿದಂಬರಂ ಮತ್ತು ಅಮ್ಮ ನಳಿನಿ ಚಿದಂಬರಂ ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು.

ವಿಶೇಷ ನ್ಯಾಯಾಲಯವು ಕಾರ್ತಿ ಅವರನ್ನು ಮಾರ್ಚ್‌ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೋಮವಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಅವರ ವಕೀಲರು ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಲೆಕ್ಕಪರಿಶೋಧಕನಿಗೆ ಜಾಮೀನು: ಕಾರ್ತಿ ಅವರ ಲೆಕ್ಕಪರಿಶೋಧಕ ಎಸ್‌. ಭಾಸ್ಕರರಾಮನ್‌ ಅವರಿಗೆ ವಿಶೇಷ ನ್ಯಾಯಾಲಯವು ಇದೇ ಪ್ರಕರಣದಲ್ಲಿ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ. ಕಾರ್ತಿ ಅವರಿಗೆ ನೆರವುವಾಗಿದ್ದಾರೆ ಎಂಬ ಆರೋಪ ಬಿಟ್ಟರೆ ಬೇರೆ ಯಾವ ನಿರ್ದಿಷ್ಟ ಆರೋಪವೂ ಭಾಸ್ಕರ ರಾಮನ್‌ ಅವರ ವಿರುದ್ಧ ಇಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಜಾರಿ ನಿರ್ದೇಶನಾಲಯ ಫೆ.16ರಂದು ಭಾಸ್ಕರರಾಮನ್‌ ಅವರನ್ನು ಬಂಧಿಸಿತ್ತು.

ಮಾರ್ಚ್‌ 15ರಂದು ವಿಚಾರಣೆ

ಮಾರ್ಚ್‌ 20ರವರೆಗೆ ಕಾರ್ತಿ ಚಿದಂಬರಂ ಅವರನ್ನು ಬಂಧಿಸದಂತೆ ದೆಹಲಿ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ (ಮಾರ್ಚ್‌ 15ರಂದು) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳುವಂತೆ ಕೋರಿ ಜಾರಿ ನಿರ್ದೇಶನಾಲಯ ಮಾಡಿಕೊಂಡ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಪುರಸ್ಕರಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾರ್ತಿ ಅವರನ್ನು ಮಾರ್ಚ್‌ 20ರವರೆಗೆ ಬಂಧಿಸದಂತೆ ದೆಹಲಿ ಹೈಕೋರ್ಟ್‌ ಇದೇ ಮಾರ್ಚ್‌ 9ರಂದು ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತ್ತು.

ಆಸ್ತಿ ಮುಟ್ಟುಗೋಲು

ನವದೆಹಲಿ: ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಮತ್ತು ಅವರ ಒಡೆತನದ ಅಡ್ವಾಂಟೇಜ್‌ ಸ್ಟ್ರಾಟೆಜಿಕ್‌ ಕನ್ಸಲ್ಟಿಂಗ್‌ ಕಂಪನಿಯ (ಎಎಸ್‌ಪಿಎಲ್‌) ₹1.16 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಆರು ತಿಂಗಳ ಹಿಂದೆಯೇ (2017ರ ಸೆಪ್ಟೆಂಬರ್‌ 25 ರಂದು) ಜಾರಿ ನಿರ್ದೇಶನಾಲಯ ಈ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.

ಕಾರ್ತಿ ಬ್ಯಾಂಕ್‌ ಖಾತೆಯಲ್ಲಿದ್ದ ₹90 ಲಕ್ಷ ನಗದು, ಎಎಸ್‌ಪಿಎಲ್‌ ಹೆಸರಲ್ಲಿದ್ದ ₹26 ಲಕ್ಷ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಆಸ್ತಿ ಮುಟ್ಟುಗೋಲು ಭಯದಿಂದ ಕಾರ್ತಿ ಈಗಾಗಲೇ ಹರಿಯಾಣದ ಗುರುಗ್ರಾಮದಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಅದರೊಂದಿಗೆ ಅನೇಕ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ.

ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಕಾರ್ತಿ ಅವರು ಏರ್‌ಸೆಲ್‌ –ಮ್ಯಾಕ್ಸಿಸ್‌ ಕಂಪೆನಿಯಿಂದ ಹಣ ಪಡೆದಿದ್ದರು ಎಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಇತ್ತೀಚೆಗೆ ಚಿದಂಬರಂ ಅವರ ನಿವಾಸದಲ್ಲಿ ಶೋಧವನ್ನೂ ನಡೆಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry