ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ : ಶೋಭಾ ಕರಂದ್ಲಾಜೆ

7

ಪ್ರಾಮಾಣಿಕ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ : ಶೋಭಾ ಕರಂದ್ಲಾಜೆ

Published:
Updated:

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಒಂದೋ ಭ್ರಷ್ಟಾಚಾರಕ್ಕೆ ನೆರವಾಗಬೇಕು, ಇಲ್ಲವೆಂದರೆ ಸಾಯಬೇಕು ಎಂಬಂತಹ ಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದರು.

ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಹಸುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಕಬೀರ್ ಮೇಲೆ ಗುಂಡು ಹಾರಿಸಿದ ನವೀನ್ ನಾಯಕ್‌ ಅವರನ್ನು ವರ್ಗಾವಣೆ ಶಿಕ್ಷೆಗೆ ಗುರಿ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ನ್ಯಾಯಯುತವಾಗಿ ಕೆಲಸ ಮಾಡಿದವರಿಗೆಲ್ಲ ವರ್ಗಾವಣೆ ಶಿಕ್ಷೆ ನೀಡಿದ್ದೇ ಈ ಸರ್ಕಾರದ ಸಾಧನೆ ಎಂದು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಟೀಕಿಸಿದರು.

ಐಎಎಸ್ ಅಧಿಕಾರಿಗಳಾದ ಸಿ. ಶಿಖಾ, ರಶ್ಮಿ ಮಹೇಶ್, ಕೆಎಎಸ್ ಅಧಿಕಾರಿ ಶಿಲ್ಪಾ ನಾಗ್‌ ಅವರ ಮೇಲೆ ಹಲ್ಲೆ ನಡೆಯಿತು. ಅವರ ರಕ್ಷಣೆಗೆ ಸರ್ಕಾರ ನಿಲ್ಲಲಿಲ್ಲ. ನಿವೃತ್ತಿಗೆ ಎರಡು ತಿಂಗಳು ಬಾಕಿಯಿದ್ದಾಗ ಪ್ರಾಮಾಣಿಕ ಐಎಎಸ್‌ ಅಧಿಕಾರಿ ವಿಜಯಕುಮಾರ್‌ ಅವರನ್ನು ಕಡ್ಡಾಯ ವರ್ಗಾವಣೆ ಮೇಲೆ ಕಳುಹಿಸಲಾಯಿತು. ಇವತ್ತಿಗೂ ಅವರಿಗೆ ಪೂರ್ಣ ಪ್ರಮಾಣದ ನಿವೃತ್ತಿ ವೇತನ ‍‍ಸಿಗುತ್ತಿಲ್ಲ. ₹2,500 ಕೋಟಿ ಹಗರಣವನ್ನು ಬಯಲಿಗೆಳೆದ ಕೆಎಎಸ್ ಅಧಿಕಾರಿ ಕೆ. ಮಥಾಯಿ ಅವರನ್ನು ಆರು ತಿಂಗಳಲ್ಲಿ ನಾಲ್ಕು ಬಾರಿ ವರ್ಗಾವಣೆ ಮಾಡಲಾಯಿತು. ಪ್ರಾಮಾಣಿಕರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಇನಾಮು ಇದು ಎಂದೂ ಅವರು ವ್ಯಂಗ್ಯವಾಡಿದರು.

ಐಎಎಸ್‌ ಅಧಿಕಾರಿಗಳಾದ ಡಿ.ಕೆ. ರವಿ, ಅನುರಾಗ್ ತಿವಾರಿ, ಟಿ.ನರಸೀಪುರ ತಹಶೀಲ್ದಾರ್ ಶಂಕರಪ್ಪ ನಿಗೂಢವಾಗಿ ಮೃತಪಟ್ಟರು. ಡಿವೈಎಸ್‌ಪಿಗಳಾದ ಎಂ.ಕೆ. ಗಣಪತಿ, ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆಲ್ಲ ಸರ್ಕಾರವೇ ಕಾರಣ ಎಂದು ದೂರಿದರು.

ರಕ್ಷಣೆ ನೀಡಬೇಕು ಎಂದು ಕೋರಿ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮಾ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕಿರುಕುಳಕ್ಕೆ ಶರ್ಮಾ ಪತ್ರ ಕೈಗನ್ನಡಿ. ಐಪಿಎಸ್ ಅಧಿಕಾರಿಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದರೆ ಇನ್ನು ಯಾರಿಗೆ ರಕ್ಷಣೆ ಸಿಗಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಶಶಿಕಲಾಗೆ ವಿಶೇಷ ಸೌಲಭ್ಯ ಏಕೆ:

ಜೈಲುಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಏಕೆ ಎಂಬ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದೂ ಶೋಭಾ ಆಗ್ರಹಿಸಿದರು.

ಜೈಲು ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದ ವಿನಯಕುಮಾರ್‌ ಸಮಿತಿ ಮುಂದೆ ಹಾಜರಾಗಿದ್ದ ಅಂದಿನ ಎಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್‌, ಮುಖ್ಯಮಂತ್ರಿ ಸೂಚನೆ ಮೇರೆಗೆ ಶಶಿಕಲಾಗೆ ವಿಶೇಷ ಸೌಲಭ್ಯ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣ ತಮಗೆ ತಿರುಗುಬಾಣವಾಗುವ ಆತಂಕಕ್ಕೆ ಒಳಗಾದ ಮುಖ್ಯಮಂತ್ರಿ, ರಾವ್ ವಿರುದ್ಧ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶಿಸಿದ್ದಾರೆ. ಶಶಿಕಲಾಗೆ ವಿಶೇಷ ಸೌಲಭ್ಯ ನೀಡಿದ್ದರಿಂದಾಗಿ ಮುಖ್ಯಮಂತ್ರಿಗೆ ಸಿಕ್ಕಿದ ಲಾಭವೇನು ಎಂಬುದು ಬಹಿರಂಗವಾಗಲಿ ಎಂದು ಒತ್ತಾಯಿಸಿದರು.

‘ಐಎಎಸ್ ಅಧಿಕಾರಿ ರಶ್ಮಿ ನಾಪತ್ತೆ’

ಐಎಎಸ್ ಅಧಿಕಾರಿ ರಶ್ಮಿ ಮಹೇಶ್ 10 ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಅವರನ್ನು ಸಂಪರ್ಕಿಸುವ ಯತ್ನ ಕೂಡ ಫಲ ನೀಡಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆದ ಹಗರಣವನ್ನು ಬಯಲಿಗೆ ಎಳೆದಿದ್ದ ರಶ್ಮಿ ಮೇಲೆ ಹಲ್ಲೆ ನಡೆದಿತ್ತು. ಆ ಬಳಿಕ ಅವರನ್ನು ಪಿಯು ಮಂಡಳಿಗೆ ವರ್ಗಾವಣೆ ಮಾಡಲಾಗಿತ್ತು. ಅದಾದ ಬಳಿಕ ಅವರು ಎಲ್ಲಿ ಹೋದರು ಎಂಬುದು ಗೊತ್ತಿಲ್ಲ. ಐಎಎಸ್ ಅಧಿಕಾರಿಗಳ ಸಂಪರ್ಕದಲ್ಲೂ ಅವರು ಇಲ್ಲ. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪಬ್ ದಾಳಿ: ಪ್ರತಿಕ್ರಿಯೆಗೆ ನಕಾರ

ಮಂಗಳೂರಿನ ಪಬ್‌ ದಾಳಿ ಪ್ರಕರಣದ ಆರೋಪಿಗಳು ಖುಲಾಸೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಲು ಶೋಭಾ ಕರಂದ್ಲಾಜೆ ನಿರಾಕರಿಸಿದರು.

‘ಬಿಜೆಪಿ ಸರ್ಕಾರ ಇದ್ದಾಗ ಪಬ್ ದಾಳಿ ನಡೆದಿತ್ತು. ಮೊಕದ್ದಮೆ ದಾಖಲಿಸುವಾಗ ದುರ್ಬಲ ಸೆಕ್ಷನ್‌ಗಳನ್ನು ಹಾಕಿದ್ದರಿಂದಾಗಿ ಅವರೆಲ್ಲರೂ ಮುಕ್ತರಾಗಿದ್ದಾರೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ‘ನಾವು ಯಾರ ಪರ ಅಥವಾ ವಿರುದ್ಧವಲ್ಲ. ಕಾನೂನು ಪ್ರಕಾರ ಕೈಗೊಳ್ಳಲಾಗಿದೆ. ಎಲ್ಲರೂ ಐದಾರು ವರ್ಷ ಜೈಲುವಾಸ ಅನುಭವಿಸಿದ್ದಾರೆ’ ಎಂದು ಅವರು ಹೇಳಿದರು.

‘ಆರೋಪಿಗಳು ಖುಲಾಸೆಯಾಗಿರುವುದನ್ನು ಖಂಡಿಸಿ, ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸುತ್ತೀರಾ’ ಎಂಬ ‍ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry