‘ವಿಧಾನಸೌಧದಲ್ಲಿನ ಮೂರ್ಖರಿಂದಲೇ ಪರಿಸರ ನಾಶ’

7

‘ವಿಧಾನಸೌಧದಲ್ಲಿನ ಮೂರ್ಖರಿಂದಲೇ ಪರಿಸರ ನಾಶ’

Published:
Updated:
‘ವಿಧಾನಸೌಧದಲ್ಲಿನ ಮೂರ್ಖರಿಂದಲೇ ಪರಿಸರ ನಾಶ’

ಬೆಂಗಳೂರು: 'ವಿಜ್ಞಾನವೇ ಗೊತ್ತಿಲ್ಲದ ಸಾಕಷ್ಟು ಮೂರ್ಖರು ವಿಧಾನಸೌಧದಲ್ಲಿ ಕುಳಿತು, ರಾಜ್ಯ ಆಳುತ್ತಿರುವುದರಿಂದಲೇ  ಪರಿಸರ ನಾಶವಾಗುತ್ತಿದೆ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ಕಿಡಿಕಾರಿದರು.

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಅಂತರಕಾಲೇಜು ವಿಜ್ಞಾನ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ವಿಶ್ವದಲ್ಲಿ ಎಲ್ಲೂ ನಡೆಯದಂತಹ (ನೀರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವ, ಕೆರೆಯಲ್ಲಿ ನೊರೆ ಉಕ್ಕಿ ಹರಿಯುವ) ಘಟನೆಗಳು ಇಲ್ಲಿ ಘಟಿಸುತ್ತಿವೆ. ಇಲ್ಲಿರುವ ಜಲಮೂಲಗಳನ್ನು ಉಳಿಸಿಕೊಳ್ಳುವ ಬದಲು ಪಶ್ಚಿಮಘಟ್ಟ, ಗಂಗಾ, ಯಮುನಾ... ಹೀಗೆ ಬೇರೆ ಕಡೆಗಳಿಂದಲೇ ನೀರು ತರಲು ಯೋಚಿಸುತ್ತಾರೆ. ರಷ್ಯಾದಲ್ಲಿ ನೀರು ಹೆಚ್ಚಿದೆ ಎಂದು ತಿಳಿದರೆ, ಬಹುಶಃ ಅಲ್ಲಿಗೂ ಪೈಪ್‌ಲೈನ್‌ ಹಾಕಿಸುವಂತಹ ತಲೆಯಿಲ್ಲದ ಸಚಿವರು ನಮ್ಮೊಡನಿದ್ದಾರೆ’ ಎಂದು ವ್ಯಂಗ್ಯವಾಡಿದರು.

(ಪ್ರೊ.ಟಿ.ವಿ.ರಾಮಚಂದ್ರ)

‘ಹಿಂದೆ ಶಾಲೆಬಿಟ್ಟವರೆಲ್ಲ, ಈಗ ಮಂತ್ರಿಗಿರಿ ಅನುಭವಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಸಚಿವರು ಮಾತ್ರ ವಿಜ್ಞಾನವನ್ನು ಅರ್ಥೈಸಿಕೊಂಡು ಕೆಲಸ ಮಾಡುತ್ತಿದ್ದಾರೆ. ವಿಜ್ಞಾನದ ವಿದ್ಯಾರ್ಥಿಗಳು ಹಾಗೂ ಪರಿಸರದ ಬಗ್ಗೆ ಸಂವೇದನೆ ಹೊಂದಿರುವವರು ಅಧಿಕಾರಕ್ಕೆ ಬಂದರೆ ಮಾತ್ರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಬೆಂಗಳೂರಿನ ಜನ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಜನಕ್ಕೆ ಈ ನಗರದ ಮೇಲಿರುವ ಕಾಳಜಿಯೂ ಇಲ್ಲಿನವರಿಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮರಗಳನ್ನು ಕಡಿದು ಐಐಎಸ್ಸಿ ಕ್ಯಾಂಪಸ್‌ ಬಳಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಯಾವ ಕಮಂಗಿ ನಿರ್ಧರಿಸಿದನೋ ಗೊತ್ತಿಲ್ಲ. ಮರ ಕಡಿಯುವುದನ್ನು ಇಂದಿರಾಗಾಂಧಿ ತೀವ್ರವಾಗಿ ವಿರೋಧಿಸುತ್ತಿದ್ದರು. ಅವರ ಬಗ್ಗೆ ತಿಳಿಯದ ಮೂರ್ಖರು ಮರಗಳನ್ನು ಕಡಿದು ಕ್ಯಾಂಟೀನ್‌ ನಿರ್ಮಿಸಿ, ಅದಕ್ಕೆ ಅವರ ಹೆಸರನ್ನೇ ಇಟ್ಟು ಅವಮಾನಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘70ರ ದಶಕದಲ್ಲಿ ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 14 ರಿಂದ 16 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತಿತ್ತು. ಆದರೆ ಈಗ 38 ರಿಂದ 40 ಡಿಗ್ರಿ ಆಗಿಬಿಟ್ಟಿದೆ. ಆಗ ಡಿಸೆಂಬರ್‌ನಲ್ಲಿ ಒಮ್ಮೆಮ್ಮೆ ಕನಿಷ್ಠ ಉಷ್ಣಾಂಶ 0 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತಿತ್ತಂತೆ. ಇಲ್ಲಿ ಸೇಬನ್ನೂ ಬೆಳೆಯುತ್ತಿದ್ದರಂತೆ! ಈಗ ಸೇಬಿನ ಬದಲಿಗೆ ಕಸ ಬೆಳೆಯುತ್ತಿದ್ದೇವೆ’ ಎಂದು ಹೇಳಿದರು.

‘ನಮ್ಮ ಮನೆಯ ಕಸವನ್ನು ಪಕ್ಕದ ಮನೆಯ ಎದುರಿಗೆ ಇಟ್ಟು ಸಮಸ್ಯೆ ಪರಿಹರಿಸಿಕೊಳ್ಳುವ ಇಲ್ಲಿನ ಜನರ ಬುದ್ಧಿಯನ್ನೇ ಜಲಮಂಡಳಿ ಅನುಸರಿಸುತ್ತಿದೆ. ಒಳಚರಂಡಿ ನೀರನ್ನು ಮರುಬಳಕೆ ಮಾಡುವ ಬದಲು, ಅದರ ಮಾರ್ಗವನ್ನು ಬೇರೆಡೆಗೆ ತಿರುಗಿಸುವ ಕೆಲಸವನ್ನು ಮಾಡುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry