ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ

ಸೋಮವಾರ, ಮಾರ್ಚ್ 25, 2019
31 °C
ಸಂವಾದದಲ್ಲಿ ಯುನಿಸೆಫ್‌ ಪ್ರಾದೇಶಿಕ ಸಂಯೋಜಕ ಕೆ.ರಾಘವೇಂದ್ರ ಆತಂಕ

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ

Published:
Updated:
ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ

ಮೈಸೂರು: ದೇಶದಲ್ಲಿ ಹೆಣ್ಣುಮಕ್ಕಳಿಗಿಂತ ಹೆಚ್ಚಾಗಿ ಗಂಡುಮಕ್ಕಳ ಮೇಲೆಯೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ಯುನಿಸೆಫ್‌ ಪ್ರಾದೇಶಿಕ ಸಂಯೋಜಕ ಕೆ.ರಾಘವೇಂದ್ರ ಭಟ್‌ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಇಲ್ಲಿ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ಜವಾಬ್ದಾರಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಮಕ್ಕಳ ನ್ಯಾಯ ಕಾಯ್ದೆ–2015’ ಹಾಗೂ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ– 2012ರಲ್ಲಿ ಮಾಧ್ಯಮದವರಿಗೆ ನಿಗದಿಪಡಿಸಿರುವ ಪಾತ್ರ ಮತ್ತು ಜವಾಬ್ದಾರಿ’ ಕುರಿತು ವಿಷಯ ಮಂಡಿಸಿದರು.

ಕೇಂದ್ರ ಸರ್ಕಾರದ 2007ರ ವರದಿ ಪ್ರಕಾರ ಶೇ 47ರಷ್ಟು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದರೆ, ಶೇ 53ರಷ್ಟು ಗಂಡುಮಕ್ಕಳ ಮೇಲೆ ನಡೆದಿದೆ. 2015–16ರ ವರದಿ ಪ್ರಕಾರ ರಾಜ್ಯದಲ್ಲಿ ಶೇ 34ರಷ್ಟು ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ. ಮೈಸೂರಲ್ಲಿ ಶೇ 23.1ರಷ್ಟು ಬಾಲ್ಯವಿವಾಹ ಮಾಡಿಸಿದ ಕುಟುಂಬಗಳು ಸಿಗುತ್ತವೆ ಎಂದು ಅಂಕಿಅಂಶ ಸಮೇತ ವಿವರಿಸಿದರು.

ಬಾಲಕಾರ್ಮಿಕರು, ಬಾಲ್ಯವಿವಾಹ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಭಾವಚಿತ್ರ, ಹೆಸರು, ವಿಳಾಸ, ಕುಟುಂಬ ವಿವರ, ನೆರೆಹೊರೆಯವರ ವಿವರ ಹಾಗೂ ಊರಿನ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಕಾಣೆಯಾದ ಮಕ್ಕಳ ಚಿತ್ರಗಳನ್ನು ಮಾತ್ರ ಹಾಕಲು ಅವಕಾಶವಿದೆ. 1989ರಲ್ಲಿ ವಿಶ್ವಸಂಸ್ಥೆ ಹೊರಡಿಸಿದ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸಮಗ್ರವಾಗಿ ತಿಳಿಸುತ್ತದೆ. ಈ ಬಗ್ಗೆ ಮಾಧ್ಯಮದವರು ತಿಳಿದುಕೊಂಡು ಸುದ್ದಿ ಮಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್‌ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮಾಧ್ಯಮಗಳಿಂದಾಗಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಹೈಕೋರ್ಟ್‌ವರೆಗೂ ಕೆಲ ಪ್ರಕರಣಗಳು ಹೋಗಿವೆ, ಅಲ್ಲಿಯೂ ನಮ್ಮ ಆದೇಶವನ್ನು ಎತ್ತಿಹಿಡಿದ ಉದಾಹರಣೆಗಳಿವೆ’ ಎಂದು ಹೇಳಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಮಕ್ಕಳ ವರದಿ ಮಾಡುವಾಗ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗುತ್ತದೆ. ಕೊಂಚ ಎಡವಿದರೂ ಆ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ. ದೃಶ್ಯ ಮಾಧ್ಯಮಗಳು ಕಾನೂನು ಅರಿತು ಸುದ್ದಿ ಪ್ರಸಾರ ಮಾಡುವುದು ಒಳಿತು ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಮೈಸೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಚ್‌.ಟಿ. ಕಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ, ಆಪ್ಸಾ ಸಂಸ್ಥೆ  ಸಂಯೋಜಕ ಲಕ್ಷ್ಮಿಪ್ರಸನ್ನ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಇದ್ದರು.

ಮಹಿಳೆಯರ ರಕ್ಷಣೆಗೆ ತಂಡ

ಮೈಸೂರು:
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಸೇರಿದಂತೆ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಹಾಗೂ ರಕ್ಷಣೆ ನೀಡಲು ರಕ್ಷಾ ಹೆಸರಿನ ತಂಡ ರಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ತಿಳಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಜೊತೆಯಾಗಿ ಕೆಲಸ ಮಾಡಲಿದ್ದೇವೆ. ಗ್ರಾಮ ಮಟ್ಟದಲ್ಲೇ ಸ್ತ್ರೀಶಕ್ತಿ ಸಂಘಗಳು ತಂಡ ಕಟ್ಟಿಕೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಲಿವೆ. ಸದಸ್ಯರು ಪಿಂಕ್‌ ಕೋಟ್‌ ಧರಿಸಿ, ಮಹಿಳೆಯರಿಗೆ ನೈತಿಕ ಬೆಂಬಲ ನೀಡುತ್ತಾರೆ. ಅತ್ಯಾಚಾರ, ವರದಕ್ಷಿಣೆ ಕಿರುಕುಳ ಸೇರಿದಂತೆ ಇತರೆ ದೌರ್ಜನ್ಯ ಕಂಡುಬಂದಲ್ಲಿ ಪ್ರಕರಣ ದಾಖಲಿಸುತ್ತಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry