ಗ್ರಾಹಕರಲ್ಲೇ ಹಣ ವರ್ಗಾಯಿಸಿ ಗಳಿಕೆ!

7

ಗ್ರಾಹಕರಲ್ಲೇ ಹಣ ವರ್ಗಾಯಿಸಿ ಗಳಿಕೆ!

Published:
Updated:

ಬೆಂಗಳೂರು: ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ಗ್ರಾಹಕರಿಗೇ ಕೊಟ್ಟು ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ’ ನಿರ್ದೇಶಕ ರಾಘವೇಂದ್ರ ಶ್ರೀನಾಥ್‌, ದುಡ್ಡು ಗಳಿಸುತ್ತಿದ್ದ ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಪ್ರಕರಣ ಸಂಬಂಧ ರಾಘವೇಂದ್ರನನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಮಳಿಗೆಯಲ್ಲಿ ಆರೋಪಿ 2008ರಲ್ಲಿ ಈ ಕಂಪನಿ ಆರಂಭಿಸಿದ್ದ. ಅಂದಿನಿಂದಲೇ ಆತ ಏಜೆಂಟರ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಹಣ ಸಂಗ್ರಹಿಸುತ್ತಿದ್ದ. ಆರಂಭದಲ್ಲಿ ಉತ್ತಮ ಲಾಭಾಂಶವನ್ನು ಗ್ರಾಹಕರಿಗೆ ನೀಡುತ್ತಿದ್ದ. ಎರಡು ವರ್ಷಗಳಿಂದ ಹಣವನ್ನು ವಾಪಸ್‌ ಕೊಟ್ಟಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

ವಂಚನೆಯ ಹಣ ಎಲ್ಲಿದೆ ಎಂಬುದರ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ರಾಘವೇಂದ್ರ, ‘ನಾನು ಸಂಗ್ರಹಿಸಿದ್ದ ಎಲ್ಲ ಹಣವನ್ನೂ ಗ್ರಾಹಕರಿಗೆ ಹಂಚಿದ್ದೇನೆ. ನನ್ನ ಬಳಿ ಈಗ ಹಣವಿಲ್ಲ’ ಎಂದಿದ್ದಾನೆ.

‘ಕಂಪನಿ ಆರಂಭಿಸಿದ ದಿನದಿಂದ ಏಜೆಂಟರಾದ ಕೆ.ಸಿ.ನಾಗರಾಜ್‌, ಸೂತ್ರಂ ಸುರೇಶ್‌, ನರಸಿಂಹಮೂರ್ತಿ ಹಾಗೂ ಪ್ರಹ್ಲಾದ್‌ ಜತೆಯಲ್ಲಿದ್ದಾರೆ. ಚೆಕ್‌ ಮೂಲಕ ಗ್ರಾಹಕರ ಹಣವನ್ನು ನೇರವಾಗಿ ಕಂಪನಿಯ ಖಾತೆಗೆ ಜಮೆ ಮಾಡಿಸುತ್ತಿದ್ದರು. ಅವರಿಗೆ ಕಮಿಷನ್‌ ಸಹ ಕೊಡುತ್ತಿದ್ದೆ.

‘2007ರಲ್ಲಿ 15 ಮಂದಿಯಿಂದ ಸುಮಾರು ₹20 ಲಕ್ಷ ಸಂಗ್ರಹವಾಗಿತ್ತು. ಅದನ್ನೇ ಈರುಳ್ಳಿ ಹಾಗೂ ಮೆಣಸಿನಕಾಯಿ ವ್ಯಾಪಾರಕ್ಕೆ ಬಳಸಿಕೊಂಡಿದ್ದೆ. 2009ರಲ್ಲಿ ಮತ್ತೆ 20 ಮಂದಿ ಹಣ ಹೂಡಿಕೆ ಮಾಡಿದ್ದರು. ಅವರಿಂದ ಸಂಗ್ರಹಿಸಿದ್ದ ಹಣವನ್ನೇ ಹಳೆ ವರ್ಷದ ಗ್ರಾಹಕರಿಗ ಕೊಟ್ಟು ನಂಬಿಕೆ ಬರುವಂತೆ ಮಾಡಿದ್ದೆ. ಹೀಗೆ ಪ್ರತಿವರ್ಷವೂ ಗ್ರಾಹಕರಲ್ಲೇ ಹಣ ವರ್ಗಾಯಿಸಲು ಆರಂಭಿಸಿದ್ದೆ’ ಎಂದು ರಾಘವೇಂದ್ರ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ನೋಟು ರದ್ದತಿಯಿಂದ ಹೊಡೆತ: 2016ರ ಅಕ್ಟೋಬರ್‌ವರೆಗೂ ಕಂಪನಿಯಿಂದ ಯಾರಿಗೂ ಮೋಸ ಆಗಿರಲಿಲ್ಲ. ಅದೇ ವರ್ಷದ ನವೆಂಬರ್‌ನಲ್ಲಿ ನೋಟು ರದ್ದಾಗಿದ್ದರಿಂದ ಕಂಪನಿಯ ವ್ಯವಹಾರಕ್ಕೆ ಹೊಡೆತ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಬಳಿ ಇದ್ದ ಹಳೆ ನೋಟುಗಳನ್ನು ತೆಗೆದುಕೊಳ್ಳಲು ಗ್ರಾಹಕರು ನಿರಾಕರಿಸುತ್ತಿದ್ದರು. ನೋಟು ಬದಲಾವಣೆ ಮಾಡಿ ಕೊಡುವುದಾಗಿ ಆರೋಪಿ ಹೇಳಿದ್ದ. ಆದರೆ, ಹಣ ಮರುಳಿಸಲು ಆತನಿಂದ ಸಾಧ್ಯವಾಗಿರಲಿಲ್ಲ. ಅಂದಿನಿಂದಲೇ ಗ್ರಾಹಕರು ಹಣಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ವಂಚನೆ ವಿಷಯ ಈಗ ಬಯಲಾಯಿತು.

ಆದರೆ, ಆರೋಪಿ ಬಳಿ ಇದ್ದ ಹಳೆ ನೋಟುಗಳ ಮೊತ್ತವೆಷ್ಟು ಹಾಗೂ ಅವುಗಳನ್ನು ಆರೋಪಿ ಎಲ್ಲಿಟ್ಟಿದ್ದಾನೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಹೇಳಿದರು.

ಕಪ್ಪು ಹಣ ಹೂಡಿಕೆ: ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದವರ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸುತ್ತಿದ್ದಾರೆ. 680 ಮಂದಿ ₹400 ಕೋಟಿಯಷ್ಟು ಹೂಡಿಕೆ ಮಾಡಿದ್ದ ಮಾಹಿತಿ ಇದುವರೆಗೂ ಲಭ್ಯವಾಗಿದೆ.

‘ಗಣ್ಯ ವ್ಯಕ್ತಿಗಳು ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರ ಹೆಸರುಗಳನ್ನು ಬಂಧಿತ ಏಜೆಂಟರೇ ಬಾಯ್ಬಿಟ್ಟಿದ್ದಾರೆ. ಆದರೆ, ಅವರದ್ದು ಕಪ್ಪು ಹಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿ, ಅವರಲ್ಲಿ ಯಾರೊಬ್ಬರೂ ಹಣ ಹೂಡಿಕೆ ಬಗ್ಗೆ ವಿಚಾರಿಸುತ್ತಿಲ್ಲ. ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಕ್ರಿಕೆಟಿಗ ರಾಹುಲ್ ದ್ರಾವಿಡ್, ಬ್ಯಾಡ್ಮಿಂಟನ್‌ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಪ್ರಕಾಶ್ ಪಡುಕೋಣೆ ಅವರ ಹಣವಿದೆ ಎಂದು ಆರೋಪಿ ರಾಘವೇಂದ್ರ ಹೇಳಿಕೊಂಡಿದ್ದಾನೆ. ಆ ಮೂವರು, ತಮ್ಮ ಸಂಬಂಧಿಕರ ಹೆಸರಿನಲ್ಲಿ ಹಣ ಹೂಡಿಕೆ ಮಾಡಿರುವ ಅನುಮಾನವಿದೆ. ಹೀಗಾಗಿ ಪ್ರತಿಯೊಬ್ಬ ಹೂಡಿಕೆದಾರರ ಪೂರ್ವಪರದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ’ ಎಂದರು.

‘ಕಂಪನಿಯ ನಿರ್ದೆಶಕಿಯೂ ಆಗಿದ್ದ ರಾಘವೇಂದ್ರನ ಪತ್ನಿ ಸುನೀತಾ ಆಚಾರ್ಯ ಇದುವರೆಗೂ ಪತ್ತೆಯಾಗಿಲ್ಲ. ಆಕೆ ಸಿಕ್ಕರೆ, ವಂಚನೆಯ ಹಣದ ಬಗ್ಗೆ ಏನಾದರೂ ಮಾಹಿತಿ ಸಿಗಬಹುದು’ ಎಂದರು.

ಆರೋಪಿಗಳು ಪುನಃ ಪೊಲೀಸ್‌ ವಶಕ್ಕೆ

ಬಂಧಿತ ಆರೋಪಿಗಳ ಕಸ್ಟಡಿಗೆ ಅವಧಿ ಮುಕ್ತಾಯವಾಗಿದ್ದರಿಂದ ಪೊಲೀಸರು ಅವರನ್ನು ನಗರದ 4ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿದರು.

‘ಪ್ರಕರಣದಲ್ಲಿ ವಂಚಿತರ ಸಂಖ್ಯೆ ಹೆಚ್ಚಿದೆ. ಪ್ರತಿಯೊಬ್ಬರಿಂದಲೂ ಮಾಹಿತಿ ಪಡೆಯಬೇಕಿದೆ. ಜತೆಗೆ, ಆರೋಪಿಗಳ ಹಣದ ಬಗ್ಗೆ ಇದುವರೆಗೂ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಹೀಗಾಗಿ ವಿಚಾರಣೆಗಾಗಿ ಅವರನ್ನು ಪುನಃ ವಶಕ್ಕೆ ನೀಡಬೇಕು’ ಎಂದು ಬನಶಂಕರಿ ಪೊಲೀಸರು ನ್ಯಾಯಾಲಯವನ್ನು ಕೋರಿದರು.

ಆರೋಪಿಗಳನ್ನು ಮಾರ್ಚ್‌ 16ರವರೆಗೆ ಪೊಲೀಸರ ವಶಕ್ಕೆ ನೀಡಿತು.

130 ಮಂದಿ ಮಾಹಿತಿ

ತಮಗಾದ ವಂಚನೆ ಬಗ್ಗೆ ಬುಧವಾರ ಸಂಜೆವರೆಗೆ 130 ಮಂದಿ ದಾಖಲೆ ಸಮೇತ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಗರದ ಹಲವು ಠಾಣೆಗಳಿಗೆ 15 ಮಂದಿ ಮಾಹಿತಿ ನೀಡಿದ್ದಾರೆ.

ಷೇರು ಮಾರುಕಟ್ಟೆ; ದಾಖಲೆ ಅಲಭ್ಯ

‘ಗ್ರಾಹಕರಿಂದ ಸಂಗ್ರಹಿಸಿದ್ದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಆರೋಪಿಗಳು ನೀಡಿರುವ ಹೇಳಿಕೆ ಬಗ್ಗೆಯೇ ಅನುಮಾನ ಹುಟ್ಟಿಕೊಂಡಿದೆ’ ಎಂದು ಪೊಲೀಸರು ಹೇಳಿದರು.

‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾಗಿ ಆರೋಪಿಗಳು ಗ್ರಾಹಕರನ್ನು ನಂಬಿಸಿದ್ದರು. ಆದರೆ, ಹಣವನ್ನು ಅಲ್ಲೆಲ್ಲೂ ಹೂಡಿಕೆ ಮಾಡದಿರುವುದು ತನಿಖೆಯಿಂದ ಗೊತ್ತಾಗಿದೆ.’

‘ಮಲೇಷ್ಯಾ ಕಂಪನಿಯೊಂದರ ಪ್ರತಿನಿಧಿಗಳ ಮೂಲಕ ಹಣ ಹೂಡಿಕೆ ಮಾಡಿಸಿದ್ದೆ ಎಂದು ಆರೋಪಿ ಹೇಳುತ್ತಿದ್ದಾನೆ. ಆ ಕಂಪನಿ ಯಾವುದೆಂದು ಕೇಳಿದರೆ ಹೇಳುತ್ತಿಲ್ಲ. ವಿಳಾಸವನ್ನೂ ನೀಡುತ್ತಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry