ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರ್ಶನಿಕರ ಸಮನ್ವಯದ ಸಂಸ್ಕೃತಿ ಅಗತ್ಯ

ತುಮಕೂರು ವಿಶ್ವವಿದ್ಯಾನಿಲಯದಲ್ಲಿ 6 ದಾರ್ಶನಿಕರ ಅಧ್ಯಯನ ಪೀಠ ಉದ್ಘಾಟನೆ; ಎಚ್.ಎಸ್. ಶಿವಪ್ರಕಾಶ್‌ ಅಭಿಮತ
Last Updated 15 ಮಾರ್ಚ್ 2018, 7:42 IST
ಅಕ್ಷರ ಗಾತ್ರ

ತುಮಕೂರು: ವಿಶ್ವಕ್ಕೆ ಈಗ ವಿಚ್ಛಿದ್ರಕಾರಿ ಶಕ್ತಿಗಳು ಅಪಾಯವಾಗಿ ನಿಂತಿವೆ. ಬೇರೊಬ್ಬರ ಮನೆಗೆ ಬೆಂಕಿ ಇಟ್ಟು ಅದರಲ್ಲಿ ರೊಟ್ಟಿ ಬೇಯಿಸಿಕೊಳ್ಳುದು ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಸಮನ್ವಯದ ಸಂಸ್ಕೃತಿ ಅಗತ್ಯವಾಗಿದೆ ಎಂದು ಲೇಖಕ  ಎಚ್.ಎಸ್. ಶಿವಪ್ರಕಾಶ್‌ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಗೌತಮ ಬುದ್ಧ ಅಧ್ಯಯನ ಪೀಠ, ಬಸವೇಶ್ವರ, ಸಂತ ಶಿಶುನಾಳ ಶರೀಫ, ಸ್ವಾಮಿ ವಿವೇಕಾನಂದ, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ನಾಡಪ್ರಭು ಕೆಂಪೇಗೌಡ ಸೇರಿದಂತೆ 6 ಅಧ್ಯಯನ ಪೀಠಗಳನ್ನು ಉದ್ಘಾಟಿಸಿ ಮಾತನಾಡಿದರು.

’ಜನರನ್ನು ಒಗ್ಗೂಡಿಸುವುದೇ ದಾರ್ಶನಿಕರ ಗುರಿಯಾಗಿತ್ತು. ಒಡಕು ಕಾಳಾಗಿದ್ದ ಜಗತ್ತನ್ನು ಇಡಿ ಕಾಳನ್ನಾಗಿ ಮಾಡಿದ ಮಹಾತ್ಮರು ನಮ್ಮ ದಾರ್ಶನಿಕರು. ಸಮನ್ವಯ ಸಂಸ್ಕೃತಿಯು ನಮ್ಮ ಭಾರತೀಯ ಸಂಸ್ಕೃತಿಯ ಹೂರಣ ಮತ್ತು ಜಗತ್ತಿನ ಸಂಸ್ಕೃತಿಯ ಮಹಾಪ್ರಾಣವಾಗಿದೆ’ ಎಂದು ತಿಳಿಸಿದರು.

’ವಿಶ್ವವಿದ್ಯಾಲಯದಲ್ಲಿ 6 ದಾರ್ಶನಿಕರ ಅಧ್ಯಯನ ಪೀಠ ಸ್ಥಾಪನೆ ಮಾಡುತ್ತಿರುವುದು ಶ್ಲಾಘನೀಯ. ಜಗತ್ತಿನ ಚರಿತ್ರೆಯಲ್ಲಿ ಮಾನವ ಹಿತ, ಸಮುದಾಯದ ಹಿತಕ್ಕೆ ಶ್ರಮಿಸಿದವರನ್ನು ನೆನೆಯುವುದು ನಮ್ಮ ಕೆಲಸ’ ಎಂದು ನುಡಿದರು.

’ವಿಚ್ಛಿದ್ರಕಾರಿ ಶಕ್ತಿಗಳು ವಿಶ್ವವನ್ನು ಯಾವಾಗ ಯಾವಾಗ ಒಡೆಯಲು ಪ್ರಯತ್ನಿಸಿದವೊ ಆಗ ದಾರ್ಶನಿಕರ ಸಮನ್ವಯತೆ ಮತ್ತು ಸಮಗ್ರೀಕರಣ ಶಕ್ತಿಯು ಪುನರುಜ್ಜೀವನಗೊಳಿಸಿದೆ’ ಎಂದು ಹೇಳಿದರು.

ಬುದ್ಧ, ಬಸವ, ವಿವೇಕಾನಂದ, ಶರೀಫ– ಹೀಗೆ ಇವರೆಲ್ಲ ಬೇರೇ ಬೇರೆ ಕಾಲಘಟ್ಟದಲ್ಲಿ ಬದುಕಿದ್ದರೂ, ಚಾರಿತ್ರಿಕ ಸಂದರ್ಭ ಬೇರೆ ಆಗಿದ್ದರೂ, ಬೇರೆ ಬೇರೇ ರೀತಿಯಲ್ಲಿ ಸಿದ್ಧಾಂತ ರೂಪಿಸಿ ರೂಢಿಗೆ ತಂದಿದ್ದರೂ ಅವರೆಲ್ಲರ ಗುರಿ ಜಗತ್ತಿಗೆ ಒಳಿತು ಮಾಡುವುದೇ ಆಗಿತ್ತು ಎಂದರು.

ಸಾಹಿತಿ ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ‘ಸರ್ಕಾರಗಳು ಚುನಾವಣೆ ಸಮೀಪಸುತ್ತಿದ್ದಂತೆಯೇ ಜಾತಿ, ಮತಗಳನ್ನು ಸಂತೋಷಪಡಿಸಲು ವಿಶ್ವವಿದ್ಯಾಲಯಗಳಲ್ಲಿ ಪೀಠ ಸ್ಥಾಪನೆ ಘೋಷಣೆ ಮಾಡುತ್ತವೆ. ಹತ್ತಿಪ್ಪತ್ತು ಲಕ್ಷ ಕೊಟ್ಟು ಕೈ ತೊಳೆದುಕೊಳ್ಳುತ್ತವೆ. ಪೀಠ ಸ್ಥಾಪನೆ ಬಳಿಕ ಅವುಗಳು ನಡೆಯುವುದೇ ಕಷ್ಟವಾಗಿದೆ. ಅನೇಕ ವಿವಿಗಳಲ್ಲಿ ಕಾರ್ಯಕ್ರಮಗಳನ್ನೂ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

’ಕಾಯಕ ಜೀವಿಗಳನ್ನು ಒಟ್ಟಿಗೆ ಸೇರಿಸಿ ನಿಜಧರ್ಮ ಪಂಥ ಕಟ್ಟಿದ ಬಸವಣ್ಣನವರ ಬಗ್ಗೆ, ಭಾವೈಕ್ಯತೆಯ ಸಂದೇಶ ಸಾರಿದ ಶರೀಫರ ಬಗ್ಗೆ, ಹಿಂದು ಧರ್ಮದಲ್ಲಿನ ದಾರಿದ್ರ್ಯ ಮತ್ತು ಅಜ್ಞಾನ ಹೋಗಲಾಡಿಸಲು ಪ್ರಯತ್ನಿಸಿದ ಸ್ವಾಮಿ ವಿವೇಕಾನಂದರ ಬಗ್ಗೆ, ರೈತ ಚಳವಳಿಗೆ ವೈಜ್ಞಾನಿಕ, ವೈಚಾರಿಕ ಸಮಾಜವಾದಿ ಚಳವಳಿ ಸ್ಪರ್ಶ ನೀಡಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕುರಿತು, 8 ದುರ್ಗಗಳನ್ನು ಕಟ್ಟಿ ಪ್ರಜೆಗಳ ಹಿತ ಕಾಪಾಡಿದ ನಾಡ ಪ್ರಭು ಕೆಂಪೇಗೌಡರ ಬಗ್ಗೆ ಅರ್ಥಪೂರ್ಣ ಅಧ್ಯಯನಗಳು ನಡೆಯಬೇಕಾಗಿದೆ’ ಎಂದು ಹೇಳಿದರು.

ಕುಲಸಚಿವ ಪ್ರೊ.ಟಿ.ಎಸ್.ಗುಂಜಾಳ ಮಾತನಾಡಿ, 6 ಅಧ್ಯಯನ ಪೀಠಗಳಿಗೆ ತಲಾ ₹ 50 ಲಕ್ಷ ಇಡುಗಂಟು ಇಡಲಾಗಿದೆ. ವಿಶ್ವವಿದ್ಯಾಲಯವೇ ತನ್ನ ಆಂತರಿಕ ಸಂಪನ್ಮೂಲದಲ್ಲಿಯೇ ಇವುಗಳನ್ನು ಸ್ಥಾಪಿಸಿದೆ. ಇದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆಯನ್ನೂ ಸಹ ಪಡೆಯಲಾಗಿದೆ ಎಂದು ಹೇಳಿದರು.

’ಬರೀ ಕಾರ್ಯಕ್ರಮ ಆಯೋಜನೆಗೆ ಮಾತ್ರ ಸೀಮಿತವಾಗಬಾರದು. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಗಳು ಮಾಡುವ ರೀತಿಯಲ್ಲಿ ಈ ಪೀಠಗಳು ಕೆಲಸ ಮಾಡಬೇಕು ಎಂಬುದು ಆಶಯವಾಗಿದೆ’ ಎಂದು ಹೇಳಿದರು.

ಕುಲಪತಿ ಪ್ರೊ.ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ಪೀಠಗಳ ನಿರ್ದೇಶಕರಾದ ಪ್ರೊ.ಬಿ.ರಮೇಶ್, ಪ್ರೊ.ಡಿ.ವಿ.ಪರಮಶಿವಮೂರ್ತಿ, ಪ್ರೊ.ಮೀನಾಕ್ಷಿ ಖಂಡಿಮಠ, ಪ್ರೊ.ಎಂ.ಕೊಟ್ರೇಶ್, ಡಾ.ಡಿ.ಸುರೇಶ್, ಸಿಂಡಿಕೇಟ್ ಸದಸ್ಯ ಬಿ.ಹರ್ಷ ವೇದಿಕೆಯಲ್ಲಿದ್ದರು.

ಬೇಕಾಬಿಟ್ಟಿ ಪೀಠಗಳ ಸ್ಥಾಪನೆ
‘ನಮ್ಮ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಈಚೆಗೆ ಅನುದಾನ ಸಿಕ್ಕ ತಕ್ಷಣ ಬೇಕಾಬಿಟ್ಟಿ ಪೀಠ ಸ್ಥಾಪನೆ ಮಾಡಲಾಗುತ್ತಿದೆ’ ಎಂದು ಶಿವಪ್ರಕಾಶ್ ಹೇಳಿದರು.

’ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹೀಗೆ ಆಗಿದೆ. ಅಲ್ಲಿ 12 ಪೀಠಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ, ಅಲ್ಲೇನೂ ಕೆಲಸಗಳು ಆಗುತ್ತಿಲ್ಲ’ ಎಂದು ತಿಳಿಸಿದರು.

ಉದ್ಯಮವಾದ ರಾಜಕಾರಣ
’ಆಸೆಯೇ ದುಃಖಕ್ಕೆ ಮೂಲ ಎಂದು ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಹೇಳಿದ್ದರೂ ಜಗತ್ತು ಹಣದ ಹಿಂದೆ ಓಡುತ್ತಿದೆ. ರಾಜಕಾರಣ ಈಗ ಸೇವೆಯಾಗಿ ಉಳಿದಿಲ್ಲ. ಬದಲಾಗಿ ಒಂದು ಉದ್ಯಮವಾಗಿ ಪರಿವರ್ತನೆಯಾಗಿದೆ’ ಎಂದು ಹಿ.ಚಿ ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

’ಇದಕ್ಕೆ ತಾಜಾ ಉದಾಹರಣೆ ರಾಜ್ಯಸಭೆಗೆ ವಿವಿಧ ಪಕ್ಷಗಳು ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಪಟ್ಟಿ. ನಿಜವಾದ ಪ್ರಜಾಪ್ರಭುತ್ವ ಉಳಿದಿಲ್ಲ’ ಎಂದು ಹೇಳಿದರು.

ಶೇ 75 ರಷ್ಟು ಪ್ರಾಧ್ಯಾಪಕರೇ ಗೈರು
ನಮ್ಮ ವಿವಿಯು 6 ಅಧ್ಯಯನ ಪೀಠ ಉದ್ಘಾಟನೆ ಕಾರ್ಯಕ್ರಮ ಮಾಡುತ್ತಿದ್ದರೂ ಇಲ್ಲಿನ ಶೇ 75 ಪ್ರಾಧ್ಯಾಪಕರೇ ಗೈರಾಗಿದ್ದಾರೆ. ಪ್ರಾಧ್ಯಾಪಕರೇ ಹೀಗಾದರೆ ಏನು ಗತಿ? ಎಂದು ಕುಲಸಚಿವ ಪ್ರೊ.ಗುಂಜಾಳ್ ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ವಾಟ್ಸ್‌ ಆ್ಯಪ್‌ನಲ್ಲಿ ಮುಳುಗಿದ್ದರೆ, ಕೆಲವರು ಹೊರ ಹೋಗಿದ್ದಾರೆ. ಬರೀ ವಿದ್ಯಾರ್ಥಿನಿಯರು ಮಾತ್ರ ಇದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT