ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ

ಆರೋಗ್ಯ ಶಿಬಿರದಲ್ಲಿ ನ್ಯಾಯಾಧೀಶ ವಸ್ತ್ರಮಠ
Last Updated 15 ಮಾರ್ಚ್ 2018, 8:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಕ್ಷಿದಾರರಿಗಾಗಿ ಕೋರ್ಟು, ಕಚೇರಿಗಳಲ್ಲಿ ದಿನನಿತ್ಯ ಶ್ರಮಿಸುವ ವಕೀಲರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಸಲಹೆ ನೀಡಿದರು.

ಇಲ್ಲಿನ ವಕೀಲರ ಭವನದಲ್ಲಿ ಬುಧವಾರ ಎಚ್ಐವಿ ಸೋಂಕು, ವೈದ್ಯಕೀಯ ತಪಾಸಣೆ ಹಾಗೂ ಅಂಚೆ ಜೀವವಿಮೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ಆರೋಗ್ಯ ಕಾಪಾಡಿಕೊಳ್ಳಿ’ ಎಂದರು.

ಜೀವನಶೈಲಿಯಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವವರೂ ಹೆಚ್ಚಾಗಿದ್ದಾರೆ. ಇದಕ್ಕೆ ವಕೀಲರೂ ಹೊರತಾಗಿಲ್ಲ. ವೃತ್ತಿಜೀವನದ ಒತ್ತಡದಿಂದಾಗಿ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೇ ಇತ್ತೀಚೆಗೆ ಒಂದಿಬ್ಬರು ವಕೀಲರು ಮೃತಪಟ್ಟಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದರು.

‘ವಕೀಲರು ವೃತ್ತಿಗಾಗಿಯೇ ಸಾಕಷ್ಟು ಸಮಯ ಮೀಸಲಿಡುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಂದರ್ಭ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂಚೆ ಇಲಾಖೆಯ ಜೀವ ವಿಮೆ ಸೌಲಭ್ಯ ಪಡೆದುಕೊಳ್ಳುವುದನ್ನು ಮರೆಯಬಾರದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದು ನಿಮ್ಮ ಗಮನದಲ್ಲಿರಲಿ’ ಎಂದು ಸಲಹೆ ನೀಡಿದರು.

ವಕೀಲರಿಗೆ ವೈದ್ಯಕೀಯ ತಪಾಸಣೆ ಒದಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಕನಿಷ್ಠ ₹ 2,700 ಶುಲ್ಕವಿದೆ. ಶಿಬಿರದಲ್ಲಿ ಆರೋಗ್ಯ ತಪಾಸಣೆಗೆ ಕೇವಲ ₹ 1,000 ಶುಲ್ಕ ಪಡೆಯಲಾಗುತ್ತಿದೆ ಎಂದರು.

ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಾಲಯದಲ್ಲಿ ಕುಟುಂಬ ಕಲ್ಯಾಣ ಸಮಿತಿ ಆರಂಭಿಸಲಾಗಿದೆ. ದಂಪತಿ ನಡುವೆ ಸಮಸ್ಯೆಗಳು ಉಂಟಾದರೆ ಸಮಿತಿಯ ನೆರವು ಪಡೆಯಬಹುದು. ದಂಪತಿಯ ಜೊತೆ ಚರ್ಚಿಸಿ, ಪರಿಹಾರ ನೀಡಲಾಗುವುದು. ಆದ್ದರಿಂದ ಸಮಸ್ಯೆ ಎದುರಾದ ಕೂಡಲೆ ಸಮಿತಿಯನ್ನು ಸಂಪರ್ಕಿಸಬೇಕು. ಇದಕ್ಕೆ ಮೊದಲೇ ಪೊಲೀಸ್ ಠಾಣೆಗೆ ಹೋಗುವುದು ಸರಿಯಲ್ಲ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ, ‘ಎಚ್‌ಐವಿ–ಏಡ್ಸ್‌ ಮಾರಕ ರೋಗವಾಗಿದ್ದು, ಈ ಸೋಂಕು ಹರಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ವಕೀಲರೂ ಎಚ್‌ಐವಿ ಕುರಿತು ಪೂರ್ಣ ಮಾಹಿತಿ ಪಡೆಯಬೇಕು’ ಎಂದು ಹೇಳಿದರು.

ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ ಶೇಖ್ ಜಾಕೀರ್ ಹುಸೇನ್ ವಿಶೇಷ ಉಪನ್ಯಾಸ ನೀಡಿದರು. ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಬಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಬಸವರಾಜ ಎಸ್. ಚೇಗರೆಡ್ಡಿ, ಡಿ. ವೀರಣ್ಣ, ಅಂಚೆ ಇಲಾಖೆಯ ಶಂಕರಪ್ಪ, ಡಾ.ಎಲ್. ಫಾಲಾಕ್ಷಯ್ಯ, ಡಾ. ರೂಪಾಶ್ರೀ ಇದ್ದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಕೆ. ವೀರಭದ್ರಪ್ಪ ಸ್ವಾಗತಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಅಂಚೆ ಇಲಾಖೆ, ಬಸವೇಶ್ವರ ಆಸ್ಪತ್ರೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಆರೋಗ್ಯ ಹದಗೆಡದಿರಲಿ’
ಆಸ್ತಿಗಿಂತ ಆರೋಗ್ಯ ಮುಖ್ಯ. ಅದು ಚೆನ್ನಾಗಿದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಆರೋಗ್ಯ ಇಲ್ಲದಿದ್ದರೆ ಬದುಕೇ ನರಕವಾಗುತ್ತದೆ. ಎಷ್ಟೇ ಆಸ್ತಿಪಾಸಿ ಇದ್ದರೂ ಅದನ್ನು ಅನುಭವಿಸಲು ಆಗುವುದಿಲ್ಲ. ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುವ ಬದಲು ಆರೋಗ್ಯ ಹದಗೆಡದಂತೆ ಎಚ್ಚರ ವಹಿಸುವುದು ಉತ್ತಮ ಎಂದು ಎಸ್.ಬಿ.ವಸ್ತ್ರಮಠ ಹೇಳಿದರು.

ಇತ್ತೀಚೆಗೆ ಮಹಿಳೆಯರಲ್ಲೇ ಥೈರಾಯಿಡ್ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

*
ಪತಿ-ಪತ್ನಿಯರನ್ನು ದೂರ ಮಾಡುವ ಬದಲು, ಅವರನ್ನು ಒಂದಾಗಿ ಬಾಳುವಂತೆ ವಕೀಲರು ಮಾಡಬೇಕು.
-ಎಸ್.ಬಿ.ವಸ್ತ್ರಮಠ, ಜಿಲ್ಲಾ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT