‘ಯಪ್ಪಾ ಕೈ ಮುಗೀತಿನಿ, ನೀರು ಕೊಡ್ರಿ’

7
ಸೋನಿಯಾ ಗಾಂಧಿ ನಗರ, ಹಳ್ಯಾಳ ರಸ್ತೆ ಭಾಗದಲ್ಲಿ ಅಭಾವ, ಟ್ಯಾಂಕರ್‌ ನೀರಿಗೆ ನೂಕುನುಗ್ಗಲು

‘ಯಪ್ಪಾ ಕೈ ಮುಗೀತಿನಿ, ನೀರು ಕೊಡ್ರಿ’

Published:
Updated:
‘ಯಪ್ಪಾ ಕೈ ಮುಗೀತಿನಿ, ನೀರು ಕೊಡ್ರಿ’

ಹುಬ್ಬಳ್ಳಿ: ‘ಯಪ್ಪಾ ನಿಮ್ಮ ಕೈ ಮುಗೀತಿನಿ, ವಾರಕ್ಕ ಒಂದ ಸಲನಾದ್ರೂ ನೀರು ಬರೋ ಹಂಗ ಮಾಡ್ರಿ...’ 67ನೇ ವಾರ್ಡ್‌ನ ಸೋನಿಯಾ ಗಾಂಧಿ ನಗರದ ಹಳ್ಯಾಳ ರಸ್ತೆ ಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಜಲಮಂಡಳಿಯ ಟ್ಯಾಂಕರ್‌ನಿಂದ ನೀರು ತುಂಬಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದವರ ಗಲಾಟೆ ನೋಡಿ ಅಲ್ಲಿನ ನಿವಾಸಿ ಜಯಶ್ರೀ ಮೇಲಿನ ಮಾತುಗಳನ್ನು ಹೇಳಿದರು. ‘ನಮ್ಮ ಸಮಸ್ಯೆಗೆ ಮುಕ್ತಿ ಕೊಡಿ’ ಎಂದು ಟ್ಯಾಂಕರ್‌ ತಂದಿದ್ದವರಲ್ಲಿ ಬೇಡಿಕೊಂಡರು.

ಸೋನಿಯಾ ಗಾಂಧಿ ನಗರದ ಕೆಲ ಭಾಗಗಳಲ್ಲಿ ನೀರು ಬರುತ್ತಿದೆ. ಇನ್ನೂ ಕೆಲವೆಡೆ ಸಮಯಕ್ಕೆ ಸರಿಯಾಗಿ ನೀರು ಬಾರದ ಕಾರಣ ಜನ ಪರದಾಡುತ್ತಿದ್ದಾರೆ. ಈ ಭಾಗದಲ್ಲಿ ನೀರು ಸಂಗ್ರಹಣೆಗೆ ಓವರ್‌ ಹೆಡ್ ಟ್ಯಾಂಕ್‌ ಇದ್ದರೂ ಮನೆಗಳ ನಳಗಳಿಗೆ ಸಂಪರ್ಕ ಕಲ್ಪಿಸಲು ಪೈ‍ಪ್‌ಲೈನ್‌ ಹಾಕಿಲ್ಲ. ಆದ್ದರಿಂದ, ಟ್ಯಾಂಕರ್‌ ನೀರಿಗಾಗಿ ಕಾಯುವುದೇ ಇಲ್ಲಿನ ಜನರ ನಿತ್ಯದ ಕೆಲಸವಾಗಿದೆ.

ಸೋಮವಾರ ನೀರಿನ ಟ್ಯಾಂಕರ್‌ ಬರುವ ಸುದ್ದಿ ಮೊದಲೇ ತಿಳಿದಿದ್ದ ಅಲ್ಲಿನ ಜನ ಒಂದು ಗಂಟೆ ಮುಂಚಿತವಾಗಿ ಖಾಲಿ ಕೊಡಗಳನ್ನು ಹಿಡಿದು ಕಾಯುತ್ತ ನಿಂತಿದ್ದರು. ಟ್ಯಾಂಕರ್‌ ಬರುತ್ತಿದ್ದಂತೆ ಮುಗಿಬಿದ್ದರು. ಪುರುಷರು, ಮಹಿಳೆಯರು, ಮಕ್ಕಳು ನೀರಿಗಾಗಿ ಪೈಪೋಟಿ ನಡೆಸಿದರು. ಎಲ್ಲರಿಗೂ ನೀರು ಸಿಗದ ಕಾರಣ ಕೆಲವರು ಖಾಲಿ ಕೊಡಗಳೊಂದಿಗೆ ವಾಪಾಸ್‌ ತೆರಳಿದ್ದು ಕಂಡುಬಂತು.

ದುರಸ್ತಿಯಾಗದ ಕೊಳವೆಬಾವಿ: ಹಳ್ಯಾಳ ರಸ್ತೆ ಭಾಗದ ಜನರ ನೀರು ಪೂರೈಕೆಗೆ ಒಂದು ಕೊಳವೆ ಬಾವಿ ಇದೆ. ಅದು ಕೆಟ್ಟು ಹೋಗಿರುವುದರಿಂದ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ, ಅಲ್ಲಿನ ನಿವಾಸಿಗಳು ಟ್ಯಾಂಕರ್‌ ನೀರಿಗೆ ಕಾಯುವುದು ಅನಿವಾರ್ಯವಾಗಿದೆ.

‘ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಕೆಟ್ಟು ಹೋಗಿರುವ ಕೊಳವೆ ಬಾವಿ ದುರಸ್ತಿ ಮಾಡಿಸಿಲ್ಲ. ಕೊಳವೆ ಬಾವಿ ಸರಿ ಇದ್ದಿದ್ದರೆ, ಸವಳು ನೀರನ್ನು ಬಳಕೆಗಾದರೂ ಉಪಯೋಗಿಸಿಕೊಳ್ಳಬಹುದಿತ್ತು’ ಎಂದು ಜಯಶ್ರೀ ಹೇಳಿದರು.

‘ಟ್ಯಾಂಕರ್‌ ನೀರು ಬಂದಾಗ ಎಷ್ಟೇ ಕಷ್ಟವಾದರೂ ತುಂಬಿಕೊಳ್ಳಲೇಬೇಕು. ಇಲ್ಲವಾದರೆ, ಬಿಡ್ನಾಳ, ಗಾಂಧಿನಗರಕ್ಕೆ ಹೋಗಬೇಕಾಗುತ್ತದೆ. ಆದಷ್ಟು ಬೇಗನೆ ಪೈಪ್‌ಲೈಲ್‌ ಹಾಕಿದರೆ ಅನುಕೂಲವಾಗುತ್ತದೆ’ ಎಂದು ಸ್ಥಳೀಯ ನಿವಾಸಿ ರಾಧಿಕಾ ನುಡಿದರು.

ನೂಕುನುಗ್ಗಲಿನ ನಡುವೆಯೂ ನೀರು ತುಂಬುತ್ತಿದ್ದ ಗರ್ಭಿಣಿ ಸಂಜನಾ ಜಾಧವ ‘15 ದಿನಗಳಿಂದ ನೀರು ಬಂದಿಲ್ಲ. ನೀರಿನ ಟ್ಯಾಂಕರ್ ಯಾವಾಗ ಬರುತ್ತದೆ ಎನ್ನುವುದನ್ನು ಕಾಯುವುದೇ ಕೆಲಸವಾಗಿದೆ. ಇದನ್ನು ಬಿಟ್ಟು ಬೇರೆ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸೋನಿಯಾ ಗಾಂಧಿ ಹಾಗೂ ಸುತ್ತ–ಮುತ್ತಲಿನ ಓಣಿಗಳಲ್ಲಿ ಸಮಯಕ್ಕೆ ಸರಿಯಾಗಿ ನೀರು ಬರುತ್ತಿಲ್ಲ. ಆದ್ದರಿಂದ, ಎಲ್ಲರಿಗೂ ಸಮಸ್ಯೆಯಾಗಿದೆ. ನೀರಿಗಾಗಿ ಒಂದು ಓಣಿಯಿಂದ ಇನ್ನೊಂದು ಓಣಿಗೆ ಅಲೆದಾಡುವಂತಾಗಿದೆ. ಹಳ್ಯಾಳ ರಸ್ತೆ ಭಾಗಕ್ಕೆ ಪೈ‍ಪ್‌ಲೈನ್ ಸಂಪರ್ಕ ಕಲ್ಪಿಸಿದರೆ ನೀರಿನ ಅಭಾವ ಕಡಿಮೆಯಾಗುತ್ತದೆ’ ಎಂದು ಗಿರಿಜಮ್ಮ ಮಡಿವಾಳರ ಹೇಳಿದರು.

ಶೀಘ್ರದಲ್ಲಿಯೇ ಶಾಶ್ವತ ಪರಿಹಾರ: ಅಬ್ಬಯ್ಯ

ಅಮ್ಮಿನಬಾವಿ ಬಳಿ ನೀರಿನ ಪೈಪ್‌ ಒಡೆದ ಕಾರಣ ಸಮಸ್ಯೆಯಾಗಿದೆ. ಸೋನಿಯಾ ಗಾಂಧಿ ನಗರದಲ್ಲಿ ಐದು ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಿದ್ದು, ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

‘ಪೈಪ್‌ ಅಳವಡಿಕೆಗೆ ಕಾರ್ಯ ವೇಗವಾಗಿ ಪೂರ್ಣಗೊಳಿಸಲು ಸರ್ಕಾರದಿಂದ ₹ 70 ಲಕ್ಷ ಅನುದಾನ ಬಿಡುಗಡೆಯಾಗಿದೆ’ ಎಂದರು.

*

ಪೈಪ್ ಒಡೆದಿದ್ದರಿಂದ ಎಲ್ಲ ಕಡೆಯೂ ನೀರಿನ ಸಮಸ್ಯೆಯಾಗಿದೆ. ಆದ್ದರಿಂದ, ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ.

–ಲಕ್ಷ್ಮೀಬಾಯಿ ಜಾಧವ,

67ನೇ ವಾರ್ಡ್‌ ಪಾಲಿಕೆ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry