ತಂದೆಯ ಬಯೊಮೆಟ್ರಿಕ್‌ ದತ್ತಾಂಶ ಹಿಂದಿರುಗಿಸಿ

7
ಆಧಾರ್‌ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ತಂದೆಯ ಬಯೊಮೆಟ್ರಿಕ್‌ ದತ್ತಾಂಶ ಹಿಂದಿರುಗಿಸಿ

Published:
Updated:
ತಂದೆಯ ಬಯೊಮೆಟ್ರಿಕ್‌ ದತ್ತಾಂಶ ಹಿಂದಿರುಗಿಸಿ

ನವದೆಹಲಿ : ಆಧಾರ್‌ ನೋಂದಣಿಗಾಗಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ‍್ರಾಧಿಕಾರವು ಪಡೆದುಕೊಂಡಿರುವ ತಮ್ಮ ತಂದೆಯ ಬಯೊಮೆಟ್ರಿಕ್‌ ದತ್ತಾಂಶಗಳನ್ನು ಹಿಂದಿರುಗಿಸುವಂತೆ ಕೋರಿ ಬೆಂಗಳೂರಿನ ಸಂತೋಷ್‌ ಮಿನ್‌ ಬಿ ಎಂಬವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ತಂದೆ ಮೃತಪಟ್ಟಿದ್ದಾರೆ. ಹಾಗಾಗಿ ಅವರ ಬಯೊಮೆಟ್ರಿಕ್‌ ದತ್ತಾಂಶದಿಂದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರಕ್ಕೆ ಯಾವುದೇ ಪ್ರಯೋಜನ ಇಲ್ಲ. ಅಷ್ಟೇ ಅಲ್ಲದೆ, ಇದು ದುರ್ಬಳಕೆ ಆಗುವ ಅಪಾಯವೂ ಇದೆ ಎಂದು ಅವರು ವಾದಿಸಿದ್ದಾರೆ.

ಬೆಂಗಳೂರಿನ ಭವಿಷ್ಯ ನಿಧಿ ಕಚೇರಿಯೊಂದರಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸುವಾಗ ಆದ ಅವಮಾನವೇ ತಂದೆಯ ಸಾವಿಗೆ ಕಾರಣ. ವೃದ್ಧಾಪ್ಯ  ಮತ್ತು ಕಣ್ಣಿನ ಪೊರೆ ನಿವಾರಣೆ ಶಸ್ತ್ರಚಿಕಿತ್ಸೆಯಿಂದಾಗಿ ಬಯೊಮೆಟ್ರಿಕ್‌ ದೃಢೀಕರಣ ವಿಫಲವಾಗಿತ್ತು. ಇದರಿಂದ ಅವರಿಗೆ ತೀವ್ರ ಅಪಮಾನವಾಗಿತ್ತು ಎಂದು ಸಂತೋಷ್‌ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ಸಂತೋಷ್‌ ಅವರಿಗೆ ವಾದ ಮಂಡಿಸಲು ಎರಡು ನಿಮಿಷ ಸಮಯ ಕೊಟ್ಟಿತು. ‘ಆಧಾರ್‌ ಎಂದರೆ ಅದೊಂದು ಅಘೋಷಿತ ತುರ್ತು‍ಪರಿಸ್ಥಿತಿ ಇದ್ದಂತೆ’ ಎಂದು ಅವರು ಪ್ರತಿಪಾದಿಸಿದರು.

‘ತಂದೆಯ ಬಯೊಮೆಟ್ರಿಕ್‌ ದತ್ತಾಂಶಗಳನ್ನು ಮುದ್ರಿತ ರೂಪದಲ್ಲಿ ಗುರುತು ಚೀಟಿ ಪ್ರಾಧಿಕಾರವು ಹಿಂದಿರುಗಿಸಬೇಕು. ಅದನ್ನು ನಾನು ಜಾಗರೂಕತೆಯಿಂದ ಇರಿಸಿಕೊಳ್ಳುತ್ತೇನೆ. 2016ರ ಡಿಸೆಂಬರ್‌ 31ರಂದು ನನ್ನ ತಂದೆ ಮೃತಪಟ್ಟ ದಿನ ನಮ್ಮ ಪಾಲಿಗೆ ಅತ್ಯಂತ ಕರಾಳ. ರದ್ದಾದ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸುವುದಕ್ಕೆ ಅಂದು ಕೊನೆಯ ದಿನವಾಗಿತ್ತು’ ಎಂದು ಸಂತೋಷ್‌ ಹೇಳಿದರು.

ಪ್ರಧಾನಿಗೆ ಕಳುಹಿಸಲು ತಮ್ಮ ತಂದೆ ಬರೆದ ಪತ್ರದ ಭಾಗವೊಂದು ಈ ಜನವರಿಯಲ್ಲಿ ತಮಗೆ ಸಿಕ್ಕಿತು. ಭವಿಷ್ಯ ನಿಧಿ ಕಚೇರಿಯಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸುವಾಗ ಎದುರಿಸಬೇಕಿರುವ ಕಿರುಕುಳವನ್ನು ಆ ಪತ್ರದಲ್ಲಿ ಅವರು ವಿವರಿಸಿದ್ದಾರೆ ಎಂದು ಸಂತೋಷ್‌ ಹೇಳಿದರು.

ಆಧಾರ್ ಯೋಜನೆಯನ್ನು ರದ್ದು ಮಾಡಬೇಕು ಎಂದು ಅವರು ಕೋರಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿದ ಪೀಠವು, ‘ಇಲ್ಲಿ ಭಾಷಣ ಮಾಡಲು ಅವಕಾಶ ಇಲ್ಲ. ಕಾನೂನಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ವಾದ ಮಂಡಿಸಲು ಮಾತ್ರ ಅವಕಾಶ ಇದೆ’ ಎಂದು ಹೇಳಿತು. ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ.

***

ಗಳಿಕೆ ಮೇಲೆ ನಿಗಾ

ಜನರು ಗಳಿಸುವ ಪ್ರತಿ ಪೈಸೆಯ ಮೇಲೆ ನಿಗಾ ಇರಿಸುವುದು ಸರ್ಕಾರದ ಉದ್ದೇಶ. ಅದಕ್ಕಾಗಿಯೇ ಜನರ ಮೇಲೆ ಆಧಾರ್‌ ಯೋಜನೆಯನ್ನು ಹೇರಲಾಗಿದೆ. ಆದರೆ, ರಾಜಕೀಯ ಪಕ್ಷಗಳು ಮಾತ್ರ ಅನಾಮಧೇಯ ವ್ಯಕ್ತಿಗಳಿಂದ ಚುನಾವಣಾ ಬಾಂಡ್‌ ಮೂಲಕ ಹಣ ಸಂಗ್ರಹಿಸಬಹುದು. ಇದಕ್ಕೆ ಯಾವುದೇ ಲೆಕ್ಕ ಇರುವುದಿಲ್ಲ ಎಂದು ಸಂತೋಷ್‌ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry