ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಫಾರಸು ಮಾಡಿದರೆ ಹೋರಾಟ: ವೀರಶೈವ ಮಠಾಧೀಶರ ಎಚ್ಚರಿಕೆ

Last Updated 15 ಮಾರ್ಚ್ 2018, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಪಂಗಡಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಕಾಂಗ್ರೆಸ್‌ ವಿರುದ್ಧ ಸದಾಕಾಲ ಹೋರಾಟ ಮಾಡಬೇಕಾಗುತ್ತದೆ’ ಎಂದು ವೀರಶೈವ ಪಂಗಡದ 50ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ 57ಕ್ಕೂ ಹೆಚ್ಚು ವಿರಕ್ತ ಮಠಾಧೀಶರು ಮುಖ್ಯಮಂತ್ರಿಯನ್ನು ಭೇಟಿ ಮಾಡಿದರು. ಶಾಲು ಹೊದಿಸಿ, ಫಲ ನೀಡಿ ಗೌರವಿಸಿದ ಮಠಾಧೀಶರು, ಬಳಿಕ ಮನವಿ ಪತ್ರ ಸಲ್ಲಿಸಿದರು.

‘ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ, ಸಮಾಜವನ್ನು ಇಬ್ಭಾಗ ಮಾಡಬಾರದೆಂದು ಮನವಿ ಮಾಡಿದ್ದೇವೆ. ಕೆಲವು ಕುತಂತ್ರಿಗಳ ಮಾತು ಕೇಳಿ ಅವರು ದುಡುಕಿನ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ’ ಎಂದು ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ಅದನ್ನೂ ಮೀರಿ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಶಿಫಾರಸು ಮಾಡಿದರೆ ಎಲ್ಲಾ ರೀತಿಯ ತ್ಯಾಗ ಮತ್ತು ಹೋರಾಟಕ್ಕೆ ಮಠಾಧೀಶರು ಸಿದ್ಧರಿದ್ದೇವೆ. ಇದನ್ನು ಎಚ್ಚರಿಕೆಯೆಂದು ಭಾವಿಸದೆ ಸಮಾಜದ ಹಿತಕ್ಕಾಗಿ ಮಾಡು
ತ್ತಿರುವ ಮನವಿ ಎಂದು ಪರಿಗಣಿಸು
ವಂತೆ ತಿಳಿಸಿದ್ದೇವೆ. ಯಾವುದೇ ಕಾರಣಕ್ಕೂ ಸಮಾಜ ಒಡೆಯುವುದಿಲ್ಲ ಎಂಬ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ’ ಎಂದು ಹೇಳಿದರು.

‘ವೀರಶೈವ– ಲಿಂಗಾಯತ ಎರಡೂ ಬೇರೆ– ಬೇರೆ ಎಂಬ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ವರದಿಯನ್ನು ತಿರಸ್ಕರಿಸಬೇಕು.‌ ಅವಶ್ಯಕತೆ ಇದ್ದರೆ ಎರಡೂ ಪಂಗಡದ ಮಠಾಧೀಶರನ್ನು ಒಳಗೊಂಡ ಮತ್ತೊಂದು ಸಮಿತಿ ರಚನೆ ಮಾಡಿ ವರದಿ ಪಡೆಯಬೇಕೆಂದು ಮನವಿ ಮಾಡಿದ್ದೇವೆ’ ಎಂದು ಬಾಳೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

‘ಸಿದ್ದರಾಮಯ್ಯ ಹೃದಯವಂತರು ಮತ್ತು ಧರ್ಮದ ಬಗ್ಗೆ ತಿಳಿವಳಿಕೆ ಉಳ್ಳವರಾಗಿದ್ದಾರೆ. ಅವರು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕೆಂಬ ಆಸೆ ನಮಗೂ ಇದೆ. ಈ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಬೇಕೆಂಬ ಇಚ್ಛೆ ಇದ್ದರೆ ವೀರಶೈವ– ಲಿಂಗಾಯತ ಧರ್ಮ ಎಂದೇ ಘೊಷಿಸಬೇಕೆಂದು ಕೇಳಿಕೊಂಡಿದ್ದೇವೆ’ ಎಂದರು.

‘ಮೂರು ಸಾವಿರ ಮಠಗಳ ಪೈಕಿ ಐವತ್ತು ಮಠಾಧೀಶರು ಮಾತ್ರ ಧರ್ಮ ಒಡೆಯಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡಬಾರದೆಂಬ ನಮ್ಮ ಮನವಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಾನು ವೀರಶೈವರ ವಿರೋಧಿಯಲ್ಲ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಮಾತು ತಪ್ಪುವುದಿಲ್ಲ ಎಂಬ ಭರವಸೆ ಇದೆ’ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ವೀರಶೈವ–ಲಿಂಗಾಯತ ಎರಡೂ ಒಂದೇ

‘ಜೈನ ಧರ್ಮದಲ್ಲಿ ದಿಗಂಬರ– ಶ್ವೇತಾಂಬರ, ಬ್ರಾಹ್ಮಣರಲ್ಲಿ ಸ್ಮಾರ್ತ– ಮಾಧ್ವ ಇರುವಂತೆ ವೀರಶೈವ ಪರಂಪರೆಯಲ್ಲಿ ಗುರು, ವಿರಕ್ತ ಮತ್ತು ಶರಣ ಎಂಬ ಮೂರು ಪಂಗಡಗಳಿವೆ. ಹೀಗಾಗಿ ವೀರಶೈವ ಪರಂಪರೆಯಲ್ಲಿ ಲಿಂಗಾಯತ ಒಂದು ಭಾಗವೇ ಹೊರತು ಪ್ರತ್ಯೇಕ ಅಲ್ಲ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಶೈವನಾದ ನಾನು ನಿಜ ವೀರಶೈವನಾದೆ ಎಂಬ ಬಸವಣ್ಣನ ವಚನವನ್ನೂ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT