ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ಡಿಜಿಟಲ್‌ ವಿಳಾಸ

ಪಾಲಿಕೆ ವ್ಯಾಪ್ತಿಯಲ್ಲಿ ಮೊದಲು ಜಾರಿ: ಎನ್‌. ಮಂಜುನಾಥ್‌ ಪ್ರಸಾದ್‌
Last Updated 15 ಮಾರ್ಚ್ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮನೆ, ಕಚೇರಿ ಹಾಗೂ ವಾಣಿಜ್ಯ ಕಟ್ಟಡಗಳ ವಿಳಾಸ ಪತ್ತೆ ಹಚ್ಚಲು ಇನ್ನು ಮುಂದೆ ವಿಶಿಷ್ಟ ಗುರುತಿನ 7 ಸಂಖ್ಯೆಗಳನ್ನು ಮೊಬೈಲ್‌ನಲ್ಲಿ ನೋಂದಾಯಿಸಿದರೆ ಅದೇ ಮಾರ್ಗ ತೋರಿಸುತ್ತದೆ. ಇದಕ್ಕಾಗಿ ಬಿಬಿಎಂಪಿ ‘DiGi7 ಮೊಬೈಲ್‌ ಆ್ಯಪ್‌’ ಪರಿಚಯಿಸಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ನಗರದಲ್ಲಿ ಗುರುವಾರ ಈ ಆ್ಯಪ್‌ ಬಿಡುಗಡೆ ಮಾಡಿದರು. ಪಾಲಿಕೆ ವಿಶೇಷ ಆಯುಕ್ತ ಆರ್‌.ಮನೋಜ್‌ ರಾಜನ್‌ ನೇತೃತ್ವದಲ್ಲಿ ಪಾಲಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಶೇಷಾದ್ರಿ ಅವರ ತಂಡ ಈ ಆ್ಯಪ್‌ ಸಿದ್ಧಪಡಿಸಿದೆ.

ನಂತರ ಮಾತನಾಡಿದ ಜಾರ್ಜ್‌, ‘ಇದೊಂದು ವಿಶಿಷ್ಟ ಮತ್ತು ಶಾಶ್ವತ ಗುರುತಿನ ಸಂಖ್ಯೆ. ಜಿಪಿಎಸ್‌ ಆಧಾರಿತ ಡಿಜಿಟಲ್‌ ವಿಳಾಸ ವ್ಯವಸ್ಥೆ ಇದು. ಇದರಿಂದ ನಗರದಲ್ಲಿ ಎಷ್ಟು ಆಸ್ತಿದಾರರು ಇದ್ದಾರೆ, ಎಷ್ಟು ಮಂದಿ ತೆರಿಗೆ ಪಾವತಿಸಿದ್ದಾರೆ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡವರು ಎಷ್ಟು ಮಂದಿ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹಾಗೆಯೇ ಪ್ರತಿ ಮನೆಯ ವಿಳಾಸವನ್ನು ಸಂಬಂಧಿಸಿದವರು ಸುಲಭವಾಗಿ ಹುಡುಕಬಹುದು. ಅಂಚೆ ಪತ್ರ, ಕೊರಿಯರ್‌ ಹಾಗೂ ಪಾರ್ಸೆಲ್‌ಗಳನ್ನು ತಲುಪಿಸುವವರಿಗೂ ಇದು ಅನುಕೂಲಕರವಾಗಲಿದೆ’ ಎಂದರು.

‘ಪಾಲಿಕೆಯಲ್ಲಿ ನಾವು ಅಧಿಕಾರಕ್ಕೆ ಬರುವ ಮೊದಲು ಅನೇಕ ಆಸ್ತಿಗಳು ತೆರಿಗೆ ವ್ಯಾಪ್ತಿಯ ಹೊರಗಿದ್ದವು. ಅವುಗಳನ್ನು ತೆರಿಗೆ ವ್ಯಾಪ್ತಿಗೆ ತಂದಿದ್ದೇವೆ. ತೆರಿಗೆ ಸಂಗ್ರಹ ದುಪ್ಪಟ್ಟಾಗಿದೆ. ಕೆಲವರು ತೆರಿಗೆ ತಪ್ಪಿಸಿಕೊಳ್ಳುತ್ತಿರಬಹುದು. ಹೊಸ ವ್ಯವಸ್ಥೆಯಿಂದ ಅವುಗಳನ್ನೂ ತೆರಿಗೆ ವ್ಯಾಪ್ತಿಗೆ ತರಲಿದ್ದೇವೆ’ ಎಂದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಮಾತನಾಡಿ, ‘ನಗರದ 800 ಚ.ಕಿ.ಮೀ. ವ್ಯಾಪ್ತಿಯನ್ನು ಡಿಜಿಟಲ್‌ ವಿಳಾಸದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಮೊದಲ ಹಂತದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಮನೆಗಳು ಮತ್ತು ಕಟ್ಟಡಗಳಿಗೆ 7 ಅಂಕಿಯ ಡಿಜಿಟಲ್‌ ವಿಳಾಸ ನೀಡಲಾಗಿದೆ. ಇದರಿಂದ ಆಸ್ತಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಿಟ್ಟುಹೋಗಿರುವ ಮನೆಗಳು ಮತ್ತು ಕಟ್ಟಡಗಳನ್ನು ಗುರುತಿಸಿ ಡಿಜಿಟಲ್‌ ವಿಳಾಸ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಅಲ್ಲದೆ ಡಿಜಿಟಲ್‌ ವಿಳಾಸ ಹೊಂದಿರುವ ಏಕರೂಪದ ಫಲಕಗಳನ್ನು ಎರಡನೇ ಹಂತದಲ್ಲಿ ಬಿಬಿಎಂಪಿಯಿಂದಲೇ ಪ್ರತಿ ಮನೆಗೂ ನೀಡಲಾಗುತ್ತದೆ. ಬಿಬಿಎಂಪಿಯ ಲಾಂಛನವಿರುವ ಈ ಫಲಕವನ್ನು ಪ್ರತಿ ಮನೆ ಬಾಗಿಲಿಗೆ ಅಂಟಿಸಲಾಗುತ್ತದೆ. ಪ್ರತಿ ಫಲಕಕ್ಕೆ ಕನಿಷ್ಠ ₹20 ವೆಚ್ಚವಾಗಬಹುದು. ಇದಕ್ಕೆ ಸದ್ಯದಲ್ಲೇ ಟೆಂಡರ್‌ ಕರೆಯಲಾಗು‌‌ತ್ತದೆ’ ಎಂದರು.
***
ಆ್ಯಪ್‌ ಪಡೆಯುವ ವಿಧಾನ
ಪ್ಲೇ ಸ್ಟೋರ್‌ (ಅಂಡ್ರಾಯ್ಡ್‌) ಅಥವಾ ಆ್ಯಪ್‌ ಸ್ಟೋರ್‌ನಿಂದ (ಐಫೋನ್‌) ಪಡೆದು ಮೊಬೈಲ್‌ ಸಂಖ್ಯೆಯೊಂದಿಗೆ ನೋಂದಾಯಿಸಬೇಕು.

ಬಳಕೆದಾರರು DiGi7 ಅನ್ನು ಎಸ್‍ಎಎಸ್ ಫಾರಂ ಸಂಖ್ಯೆ ಹಳೆಯ ಅಥವಾ ಹೊಸ ಪಿ.ಐ.ಡಿ ಸಂಖ್ಯೆ ನಮೂದಿಸಿ ಪಡೆಯಬಹುದು. ಬಿಬಿಎಂಪಿ ಕಾಲ್‍ಸೆಂಟರ್ (080-22660000), ಎಸ್ಎಂಎಸ್‌ ಮೂಲಕ ಅಥವಾ ವಾರ್ಡ್‌ ಕಚೇರಿಯಿಂದ DiGi7 ಸಂಖ್ಯೆ ಪಡೆಯಬಹುದು

BBMP PID <ಪಿಐಡಿ ಸಂಖ್ಯೆ> ಎಂದು ಟೈಪ್ ಮಾಡಿ 161ಕ್ಕೆ ಕಳುಹಿಸಬೇಕು ಅಥವಾ BBMP SAS <ಎಸ್.ಎ.ಎಸ್ ಸಂಖ್ಯೆ> ಟೈಪ್ ಮಾಡಿ 161ಕ್ಕೆ ಕಳುಹಿಸಬೇಕು. (ಉದಾಹರಣೆಗೆ ಹೊಸ ಪಿಐಡಿ ಆಗಿದ್ದಲ್ಲಿ: BBMP PID 188-W0259-4 ಅಥವಾ SAS ಹೊಸ ಅರ್ಜಿ ಆಗಿದ್ದಲ್ಲಿ: BBMP SAS 102930809).

ಸಂಪರ್ಕ: www.bbmp.gov.in
***
* ಸಾಂಪ್ರದಾಯಿಕ ವಿಳಾಸಕ್ಕೆ ಬದಲಿ ವ್ಯವಸ್ಥೆ. ಬಳಕೆ ಸ್ನೇಹಿ ಮತ್ತು ಬಹೂಪಯೋಗಿ
* ಡಿಜಿಟಲ್‌ ವಿಳಾಸದ ಸಂಖ್ಯೆಯನ್ನು ಎಸ್‌ಎಂಎಸ್‌ ಮತ್ತು ಇತರೆ ಅಪ್ಲಿಕೇಷನ್‌ಗಳ ಮೂಲಕವೂ ಇತರರೊಂದಿಗೆ      ಹಂಚಿಕೊಳ್ಳಬಹುದು.
* ಆಸ್ತಿ ಮಾಲೀಕರು ಡಿಜಿಟಲ್‌ ವಿಳಾಸದ ಸಂಖ್ಯೆಯನ್ನು ತಮ್ಮ ಆಸ್ತಿಯ ಪ್ರಮುಖ ಭಾಗದಲ್ಲಿ ಪ್ರದರ್ಶಿಸಬಹುದು
* DiGi7 ನ್ಯಾವಿಗೇಟರ್‌ನಿಂದ ಒಂದು ನಿರ್ದಿಷ್ಟ ಮನೆ ಅಥವಾ ಆಸ್ತಿಗೆ ತಲುಪಲು ಸಂಚಾರ ಮಾರ್ಗ ವಿವರ ತಿಳಿಯಬಹುದು
*  ಬಳಕೆದಾರರು ಅವಶ್ಯ ಸ್ಥಳಗಳನ್ನು ಬುಕ್‌ ಮಾರ್ಕ್‌ ಮಾಡಿಕೊಳ್ಳಬಹುದು
* ಸಾರ್ವಜನಿಕರ ಸಲಹೆ, ದೂರುಗಳನ್ನು ಸ್ವೀಕರಿಸುವಾಗ ಡಿಜಿಟಲ್‌ ವಿಳಾಸ ಬಳಸಿದರೆ ಕ್ಷಿಪ್ರ ಸೇವೆ ಒದಗಿಸಲು ಸಹಕಾರಿ
***
19 ಲಕ್ಷ
ಆಸ್ತಿಗಳಿಗೆ ಬಿಬಿಎಂಪಿಯು ಡಿಜಿಟಲ್‌ ವಿಳಾಸ ನೀಡಿದೆ

₹83,000
‘DiGi7 ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲು ಆಗಿರುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT