ಟೆನಿಸ್‌: ಸೆಮಿಗೆ ಸಿಮೊನಾ, ಒಸಾಕ

7

ಟೆನಿಸ್‌: ಸೆಮಿಗೆ ಸಿಮೊನಾ, ಒಸಾಕ

Published:
Updated:
ಟೆನಿಸ್‌: ಸೆಮಿಗೆ ಸಿಮೊನಾ, ಒಸಾಕ

ಇಂಡಿಯಾನ ವೇಲ್ಸ್‌ (ಎಎಫ್‌ಪಿ): ರುಮೇನಿಯಾದ ಸಿಮೊನಾ ಹಲೆಪ್‌ ಮತ್ತು ಜಪಾನ್‌ನ ನವೊಮಿ ಒಸಾಕ, ಇಂಡಿಯಾನ ವೇಲ್ಸ್‌ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಸಿಮೊನಾ 6–4, 6–7, 6–3ರಲ್ಲಿ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್‌ ಅವರನ್ನು ಸೋಲಿಸಿದರು.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಸಿಮೊನಾ ಮೊದಲ ಸೆಟ್‌ನಲ್ಲಿ ಗೆದ್ದು ಮುನ್ನಡೆ ಗಳಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಮಾರ್ಟಿಕ್‌ ತಿರುಗೇಟು ನೀಡಿದರು. ಶರವೇಗದ ಸರ್ವ್‌ಗಳನ್ನು ಸಿಡಿಸಿ ಎದುರಾಳಿಯ ಮೇಲೆ ಒತ್ತಡ ಹೇರಿದ ಪೆಟ್ರಾ ‘ಟೈ ಬ್ರೇಕರ್‌’ನಲ್ಲಿ ಗೆದ್ದು 1–1ರಲ್ಲಿ ಸಮಬಲ ಸಾಧಿಸಿದರು. ಹೀಗಾಗಿ ಮೂರನೇ ಸೆಟ್‌ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ನಿರ್ಣಾಯಕ ಎನಿಸಿದ್ದ ಈ ಹೋರಾಟದಲ್ಲಿ ಆರಂಭದಿಂದಲೇ ಇಬ್ಬರೂ ತುರುಸಿನ ಪೈಪೋಟಿ ನಡೆಸಿದರು. ಮೊದಲ ಆರು ಗೇಮ್‌ಗಳಲ್ಲಿ ಸಮಬಲದ ಹೋರಾಟ ನಡೆಯಿತು. ನಂತರ ಸಿಮೊನಾ ಮೇಲುಗೈ ಸಾಧಿಸಿದರು. ಆಕರ್ಷಕ ಕ್ರಾಸ್‌ ಕೋರ್ಟ್‌ ಮತ್ತು ಬ್ಯಾಕ್‌ ಹ್ಯಾಂಡ್‌ ಹೊಡೆತಗಳ ಮೂಲಕ ಮೂರು ಗೇಮ್‌ಗಳನ್ನು ಜಯಿಸಿದ ಅವರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಇನ್ನೊಂದು ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಒಸಾಕ 6–2, 6–3ರ ನೇರ ಸೆಟ್‌ಗಳಿಂದ ಜೆಕ್‌ ಗಣರಾಜ್ಯದ ಐದನೇ ಶ್ರೇಯಾಂಕಿತೆ ಕ್ಯಾರೋಲಿನಾ ಪ್ಲಿಸ್ಕೋವಾಗೆ ಆಘಾತ ನೀಡಿದರು.

ಕ್ವಾರ್ಟರ್‌ ಫೈನಲ್‌ಗೆ ಫೆಡರರ್‌: ರೋಜರ್‌ ಫೆಡರರ್‌ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ರೋಜರ್‌ 7–5, 6–4ರಲ್ಲಿ ಜೆರೆಮಿ ಚಾರ್ಡಿ ಅವರನ್ನು ಮಣಿಸಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿರುವ ಫೆಡರರ್‌, ಈ ವರ್ಷ ಆಡಿದ ಎಲ್ಲಾ ಪಂದ್ಯಗಳಲ್ಲೂ (15) ಜಯಿಸಿದರು.

ಹೋದ ವರ್ಷ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಫೆಡರರ್‌, ಆರಂಭಿಕ ಸೆಟ್‌ನಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಸುಲಭವಾಗಿ ಜಯಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ರೋಜರ್‌, ದಕ್ಷಿಣ ಕೊರಿಯಾದ ಚುಂಗ್‌ ಹ್ಯೊನ್‌ ವಿರುದ್ಧ ಆಡಲಿದ್ದಾರೆ.

ನಾಲ್ಕನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಚುಂಗ್‌ 6–1, 6–3ರಿಂದ ಪ್ಯಾಬ್ಲೊ ಕ್ಯುವಾಸ್‌ ಅವರನ್ನು ಸೋಲಿಸಿದರು. ಇತರ ಪಂದ್ಯಗಳಲ್ಲಿ ಬೊರ್ನಾ ಕೊರಿಕ್‌ 6–2, 6–7, 6–4ರಲ್ಲಿ ಟೇಲರ್‌ ಫ್ರಿಟ್ಜ್‌ ಎದುರೂ, ಕೆವಿನ್‌ ಆ್ಯಂಡರ್ಸನ್‌ 4–6, 6–3, 7–6ರಲ್ಲಿ ಪ್ಯಾಬ್ಲೊ ಕರೆನೊ ಬುಸ್ಟಾ ಮೇಲೂ, ಸ್ಯಾಮ್‌ ಕ್ವೆರಿ 6–3, 6–4ರಲ್ಲಿ ಫೆಲಿಸಿಯಾನೊ ಲೊಪೆಜ್‌ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry