ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ಆರೋಪಿಸಿ ಮೊಯಿಲಿ ಟ್ವೀಟ್: ಜಾಲತಾಣದಲ್ಲಿ ಚರ್ಚೆ

ಮಂಗಳವಾರ, ಮಾರ್ಚ್ 26, 2019
33 °C

ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ಆರೋಪಿಸಿ ಮೊಯಿಲಿ ಟ್ವೀಟ್: ಜಾಲತಾಣದಲ್ಲಿ ಚರ್ಚೆ

Published:
Updated:
ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ಆರೋಪಿಸಿ ಮೊಯಿಲಿ ಟ್ವೀಟ್: ಜಾಲತಾಣದಲ್ಲಿ ಚರ್ಚೆ

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ, ಸಂಸದ ವೀರಪ್ಪ ಮೊಯಿಲಿ ಅವರು ಪಕ್ಷದ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

‘ಹಣ ರಾಜಕೀಯವನ್ನು ಕಾಂಗ್ರೆಸ್‌ ಬಗೆಹರಿಸಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರ ಜತೆ ಸಂಬಂಧ ಹೊಂದಿರುವ ರಾಜ್ಯ ಪಿಡಬ್ಲ್ಯುಡಿ ಸಚಿವರು ಮುಂಬರುವ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಹೇಗೆ ನಿರ್ಧರಿಸುವರು’ ಎಂದು ಮೊಯಿಲಿ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಅವರ ಟ್ವಿಟರ್ ಖಾತೆಯಲ್ಲೂ ಪ್ರಕಟಗೊಂಡಿತ್ತು. ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇಬ್ಬರ ಖಾತೆಯಿಂದಲೂ ಟ್ವೀಟ್‌ ಅನ್ನು ಅಳಿಸಿಹಾಕಲಾಗಿದೆ.

(ವೀರಪ್ಪ ಮೊಯಿಲಿ ಹಾಗೂ ಅವರ ಮಗ ಹರ್ಷ ಮೊಯಿಲಿ ಮಾಡಿದ್ದಾರೆ ಎನ್ನಲಾದ ಟ್ವೀಟ್. ಈ ಎರಡೂ ಟ್ವೀಟ್‌ಗಳನ್ನು ಈಗ ಅಳಿಸಿಹಾಕಲಾಗಿದೆ)

ಸಂಬಂಧವಿಲ್ಲ ಎಂದ ಮೊಯಿಲಿ: ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಮೊಯಿಲಿ, ಟ್ವೀಟ್‌ಗೂ ತಮಗೂ ಸಂಬಂಧವಿಲ್ಲ. ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದಿರುವುದಾಗಿ ಸುದ್ದಿವಾಹಿನಿಗಳು ವರದಿ ಮಾಡಿವೆ.

ಬಿಜೆಪಿಯಿಂದ ಟೀಕಾ ಪ್ರಹಾರ: ಮೊಯಿಲಿ ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ವಿಷಯ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲಾರಂಭಿಸಿದ್ದಾರೆ.

‘ಕಾಂಗ್ರೆಸ್ ಟಿಕೆಟ್ ನೀಡುವ ವಿಷಯದಲ್ಲಿ ರಾಜ್ಯ  ಲೋಕೋಪಯೋಗಿ ಸಚಿವ ಮತ್ತು ರಸ್ತೆ ಗುತ್ತಿಗೆದಾರರ ನಡುವಿನ ನಂಟಿನ ಬಗ್ಗೆ ಬಹಿರಂಗಪಡಿಸಿರುವ ಮಾನ್ಯ ಶ್ರೀ ಮೊಯ್ಲಿಯವರು, ಕಾಮಗಾರಿ ಮಾಡದೆ ₹ 1500 ಕೋಟಿ ಬಿಲ್ ಪಡೆದಿರುವ ಕಾಂಗ್ರೆಸ್ ಶಾಸಕ ಶ್ರೀ ಮುನಿರತ್ನ ಬಗ್ಗೆ ಏನಂತಾರೆ? ಈ ದುಡ್ಡು ಕೂಡಾ ಕಾಂಗ್ರೆಸ್ ಟಿಕೆಟ್‌ಗಾ? ಅಥವಾ ಚುನಾವಣಾ ಖರ್ಚಿಗಾ?’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

‘ಸಚಿವರು, ಗುತ್ತಿಗೆದಾರರ ನಡುವಣ ಅಕ್ರಮ ಸಂಬಂಧದ ಬಗ್ಗೆ ಮತ್ತು ಗುತ್ತಿಗೆದಾರರು ರಾಜ್ಯವವನ್ನು ಮುನ್ನಡೆಸುತ್ತಿರುವ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕ ಮೊಯಿಲಿಯವರು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಅವರಿಂದ ಕರ್ನಾಟಕ ಉತ್ತರ ಬಯಸುತ್ತದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

‘ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತದ ಎಲ್ಲ ವಿಭಾಗಗಳಲ್ಲೂ ಅನೈತಿಕವಾಗಿ ವ್ಯವಹರಿಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಹಿರಿಯ ನಾಯಕರ ಅನುಭವಕ್ಕೂ ಬಂದಿದೆ. ವೀರಪ್ಪ ಮೊಯಿಲಿಯವರ ಟ್ವೀಟ್ ಇದಕ್ಕೆ ಉದಾಹರಣೆ’ ಎಂದೂ ಶೋಭಾ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry