ಸರ್ಕಾರದಿಂದ ವೀರಶೈವ – ಲಿಂಗಾಯತರ ಇಬ್ಭಾಗ

7
ಬಿಜೆಪಿ ವತಿಯಿಂದ ‘ಆನೇಕಲ್ ರಕ್ಷಿಸಿ’ ಪಾದಯಾತ್ರೆ ಕಾರ್ಯಕ್ರಮದಲ್ಲಿ ಆರ್‌.ಅಶೋಕ್‌ ಆರೋಪ

ಸರ್ಕಾರದಿಂದ ವೀರಶೈವ – ಲಿಂಗಾಯತರ ಇಬ್ಭಾಗ

Published:
Updated:
ಸರ್ಕಾರದಿಂದ ವೀರಶೈವ – ಲಿಂಗಾಯತರ ಇಬ್ಭಾಗ

ಆನೇಕಲ್‌: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಭ್ರಷ್ಟರನ್ನು ಮಟ್ಟ ಹಾಕಬೇಕಾದ ಲೋಕಾಯುಕ್ತರಿಗೆ ಭದ್ರತೆ ಇಲ್ಲದ ವಾತಾವರಣ ಸೃಷ್ಟಿಯಾಗಿರುವುದು ಆತಂಕ ಮೂಡಿಸಿದೆ ಎಂದು ಶಾಸಕ ಆರ್.ಅಶೋಕ್‌ ಆರೋಪಿಸಿದರು‌.

ಅವರು ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಆನೇಕಲ್ ರಕ್ಷಿಸಿ’ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಐಪಿಎಸ್‌ ಅಧಿಕಾರಿಗಳು ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಸಚಿವರು, ಹಾಗೂ ಮುಖಂಡರಿಂದ ಒತ್ತಡ ಹೇರಲಾಗುತ್ತಿದೆ ಎಂದು ಪತ್ರ ಬರೆದಿದ್ದಾರೆ. ಬೆಂಗಳೂರು ಸುಂದರ, ಸ್ವಚ್ಛ, ಹವಾ ನಿಯಂತ್ರಿತ, ಐಟಿ– ಬಿಟಿ ನಗರ ಎಂಬ ಖ್ಯಾತಿ ಪಡೆದಿತ್ತು. ಆದರೆ, ಸಿದ್ದರಾಮಯ್ಯ ಅವರ ನಿದ್ದೆ ಆಡಳಿತದಿಂದಾಗಿ ದೇಶದ 23 ನಗರಗಳ ಸಮೀಕ್ಷೆಯಲ್ಲಿ ಕೊನೆಯ ಸ್ಥಾನ ಪಡೆದಿದೆ ಎಂದರು.

ಹಾಡಹಗಲಿನಲ್ಲೇ ಕೊಲೆ, ಸುಲಿಗೆ, ದರೋಡೆ ನಡೆಯುತ್ತಿದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗೂಂಡಾಗಳನ್ನು ಬಗ್ಗುಬಡಿದರು. ಅದೇ ರೀತಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮುಂಬರುವ ದಿನಗಳಲ್ಲಿ ಇಲ್ಲಿನ ಗೂಂಡಾ ಸಂಸ್ಕೃತಿ ಬಗ್ಗು ಬಡಿಯಬೇಕಾಗಿದೆ. ಅದಕ್ಕಾಗಿ ಎಲ್ಲಾ ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಬೆಂಗಳೂರಿನಲ್ಲಿ ₹500 ಕೋಟಿ ವೆಚ್ಚದಲ್ಲಿ ರಸ್ತೆಗಳ ವೈಟ್‌ಟ್ಯಾಪಿಂಗ್‌ ಮಾಡಲಾಗುತ್ತಿದೆ. ಇದೊಂದು ದೊಡ್ಡ ಕಮಿಷನ್ ದಂಧೆ. ಬಿಬಿಎಂಪಿಯ 150 ಆಸ್ತಿಗಳನ್ನು ₹565 ಕೋಟಿ ಅಡಮಾನ ಇಡಲಾಗಿದೆ. 10ಕ್ಕೂ ಹೆಚ್ಚು ಮಾಲ್‌ಗಳನ್ನು ಮಾರಾಟ ಮಾಡಲಾಗಿದೆ. ಬಿಬಿಎಂಪಿ ₹5 ಸಾವಿರ ಕೋಟಿ ಸಾಲದಲ್ಲಿದೆ. ಇದು ಸರ್ಕಾರದ ಕೊಡುಗೆಯಾಗಿದ್ದು, ಈ ದುರಾಡಳಿತದಿಂದ ಬೆಂಗಳೂರನ್ನು ರಕ್ಷಿಸಲು ಬಿಜೆಪಿ ವತಿಯಿಂದ 24 ವಿಧಾನಸಭಾ ಕ್ಷೇತ್ರಗಳಲ್ಲಿ 14ದಿನಗಳಿಂದ ನಿರಂತರ ಪಾದಯಾತ್ರೆ ನಡೆಸಲಾಗುತ್ತಿದೆ. ಎಲ್ಲೆಡೆ ಜನಬೆಂಬಲ ದೊರೆಯುತ್ತಿದ್ದು, ಕಾಂಗ್ರೆಸ್‌ನಲ್ಲಿ ನಡುಕ ಉಂಟಾಗಿದೆ ಎಂದರು.

ಸಿದ್ದರಾಮಯ್ಯ ಅವರ ಸರ್ಕಾರ ಬೆಂಕಿ ರಾಮಯ್ಯ ಅವರ ಸರ್ಕಾರ. ಸಾವಿರಾರು ವರ್ಷಗಳಿಂದ ಒಗ್ಗೂಡಿ ಜೀವನ ಮಾಡುತ್ತಿದ್ದ ಲಿಂಗಾಯತರು ಮತ್ತು ವೀರಶೈವರ ನಡುವೆ ಬೆಂಕಿ ಹಚ್ಚಿ ಕಿತ್ತಾಡುವಂತೆ ಮಾಡಿದ್ದಾರೆ. ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಜನರು ಚುನಾವಣೆಗಾಗಿ ಕಾದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಒದಗಿರುವ ಸ್ಥಿತಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಾಂಗ್ರಸ್‌ಗೂ ಬರಲಿದೆ ಎಂದು ಟೀಕಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಟಿ.ದಯಾನಂದರೆಡ್ಡಿ ಮಾತನಾಡಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್‌ರೆಡ್ಡಿ, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಶಿವಪ್ಪ, ಮುಖಂಡರಾದ ಎಂ.ಯಂಗಾರೆಡ್ಡಿ, ಕೆ.ಸಿ.ರಾಮಚಂದ್ರ, ಪಟಾಪಟ್‌ ಶ್ರೀನಿವಾಸ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬಳ್ಳೂರು ವಸಂತ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಮುರಳಿಕೃಷ್ಣ, ಪುರಸಭಾ ಸದಸ್ಯರಾದ ನರಸಿಂಹರೆಡ್ಡಿ, ಕೆ.ನಾಗರಾಜು ಇದ್ದರು.

ವರ್ಗಾವಣೆಗೆ ಲಕ್ಷಾಂತರ ರೂಪಾಯಿ ಲಂಚ

ಮುಖಂಡ ಎ.ನಾರಾಯಣಸ್ವಾಮಿ ಮಾತನಾಡಿ, ಆನೇಕಲ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅಧಿಕಾರಿಗಳು ವರ್ಗಾವಣೆಯಾಗಿ ಬರಬೇಕಾದರೆ ಲಕ್ಷಾಂತರ ರೂಪಾಯಿ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಕಾಮಗಾರಿ ನಡೆಯುತ್ತಿದೆ. ಮತದಾರರ ಪಟ್ಟಿ ಸೇರ್ಪಡೆಯಲ್ಲಿ ನಕಲಿ ಮತದಾರರು ಸೇರ್ಪಡೆ ಆಗುತ್ತಿದ್ದಾರೆ. ಇದರಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಶೇ10ರಷ್ಟು ಕಮಿಷನ್ ನಡೆಯುತ್ತಿದೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಆದರೆ, ಆನೇಕಲ್‌ನ ಕಾಮಗಾರಿಗಳಲ್ಲಿ ಶೇ30 ರಷ್ಟು ಕಮಿಷನ್‌ ನಡೆಯುತ್ತಿದೆ. ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry