ಯುಗದ ಆದಿ ಯುಗಾದಿ

7

ಯುಗದ ಆದಿ ಯುಗಾದಿ

Published:
Updated:
ಯುಗದ ಆದಿ ಯುಗಾದಿ

ಚಳಿಗಾಲದ ಶೀತದ ಹವೆಯನ್ನು ನಾ ತಡೆಯಲಾರೆ ಎನ್ನುವಂತೆ ಮರದ ಮೇಲಿರುವ ಎಲೆಗಳೆಲ್ಲಾ ಉದುರಿ, ಅಶೋಕವನದ ಸೀತೆಯಂತೆ ಒಣಗಿ ಬೋಳು ಬೋಳಾದ ಮರಗಳನ್ನು ನೋಡಿದಾಗ ಮನಸ್ಸಿಗೆ ಮಂಕು ಬಡಿದಂತಾಗುತ್ತದೆ. ಉದುರಿದ ಎಲೆಗಳು ನೆಲದ ಮೇಲೆ ಮೆತ್ತನೆಯ ಹಾಸಿಗೆಯನ್ನೇ ಮೂಡಿಸುತ್ತದೆ. ಆದರೆ ಎದುರು ಮನೆಯ ಕೆಲಸದ ಹುಡುಗಿ ಮನಸಿನಲ್ಲೇ ಬೈದುಕೊಳ್ಳುತ್ತಾ ಆ ಎಲೆಕಸವನ್ನು ಗುಡಿಸಿ ಪಕ್ಕಕ್ಕೆ ತಳ್ಳಿ ಬಿಡುತ್ತಾಳೆ.

ಮರದ ತುಂಬಾ ಎಲೆಗಳಿರುವಾಗ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಸರಸರನೆ ಓಡಾಡುವ ಅಳಿಲೂ ಕಾಣದಂತಾಗುತ್ತದೆ. ‘ಅಯ್ಯೋ! ಎಲ್ಲವೂ ಹೊರಟೇ ಹೋಯ್ತಲ್ಲಾ’ ಎಂದುಕೊಳ್ಳುವಷ್ಟರಲ್ಲೇ ಮಾರನೆಯ ದಿನ ಬಾಲ್ಕನಿಯಲ್ಲಿ ಕುಳಿತು ಕಾಫಿ ಕುಡಿಯುವಾಗ ಮೆಲ್ಲನೆ ಪುಟ್ಟಪುಟ್ಟದಾಗಿ ಚಿಗುರುವ ಎಳೆಯ ಎಲೆಗಳು ಗೋಚರವಾಗುತ್ತವೆ.

ನಂತರ ಎಡಬಿಡದೆ ದುಡಿಯುವ ತಾಯಿಯಂತೆ, ಆ ಮರ ತನ್ನ ಮಕ್ಕಳಿಗೆ ಎಲ್ಲಿ ಬಿಸಿಲಿನ ಬೇಗೆಯನ್ನು ತಡೆಯಲಾಗುವುದಿಲ್ಲವೋ ಎನ್ನುವಂತೆ ನೋಡ ನೋಡುತ್ತಿರುವಂತೆಯೇ ತನ್ನೊಡಲೊಳಗೆ ಹೊಳೆಯುವ ಹಸಿರು ಎಲೆಗಳನ್ನು ಪೂರ್ಣವಾಗಿ ತುಂಬಿಸಿಕೊಳ್ಳುತ್ತದೆ.

ನಾನು ಯಾವಾಗಲೂ ಹೀಗೆಯೇ ಇದ್ದೆ ಅಲ್ಲವೇ? ಎನ್ನುವಂತೆ ಗಾಳಿ ಬೀಸಿದಾಗ ನಸು ನಗುತ್ತಾ ಬಿನ್ನಾಣದಿಂದ ತನ್ನ ಹೊಸ ಹಸುರಿನಿಂದ ನಳನಳಿಸುವ ಎಲೆಗಳನ್ನು ಮುದದಿಂದ ಅಲ್ಲಾಡಿಸುವ ಪರಿಯೇನು? ಅಂತೂ ಚೈತ್ರದ ಚಿಗುರ ನೋಡುವ ಭಾಗ್ಯವೂ ಈ ಹುಲುಮಾನವರದಾಗುತ್ತದೆ.

ಪ್ರಕೃತಿಯು ಚೈತ್ರವನ್ನು ಸ್ವಾಗತಿಸುವ ಪರಿ ಇದಾದರೆ ತರಕಾರಿ ಅಂಗಡಿಗಳಲ್ಲಿನ ಎಳೆಯ ಮಾವಿನ ಕಾಯಿ, ಚಪ್ಪರಿಸಿ ತಿನ್ನುವ ಹುಳಿ ಚಿತ್ರಾನ್ನವನ್ನು ನೆನಪಿಸಿ ಬಾಯಿಯಲ್ಲಿ ನೀರೂರಿಸುತ್ತದೆ. ಅಂತೂ ಚೈತ್ರದ ಆಗಮನವಾಗಿಯೇ ಬಿಡುತ್ತದೆ. ಇಷ್ಟು ಹೊತ್ತಿಗೆ ಸ್ವಲ್ಪ ಮಳೆ ಬರಬೇಕಿತ್ತಲ್ಲಾ ಎನ್ನುವುದು ಪಾರ್ಕಿನಲ್ಲಿ ಕುಳಿತ ಹೆಂಗಳೆಯರ ಮಾತು. ‘ಇರುವ ಮರಗಳನ್ನೆಲ್ಲಾ ಕಡಿದು ಹಾಕಿ ಮಳೆ ಇಲ್ಲಾ ಅಂದರೆ ನಾನೇನು ಮಾಡಲಿ?’ ಎಂದು ಉಸುರುವ ಬಿಡಿ ಬಿಡಿ ಮೋಡಗಳು.

ಬಿಸಿಲಾದರೇನು, ಸೆಕೆಯಾದರೇನು ಎ.ಸಿ. ಬಸ್ಸಿನಲ್ಲಿ, ವಿಮಾನದಲ್ಲಿ ಹಬ್ಬದ ರಜೆಯನ್ನು ಎಂಜಾಯ್ ಮಾಡುವ ಐ.ಟಿ. ಹೈಕಳು ಒಂದೆಡೆಯಾದರೆ, ಮನೆಯಲ್ಲೇ ಏಕೆ ಹೋಳಿಗೆ ಮಾಡಬೇಕು? ಮೊಬೈಲಿನ ಮೇಲೆ ಬೆರಳನ್ನಾಡಿಸಿದರೆ ಮನೆ ಬಾಗಿಲಿಗೆ ಬರುತ್ತದೆ ಬಿಸಿ ಬಿಸಿ ಒಬ್ಬಟ್ಟು, ಎನ್ನುವ ಹೆಣ್ಣುಗಳು. ಇಲ್ಲವಾದರೆ ಅಲ್ಲಿಗೆ ಹೋಗಿ ಸವಿಯಬಹುದು ಹೋಳಿಗೆ ಊಟವನ್ನು, ಮನೆಯಲ್ಲಿ ಅಜ್ಜಿ ಇದ್ದರೆ ಅವಳ ಗೊಣಗಾಟ ತಡೆಯಲಾಗದೆ ತಲೆಗೆ ಎಣ್ಣೆನೀರಿನ ಶಾಸ್ತ್ರ ನಡೆದೇ ತೀರುತ್ತದೆ. ಬೇರೇನನ್ನು ಮರೆತರೂ ಯುಗಾದಿಯ ಶಾಪಿಂಗ್ ಮಾತ್ರ ಮರೆಯಲಿಕ್ಕುಂಟೆ. ಅದೂ ಸಾಂಗೋಪಾಂಗವಾಗಿ ನಡೆಯುತ್ತದೆ.

ಅಭ್ಯಂಜನ, ಮನೆಯದೋ ಅಥವಾ ಹೊರಗಿನದೋ, ಹೋಳಿಗೆ ಊಟವಾದ ಮೇಲೆ ದೇವರ ದರ್ಶನವೂ ಆಗಬೇಕಲ್ಲವೇ? ದೇವಸ್ಥಾನಕ್ಕೆ ಭೇಟಿ, ಶಾಸ್ತ್ರಕ್ಕಾಗಿ ಪಂಚಾಂಗ ಶ್ರವಣ, ಇಲ್ಲವಾದರೆ ಟಿ.ವಿ.ಯಲ್ಲೇ ಸರ್ವವೂ ನೆರವೇರುತ್ತದೆ. ಬಣ್ಣ ಬಣ್ಣದ ಸೀರೆಯನ್ನುಟ್ಟು ಚಂದವಾಗಿ ಅಲಂಕಾರ ಮಾಡಿಕೊಂಡು ಸುಂದರವಾಗಿ ಮಾತನಾಡುವ ಲಲನೆಯರು, ಜೊತೆಗೆ ಬಹು ವಿಧದ, ಬಹುಸಂಖ್ಯೆಯ ಸರಗಳನ್ನು ಹಾಕಿಕೊಂಡು ದೊಡ್ಡದಾಗಿ ಕುಂಕುಮವನ್ನಿಟ್ಟು ಕೊಂಡು ಪಂಚಾಂಗದಲ್ಲಿನ ವರ್ಷದ ಭವಿಷ್ಯವನ್ನು ಹೇಳುವ ಮಾರ್ನಿಂಗ್ ಬ್ಯಾಂಡ್ ಗುರುಗಳು, ನೋಡನೋಡುತ್ತಿದ್ದಂತೆ ಯುಗಾದಿ ಆಗಿಯೇ ಬಿಡುತ್ತದೆ; ಆ ದಿನದ ಸಂಭ್ರಮವೂ ಮುಗಿದೇ ಬಿಡುತ್ತದೆ! ಮತ್ತೆ ಅದೇ ಸೋಮವಾರ, ಬೆಳಿಗ್ಗೆ ಏಳು, ಆಫೀಸಿಗೆ ಹೊರಡು, ಶಾಲೆಗೆ ಹೋಗು, ಇನ್ನೂ ಪರೀಕ್ಷೆಗಳು ಬಾಕಿ ಇದ್ದರೆ ಅವಕ್ಕೆ ಸಿದ್ಧವಾಗು, ಮತ್ತದೇ ದಿನಚರಿ ಪ್ರಾರಂಭವಾಗುತ್ತದೆ. ಆದರೂ ಚೈತ್ರದ ಚಿಗುರು, ಮಾವಿನ ಘಮಲು, ಹೋಳಿಗೆಯ ಸವಿಯನ್ನು ಮರೆಯಲಾದೀತೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry