ವಿನಾಶಕಾಲೆ ವಿಪರೀತ ಸುದ್ದಿ!

7

ವಿನಾಶಕಾಲೆ ವಿಪರೀತ ಸುದ್ದಿ!

Published:
Updated:
ವಿನಾಶಕಾಲೆ ವಿಪರೀತ ಸುದ್ದಿ!

ಸುದ್ದಿಗಳನ್ನು ಪ್ರಕಟಿಸುವುದಕ್ಕೆಂದೇ ದಿನಪತ್ರಿಕೆಗಳು ಹುಟ್ಟಿಕೊಂಡಿರುವುದು ಎಷ್ಟು ಸತ್ಯವೋ, ಸುದ್ದಿ ಮಾಡುವುದಕ್ಕೆಂದೇ ಅನೇಕರು ಹುಟ್ಟಿಕೊಂಡಿರುವುದು ಕೂಡಾ ಅಷ್ಟೇ ಸತ್ಯ. ಈ ಮಾತನ್ನು ಜಾರ್ಜ್ ಆರ್ವೆಲ್ ಅಥವಾ ಮಾರ್ಕ್ ಟ್ವೈನ್ ಹೇಳಿದ್ದಾರೆ ಎಂದು ದಯವಿಟ್ಟು ಯಾರೂ ತಪ್ಪು ತಿಳಿದುಕೊಳ್ಳಬಾರದು. ಯಾಕೆಂದರೆ ಇದೆಲ್ಲಾ ಆರ್ವೆಲ್, ಟ್ವೈನ್ ಕಾಲದ ಬೆಳವಣಿಗೆ ಅಲ್ಲ. ಈ ‘ಸುದ್ದಿವೀರರು’ ಹುಟ್ಟಿಸುವಂತಹ ಸುದ್ದಿಗಳೆಲ್ಲಾ ಸಾಮಾನ್ಯ ಸುದ್ದಿಗಳೇನಲ್ಲ. ಎಲ್ಲವೂ ‘ಸೆನ್ಸೇಷನಲ್‌ ನ್ಯೂಸೆನ್ಸು’ಗಳೇ! ಇವರಿಂದಾಗಿ ಸುದ್ದಿ ಕೋಣೆಗಳ ನಲ್ಲಿಯಲ್ಲಿ 24 ಗಂಟೆಯೂ ನೀರು ಹರಿದಷ್ಟೇ ನಿರಂತರವಾಗಿ ಸುದ್ದಿ ಸರಬರಾಜು ಆಗುತ್ತಿರುತ್ತದೆ.

ಸುದ್ದಿವೀರರು ಅಂದ ಕೂಡಲೇ ನಮ್ಮ ಗಮನ ರಾಜಕಾರಣಿಗಳತ್ತ ಓಡುವ ಅಗತ್ಯವಿಲ್ಲ. ಸಾಮಾನ್ಯ ಜನರೂ ಇಂತಹ ವಿಶೇಷ ಸುದ್ದಿಗಳನ್ನು ‘ಸರಬರಾಜು’ ಮಾಡುತ್ತಿರುತ್ತಾರೆ. ಮೊನ್ನೆ ಅಪ್ಪನೊಬ್ಬ ಮಗನ ಮುಂಗೈಯನ್ನೇ ಕಡಿದುಬಿಟ್ಟ ಸುದ್ದಿಯನ್ನು ನೀವು ಓದಿರಬಹುದು. ಮಗನಿಗೆ ಮೊಬೈಲ್‌ನಲ್ಲಿ ಸಿಕ್ಕಾಪಟ್ಟೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ. ಬೇರೆ ಅಪ್ಪಂದಿರಾಗಿದ್ದರೆ ಚಟ ನಿಲ್ಲಿಸುವುದಕ್ಕೆ ಧಡಾಭಡಾಂತ ಹೊಡೆಯುತ್ತಿದ್ದರು ಅಥವಾ ಹೆಚ್ಚೆಂದರೆ ಕಣ್ಣಿಗೆ ಮೆಣಸಿನ ಪುಡಿ ಹಾಕುತ್ತಿದ್ದರೇನೋ. ಆದರೆ ಈ ಅಪ್ಪನಿಗೆ ಆತನ ‘ಸಾಧನೆ’ ದೇಶದಲ್ಲಿ ದೊಡ್ದ ಸುದ್ದಿಯಾಗಬೇಕೆಂದಿತ್ತು. ಅದಕ್ಕೇ ಆತ ಮಗನ ಒಂದು ಮುಂಗೈಯನ್ನೇ ಕಡಿದಿದ್ದ. ಇನ್ನೊಂದು ಮುಂಗೈಯನ್ನು ಯಾಕೆ ಉಳಿಸಿದ್ದಾನೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ‘ಮುಂಗೈ’ ಸುದ್ದಿಯಿಂದ ಪ್ರೇರಿತಳಾದ ಉತ್ತರಭಾರತದ ಮಹಿಳೆಯೊಬ್ಬಳು, ಮೂರೂ ಹೊತ್ತು ಮೊಬೈಲ್‌ನಲ್ಲಿ ಸೆಕ್ಸಾಟ ನೋಡಿಯೇ ಹೊಟ್ಟೆ ತುಂಬಿಸುತ್ತಿದ್ದ ಗಂಡನಿಗೆ, ಸಿಕ್ಕಿದ ಆಯುಧಗಳಲ್ಲಿ ಹಿಗ್ಗಾಮುಗ್ಗಾ ಹೊಡೆದು, ಮಹಿಳಾ ದಿನವನ್ನು ಗಡದ್ದಾಗಿ ಆಚರಿಸಿದ್ದು ದೇಶದಾದ್ಯಂತ ‘ಬಡಾ ಖಬರ್’ ಆಯಿತು. ಗಂಡನಿಗೆ ಬುದ್ಧಿ ಕಲಿಸುವುದು ಮತ್ತು ಪತ್ರಿಕೆಗಳಿಗೆ ಸುದ್ದಿ ಕಳುಹಿಸುವುದು ಆಕೆಯ ಉದ್ದೇಶವಾಗಿರಬೇಕು.

ವಿಶೇಷ ಸುದ್ದಿ ಮಾಡುವ ಇರಾದೆಯೇನೂ ಇಲ್ಲದಿದ್ದರೆ ಕಳೆದ ವಾರ ತೇಜ್ ರಾಜ್ ಎಂಬ ನರಪೇತಲನೊಬ್ಬ ಮೊದಲೇ ಚಿಂತಾಜನಕ ಪರಿಸ್ಥಿತಿಯಲ್ಲಿದ್ದ ಲೋಕಾಯುಕ್ತವನ್ನು ಇನ್ನಷ್ಟು ತೇಜೋವಧೆ ಮಾಡುವುದಕ್ಕಿಳಿಯುತ್ತಿರಲಿಲ್ಲ. ಲೋಕಾಯುಕ್ತರ ಕೊಲೆ ಮಾಡಲು ದೇವರ ಸಮ್ಮತಿ ಕೇಳಿಕೊಂಡೇ ಬಂದಿದ್ದನ್ನು ಆತ ಹೆಮ್ಮೆಯಿಂದ ಹೇಳುತ್ತಿದ್ದ ಕೂಡಾ! ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುತ್ತಿದ್ದರೆ ಅಷ್ಟು ‘ಫೇಮಸ್’ ಆಗಲ್ಲ ಎಂದೇ ಈ ಭೂಪನಿಗೆ ಬಾಪೂಜಿಯನ್ನು ಒಂದು ಮಾತು ಕೇಳೋಣ ಎಂದು ಅನಿಸಲಿಲ್ಲ.

ಈಗ ಕೆಲವರು ‘ಆತ್ಮಹತ್ಯೆ’ಯನ್ನೂ ಸುಮ್ಮನೆ ಮಾಡಿಕೊಳ್ಳುವುದಿಲ್ಲ. ತನ್ನ ಮೊಬೈಲ್‌ನಿಂದ ಸೆಲ್ಫಿ ತೆಗೆಯುತ್ತಲೇ ಸಾಯುತ್ತಾರೆ! ರೈಲು ಹಳಿ ಮೇಲೆ ನಿಂತುಕೊಂಡು ಹತ್ತಿರ ಬರುತ್ತಿರುವ ರೈಲಿನ ಹಿನ್ನೆಲೆ ಇಟ್ಟುಕೊಂಡು ಮೊಬೈಲ್ ಸೆಲ್ಫಿ ಕ್ಲಿಕ್ಕಿಸುವವರು ಕೂಡಾ ಇದೇ ಗುಂಪಿಗೆ ಸೇರಿದವರು. ಎಂತಹ ದುರಂತ ನೋಡಿ. ಇವರಿಗೆಲ್ಲಾ ತಮ್ಮ ಆತ್ಮಹತ್ಯೆ ಸುದ್ದಿ ಬಾಕ್ಸ್ ಐಟಮ್‌ನಲ್ಲೇ ಬರಬೇಕೆಂದು ಆಸೆಯಿದ್ದಿರಬಹುದೇ?

ಈಗ ಪ್ರಚಲಿತದಲ್ಲಿರುವ ಕುಬೇರ ಬ್ಯಾಂಕ್ ದರೋಡೆಕೋರರನ್ನೇ ತೆಗೆದುಕೊಳ್ಳಿ. ಇವರಿಗೆಲ್ಲಾ ಸಾಲ ಹಿಂತಿರುಗಿಸುವ ಸಾಮರ್ಥ್ಯ ಇಲ್ಲ ಅಂದುಕೊಳ್ಳಬೇಡಿ. ಅವರು ಹಾಗೆ ಸುಮ್ಮನೆ ಬೆಪ್ಪರಂತೆ ಸಾಲ ಹಿಂತಿರುಗಿಸಿದರೆ ಸುದ್ದಿ ಆಗುತ್ತಿದ್ದರಾ? ಅದು ಬಿಡಿ, ದೇಶ ಬಿಟ್ಟು ಪರಾರಿಯಾಗುವ ಇವರು ಕೂಡಲೇ ದೇಶಕ್ಕೆ ವಾಪಸು ಬಂದರೆ ಅದರಲ್ಲೇನು ಮಜಾ ಇದೆ ಹೇಳಿ! ಕೆಲವು ದಿನಗಳ ಮಟ್ಟಿಗೋ ಅಥವಾ ವರ್ಷದುದ್ದಕ್ಕೂ ಸುದ್ದಿಯಲ್ಲಿರಬೇಕಿದ್ದರೆ ಸಿಬಿಐಗೆ ಅಜ್ಞಾತ ಸ್ಥಳದಿಂದ ಆಗಾಗ ಧಮ್ಕಿ ನೀಡುತ್ತಲೇ ಇರಬೇಕು.

ಈಚೆಗೆ ಕೇರಳದಲ್ಲಿ ಕೆಲವು ವಿಪರೀತ ಬುದ್ಧಿವಂತರು ಆದಿವಾಸಿ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಕ್ಕೆ, ಆತ ಸ್ವಲ್ಪ ಅಕ್ಕಿ ಕದ್ದಿದ್ದಾನೆ ಎಂಬುದು ಮಾತ್ರ ಕಾರಣವಲ್ಲ. ಅವರಿಗೆ ತಮ್ಮ ವೀರಪೌರುಷ ವಿವಿಧ ಮಾಧ್ಯಮಗಳಲ್ಲಿ ಬರಬೇಕಾಗಿತ್ತು. ಅದಕ್ಕೇ ಆ ಘಟನೆಯನ್ನು ಸ್ವತಃ ಅವರೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು.

ನಾವು ಎಂತೆಂತಹ ಹಂತಕರನ್ನು ನೋಡಿದ್ದೇವೆ. ತಪ್ಪಿಸಿಕೊಳ್ಳಲು ಅವರೆಲ್ಲಾ ವಿವಿಧ ಉಪಾಯಗಳನ್ನೂ ‘ಸ್ಕೆಚ್’ ಹಾಕಿರುತ್ತಾರೆ. ಆದರೆ ಇಲ್ಲೊಬ್ಬ ತನ್ನ ಪತ್ನಿಯನ್ನು ಕೊಂದು, ಆಕೆಯ ಕಿವಿಗಳೆರಡನ್ನೂ ಪೊಲೀಸ್ ಠಾಣೆಗೆ ತಂದು ಅಟ್ಟಹಾಸ ಮೆರೆದಿದ್ದಾನೆ! ಮಾಧ್ಯಮಗಳಿಗೆ ‘ಸೆನ್ಸೇಷನ್’ ಸುದ್ದಿ ಕೊಡಲೆಂದೇ ಅಲ್ಲವೇ ಆತ ಹಾಗೆ ಮಾಡಿದ್ದು?

ಬೆಂಗಳೂರಿನಲ್ಲಿ ತಪ್ಪು ಮಾಡುವವರನ್ನು ಪೊಲೀಸರು ಹಿಡಿದು ಎರಡು ಬಾರಿಸುವುದಕ್ಕಿಂತ ಹೆಚ್ಚಾಗಿ, ತಪ್ಪೆಸಗಿದವರೇ ಪೊಲೀಸರಿಗೆ ನಾಲ್ಕು ಬಾರಿಸುವುದು ವಿಶೇಷ ಸುದ್ದಿಯಾಗುತ್ತಿದೆ. ತಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಬಿಟ್ಟರೆ ಅದು ಪತ್ರಿಕೆಗಳಲ್ಲಿ ಕನಿಷ್ಠ ಸಿಂಗಲ್ ಕಾಲಂ ಸುದ್ದಿಯೂ ಆಗುವುದಿಲ್ಲ ಎಂಬ ಅರಿವು ಈ ಪೋಲಿ ಹುಡುಗರಿಗೆ ಇದ್ದಂತಿದೆ.

ಸರ್ಕಾರಿ ನುಂಗಪ್ಪರ ಮನೆಗಳಿಗೆ ಎಷ್ಟೇ ದಾಳಿ ಆಗಲಿ, ಅವರ ‘ವಂಶೋದ್ಧಾರ’ ಆಗುತ್ತಲೇ ಇರುತ್ತದೆ. ಥೇಟ್ ಹೆಗ್ಗಣಗಳ ಹಾಗೇ! ಇದನ್ನು ಗಮನಿಸಿದರೆ ಈ ಮಹಾಶಯರು ತಮ್ಮ ಶ್ರೀಮಂತಿಕೆ ತೋರಿಸುವುದಕ್ಕೆಂದೇ ಭ್ರಷ್ಟರಾಗುತ್ತಿದ್ದಾರೆ ಎಂದನಿಸುತ್ತದೆ. ಇವರೆಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗುವ ನುಂಗಪ್ಪರ ಪಟ್ಟಿಯನ್ನು ‘ಫಾರ್ಚೂನ್’ ಪತ್ರಿಕೆಯಲ್ಲಿ ಪ್ರಕಟವಾಗುವ ವಿಶ್ವದ ಅತೀ ಕುಬೇರರ ಪಟ್ಟಿಗೆ ಸಮಾನ ಎಂದೇ ಭಾವಿಸಿರಬಹುದು!

ವಿನಾಶಕಾಲೆ ವಿಪರೀತ ಬುದ್ಧಿ. ಅದರ ಫಲವೇ ಇಂತಹ ವಿಪರೀತ ಸುದ್ದಿಗಳು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry