ದೇಹಕ್ಕೆ ಚೈತನ್ಯ ಕೊಡುವ ಎಣ್ಣೆಸ್ನಾನ

7

ದೇಹಕ್ಕೆ ಚೈತನ್ಯ ಕೊಡುವ ಎಣ್ಣೆಸ್ನಾನ

Published:
Updated:
ದೇಹಕ್ಕೆ ಚೈತನ್ಯ ಕೊಡುವ ಎಣ್ಣೆಸ್ನಾನ

ದೇಹ ಹಾಗೂ ಮನಸು ಚೈತನ್ಯಗೊಳ್ಳಬೇಕು ಎನ್ನುವ ಕಾರಣಕ್ಕೆ ಅಭ್ಯಂಗ ಸ್ನಾನಕ್ಕೆ ಮೊರೆ ಹೋಗುವವರು ಹೆಚ್ಚು. ಇದು ಕೆಲವರಿಗೆ ದಿನಚರಿಯಾದರೆ ಇನ್ನು ಕೆಲವರಿಗೆ ಅಭ್ಯಂಗ ಸ್ನಾನ ಮಾಡಲು ಹಬ್ಬ ಹರಿದಿನಗಳು ನೆಪ. ವರ್ಷದ ಮೊದಲ ಹಬ್ಬ ಎಂದೇ ಕರೆಸಿಕೊಳ್ಳುವ ಯುಗಾದಿ ಹಬ್ಬದ ವಿಶೇಷಗಳ ಪೈಕಿ ಅಭ್ಯಂಗ ಸ್ನಾನವೂ ಒಂದು.

ಮರಗಿಡಗಳು ಚಿಗುರಿ ಪ್ರಕೃತಿಗೆ ಹೊಸತನ ತುಂಬುವ ಕಾಲವಿದು. ಚಿಗುರು ಚೈತನ್ಯದ ಕುರುಹು. ದೇಹ, ಮನಸಿನಲ್ಲಿಯೂ ಚೈತನ್ಯ ತುಂಬಬೇಕು ಎಂದರೆ ಅದಕ್ಕೆ ಸುಲಭ ಪರಿಹಾರ ಎಂದರೆ ಎಣ್ಣೆ ಸ್ನಾನ ಎನ್ನುತ್ತಾರೆ ತಜ್ಞರು. ತಮ್ಮ ತಮ್ಮ ದೇಹಪ್ರಕೃತಿಗೆ ಯಾವ ಎಣ್ಣೆ ಸೂಕ್ತವೋ ಅದನ್ನು ಬಳಸಿ ದೇಹಕ್ಕೆ ಮಸಾಜ್‌ ಮಾಡಿಕೊಂಡು ನಂತರ ಬಿಸಿನೀರಿನಿಂದ ಸ್ನಾನ ಮಾಡುವುದು ಅಭ್ಯಂಗ ಸ್ನಾನದ ನಿಯಮ.

‘ಚಳಿ ಸರಿಸಿ ಬೇಸಿಗೆ ಪ್ರಾರಂಭವಾಗಿದೆ. ಚಳಿಗಾಲದಲ್ಲಿ ತ್ವಚೆ ಗಡುಸಾಗುತ್ತದೆ, ಬಿರುಕುಗೊಳ್ಳುತ್ತದೆ, ನಿಸ್ತೇಜಗೊಳ್ಳುತ್ತದೆ. ತ್ವಚೆ ಕಾಂತಿ ಕಳೆದುಕೊಳ್ಳುತ್ತದೆ. ಹೀಗಾಗಿ ಬೇಸಿಗೆಯ ಈ ಕಾಲದಲ್ಲಿ ಅಭ್ಯಂಗ ಸ್ನಾನ ಮಾಡಬೇಕು. ಇದರಿಂದ ಚರ್ಮದ ಕಾಂತಿ ಮರಳುತ್ತದೆ. ಅಲ್ಲದೆ ಬೇಸಿಗೆ ಎಂದರೆ ದೇಹ ಉಷ್ಣಗೊಳ್ಳುವ ಕಾಲ. ಈ ಸಂದರ್ಭದಲ್ಲಿ ಎಣ್ಣೆಯ ಬಳಕೆಯ ಮೂಲಕ ದೇಹವನ್ನು ತಂಪಾಗಿಡುವ ಸಲುವಾಗಿಯೂ ಅಭ್ಯಂಗ ಸ್ನಾನ ಮಾಡಬೇಕು ಎನ್ನುವ ರೂಢಿ ಬೆಳೆದುಬಂತು’ ಎಂದು ಮಾಹಿತಿ ನೀಡುತ್ತಾರೆ ರಾಜಾಜಿನಗರದಲ್ಲಿರುವ ಕ್ಷೇಮ ಆರೋಗ್ಯಧಾಮದ ಆಯುರ್ವೇದ ವೈದ್ಯ ವಸಂತ್‌ ಗೌಡ.

‘ಅಭ್ಯಂಗ ಸ್ನಾನ ಹಬ್ಬಗಳಲ್ಲಿಯಷ್ಟೇ ಎನ್ನುವ ಪರಿಕಲ್ಪನೆ ಈಗಿಲ್ಲ. ಬೆಂಗಳೂರಿನ ವೇಗದ ಬದುಕಿಗೆ ಸಿಲುಕಿಕೊಂಡಿರುವ ಅನೇಕರು ಒತ್ತಡ ಹಾಗೂ ಖಿನ್ನತೆಯಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸ್ಪಾ, ಮಸಾಜ್‌ ಪಾರ್ಲರ್‌ಗಳ ಮೊರೆ ಹೋಗುತ್ತಿದ್ದಾರೆ. ನಮ್ಮಲ್ಲಿಯೂ ನಿರಂತರವಾಗಿ ಎಣ್ಣೆ ಮಸಾಜ್‌ಗಾಗಿ ಗ್ರಾಹಕರು ಬರುತ್ತಾರೆ. ಹೆಚ್ಚಿನವರ ಸಮಸ್ಯೆ ಒತ್ತಡವೇ ಆಗಿರುತ್ತದೆ. ವಯಸ್ಕರು ಹಾಗೂ ಮಂಡಿನೋವಿನಂಥ ಸಮಸ್ಯೆ ಇರುವವರೂ ಬರುತ್ತಾರೆ. ಎಣ್ಣೆ ಮಸಾಜ್‌ ಮಾಡಿದ 15ರಿಂದ 21 ದಿನಗಳ ಕಾಲ ದೇಹ ಹಾಗೂ ಮನಸು ಹಗುರವಾಗಿರುತ್ತದೆ’ ಎನ್ನುತ್ತಾರೆ ಅವರು.

ಮನೆಯಲ್ಲೇ ಎಣ್ಣೆ ಸ್ನಾನ ಮಾಡಿಕೊಳ್ಳುವಂಥವರಿಗೂ ವಸಂತ್‌ ಕೆಲ ಟಿಪ್ಸ್‌ ನೀಡುತ್ತಾರೆ. ‘ಯಾರು ಬೇಕಾದರೂ ಅಭ್ಯಂಗ ಸ್ನಾನ ಮಾಡಬಹುದು. ಬಿ.ಪಿ. ಇರುವವರು ನೆತ್ತಿಯ ಭಾಗದಿಂದ ಆರಂಭಿಸಿ ಕಾಲ್ತುದಿಯ ಮಸಾಜ್‌ನೊಂದಿಗೆ ಮುಗಿಸಬೇಕು. ಬಿ.ಪಿ. ಇಲ್ಲದವರು ಕಾಲ್ತುದಿಯಿಂದ ಮೇಲ್ಮುಖವಾಗಿ ಮಸಾಜ್‌ ಮಾಡಿಕೊಳ್ಳಬೇಕು. ದೇಹ ತಂಪಾಗಲು ಪಾದಕ್ಕೆ ಎಣ್ಣೆ ಹಚ್ಚುವುದು ಒಳ್ಳೆಯದು. ಎಣ್ಣೆ ಸ್ನಾನ ಮಾಡಿಕೊಳ್ಳಲು ವಯಸ್ಸಿನ ಮಿತಿ ಇಲ್ಲ. ಆದರೆ ಅವರ ದೇಹಪ್ರಕೃತಿ ಉಷ್ಣವೇ ತಂಪೇ ಎನ್ನುವುದಕ್ಕೆ ಅನುಗುಣವಾಗಿ ಎಣ್ಣೆ ಆಯ್ದುಕೊಳ್ಳುವುದು ಮುಖ್ಯ. ಎಣ್ಣೆ ಸ್ನಾನ ಮಾಡಿದ ದಿನ ದೇಹ ತಂಪಾಗುವ ಕಾರಣದಿಂದ ಬಿಸಿಬಿಸಿ ಆಹಾರವನ್ನೇ ಸೇವಿಸಬೇಕು. ಫ್ರಿಡ್ಜ್‌ನಲ್ಲಿಟ್ಟ ಇಲ್ಲವೇ ತಂಪಾದ ಆಹಾರ ಸೇವಿಸಬೇಡಿ‘ ಎಂದು ಸಲಹೆ ನೀಡುತ್ತಾರೆ.

ಸಂಪರ್ಕ ಸಂಖ್ಯೆ 080 2357 7635

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry