ತಮಿಳುನಾಡಿನಲ್ಲೂ ದಾಖಲೆಗಳ ಶೋಧ

7
ವಿಕ್ರಮ್ ಇನ್‌ವೆಸ್ಟ್‌ಮೆಂಟ್ ವಂಚನೆ ಪ್ರಕರಣ

ತಮಿಳುನಾಡಿನಲ್ಲೂ ದಾಖಲೆಗಳ ಶೋಧ

Published:
Updated:

ಬೆಂಗಳೂರು: ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್’ ಕಂಪನಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬನಶಂಕರಿ ಪೊಲೀಸರು, ಆರೋಪಿ ರಾಘವೇಂದ್ರ ಶ್ರೀನಾಥ್‌ ಒಡೆತನದ ತಮಿಳುನಾಡಿನ ಕಂಪನಿಯಲ್ಲೂ ಗುರುವಾರ ಪರಿಶೀಲನೆ ನಡೆಸಿದ್ದಾರೆ.

‘ಗ್ರಾಹಕರಿಂದ ಹಣ ಪಡೆದಿದ್ದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ತಮಿಳುನಾಡಿನ ಕಂಪನಿಯಲ್ಲಿ ಇಟ್ಟಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಹೀಗಾಗಿ, ಪಿಎಸ್‌ಐ ಗಿರಿಮಲ್ಲಪ್ಪ ನೇತೃತ್ವದ ತಂಡ, ಗುರುವಾರ ಬೆಳಿಗ್ಗೆ ಆತನನ್ನು ಅಲ್ಲಿಗೆ ಕರೆದುಕೊಂಡು ಹೋಗಿತ್ತು. ಅಲ್ಲಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿಕೊಂಡ ಸಿಬ್ಬಂದಿ, ಶುಕ್ರವಾರ ಬೆಳಗಿನ ಜಾವ ನಗರಕ್ಕೆ ವಾಪಸಾಗಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣದ ಇತರೆ ಆರೋಪಿಗಳಾದ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಕೆ.ಸಿ.ನಾಗರಾಜ್ ಹಾಗೂ ಪ್ರಹ್ಲಾದ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿತು. ವಿಚಾರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಪ್ರಮುಖ ಆರೋಪಿ ರಾಘವೇಂದ್ರನನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ನಾಲ್ವರು ವೈದ್ಯರಿಂದ ದೂರು: ಈ ಕಂಪನಿಯಿಂದ ತಮಗೂ ವಂಚನೆಯಾಗಿದೆ ಎಂದು ನಾಲ್ವರು ವೈದ್ಯರು ಮೈಕೊಲೇಔಟ್, ಜಯನಗರ ಹಾಗೂ ಸದಾಶಿವನಗರ ಠಾಣೆಗಳಿಗೆ ದೂರು ಕೊಟ್ಟಿದ್ದಾರೆ

‘2013ರಲ್ಲಿ ನನ್ನನ್ನು ಭೇಟಿ ಮಾಡಿದ ರಾಘವೇಂದ್ರ ಹಾಗೂ ಆತನ ಪತ್ನಿ ಸುನೀತಾ ಆಚಾರ್ಯ, ‘ನಾವು ಬನಶಂಕರಿಯಲ್ಲಿ ಕಂಪನಿ ನಡೆಸುತ್ತಿದ್ದೇವೆ. ನಮ್ಮಲ್ಲಿ ಹಣ ಹೂಡಿದರೆ, ಉತ್ತಮ ಲಾಭಾಂಶ ನೀಡುತ್ತೇವೆ’ ಎಂದು ಹೇಳಿದರು. ಅವರ ಮಾತನ್ನು ನಂಬಿದ ನಾನು, ಮಗ ರೋಹನ್ ಹಾಗೂ ತಾಯಿ ಆರ್.ಕೆ.ಸಿಂಗ್ ಅವರ ಹೆಸರುಗಳಲ್ಲಿ ₹ 11.34 ಕೋಟಿ ಹೂಡಿಕೆ ಮಾಡಿದ್ದೇನೆ’ ಎಂದು ಸ್ತ್ರೀರೋಗ ತಜ್ಞರಾದ ಸುಮನ್ ಸಿಂಗ್ ಮೈಕೊಲೇಔಟ್ ಠಾಣೆಗೆ ಗುರುವಾರ ದೂರು ಸಲ್ಲಿಸಿದ್ದಾರೆ.

‘ರಾಘವೇಂದ್ರ ದಂಪತಿಯ ಸೂಚನೆಯಂತೆಯೇ ಕಂಪನಿಯ ವ್ಯವಸ್ಥಾಪಕ ನರಸಿಂಹಮೂರ್ತಿ ಅವರಿಗೆ ಹಣ ಪಾವತಿಸಿದ್ದೇನೆ. ವಂಚಿಸುವ ಉದ್ದೇಶದಿಂದಲೇ ಅವರು ಕಂಪನಿ ಪ್ರಾರಂಭಿಸಿರುವ ವಿಚಾರ ಇತ್ತೀಚೆಗೆ ಗೊತ್ತಾಯಿತು. ಹೀಗಾಗಿ, ಆರೋಪಿಗಳ ವಿರುದ್ಧ ಕ್ರಮ ಜರುಗಿಸಿ ನನ್ನ ಹಣ ವಾಪಸ್ ಕೊಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಅದೇ ರೀತಿ, ಕಂಪನಿಗೆ ₹ 5 ಕೋಟಿ ಹೂಡಿಕೆ ಮಾಡಿರುವುದಾಗಿ ಡಾ. ಡಿ.ಸಿ.ಮಹೇಶ್ ಹಾಗೂ ₹ 4 ಕೋಟಿ ಹೂಡಿಕೆ ಮಾಡಿರುವುದಾಗಿ ಡಾ.ಬೃಂದಾ ಚನ್ನಪ್ಪ ಎಂಬುವರು ಜಯನಗರ ಠಾಣೆಯ ಮೆಟ್ಟಿಲೇರಿದ್ದಾರೆ. ₹ 27 ಲಕ್ಷ ವಂಚನೆಯಾಗಿದೆ ಎಂದು ಡಾ.ಆರ್.ಬಾಲಾಜಿ ಎಂಬುವರು ಸದಾಶಿವನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry