ಎಚ್.ಎಂ. ರೇವಣ್ಣ ವಿರುದ್ಧ ಲೋಕಾಯುಕ್ತ, ಎಸಿಬಿಗೆ ದೂರು

ಬೆಂಗಳೂರು: ‘ಎಚ್.ಎಂ. ರೇವಣ್ಣ ಸಾರಿಗೆ ಸಚಿವರಾದ ಬಳಿಕ ಬಸ್‌ಗಳ ಖರೀದಿ ಮತ್ತು ನಿರ್ವಹಣೆಗೆ ₹1,577 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್ ಶುಕ್ರವಾರ ದೂರು ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್‌ಟಿಸಿ), ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ(ಎನ್‌ಇಕೆಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಿಗೆ(ಬಿಎಂಟಿಸಿ) ₹ 970 ಕೋಟಿ ವೆಚ್ಚದಲ್ಲಿ ಬಸ್‌ಗಳನ್ನು ಖರೀದಿಸಲಾಗಿದೆ. ಅವುಗಳ ದುರಸ್ತಿ ಮತ್ತು ನಿರ್ವಹಣೆಗೆ ₹ 607 ಕೋಟಿ ವೆಚ್ಚವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ರೇವಣ್ಣ ಅಧಿಕಾರ ವಹಿಸಿಕೊಂಡ ಆರೂವರೆ ತಿಂಗಳಲ್ಲೆ ಸಾರಿಗೆ ಸಂಸ್ಥೆಗಳಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದ್ದರೂ, ತಮಗೆ ಬೇಕಾದ ಕಂಪನಿಗೆ ಮಾತ್ರ ಅವಕಾಶ ಸಿಗುವಂತೆ ಷರತ್ತುಗಳನ್ನು ವಿಧಿಸಲಾಗಿದೆ’ ಎಂದು ಆರೋಪಿಸಿದ್ದಾರೆ.
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್, ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಅಶೋಕ್ ಆನಂದ್, ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬೊಮ್ಮಯ್ಯ ನಾಯಕ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
**
ಬಸ್ ಖರೀದಿಯೇ ಆಗಿಲ್ಲ: ರೇವಣ್ಣ
‘ನಾನು ಸಾರಿಗೆ ಸಚಿವನಾದ ಬಳಿಕ ಬಸ್ ಖರೀದಿಯೇ ಆಗಿಲ್ಲ’ ಎಂದು ಎಚ್.ಎಂ. ರೇವಣ್ಣ ಸ್ಪಷ್ಟಪಡಿಸಿದರು.
‘ಪ್ರಚಾರಕ್ಕಾಗಿ ಈ ರೀತಿಯ ಆರೋಪ ಮಾಡುವುದು ಎನ್.ಆರ್. ರಮೇಶ್‌ಗೆ ಚಟ. ಈಗ ನನ್ನ ತಂಟೆಗೆ ಬಂದಿದ್ದಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬುದ್ದಿ ಕಲಿಸುತ್ತೇನೆ’ ಎಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯಿಸಿದರು.
‘ದೇಶದಲ್ಲೆ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಎಂಬ ಹೆಸರು ರಾಜ್ಯಕ್ಕೆ ಬಂದಿದೆ. ಕೆಟ್ಟ ಹೆಸರು ತರಲು ಇವರು ಪ್ರಯತ್ನಿಸುತ್ತಿದ್ದಾರೆ. ಮಾರ್ಕೊಪೊಲೋ ಬಸ್ ಖರೀದಿ ಅವ್ಯವಹಾರ ಪ್ರಕರಣವನ್ನು ಸಿಐಡಿಗೆ ವಹಿಸಿರುವುದರಿಂದ, ಸೇಡಿನ ಕ್ರಮವಾಗಿ ನನ್ನ ವಿರುದ್ಧ ಬಿಜೆಪಿ ನಾಯಕರು ಈ ಆರೋಪವನ್ನು ಮಾಡಿಸಿದ್ದಾರೆ’ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.