ರೈತರ ಹೆಸರಲ್ಲಿ ಸಾಲ ಮಾಡಿ ವಂಚನೆ: ಆರೋಪ

7

ರೈತರ ಹೆಸರಲ್ಲಿ ಸಾಲ ಮಾಡಿ ವಂಚನೆ: ಆರೋಪ

Published:
Updated:

ಚನ್ನಮ್ಮನ ಕಿತ್ತೂರು: ‘ತಾಲ್ಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿಂದಿನ ಅಧ್ಯಕ್ಷ ಹಾಗೂ ಶಾಸಕ ಡಿ.ಬಿ. ಇನಾಮದಾರ ರೈತರ ಹೆಸರಿನಲ್ಲಿ ಸಾಲ ಮಾಡಿ ವಂಚಿಸಿದ್ದಾರೆ’ ಎಂದು ರಾಜ್ಯ ರೈತ ಸಂಘ–ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಯಮಕನಮರಡಿ ಆರೋಪಿಸಿದರು.

‘ಬ್ಯಾಂಕ್‌ನಿಂದ ಪಡೆದ ಸಾಲದ ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎನ್ನುವುದನ್ನು ಬಹಿರಂಗಪಡಿಸಬೇಕು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕಾರ್ಖಾನೆ ಸದಸ್ಯರಿಗೆ ತಿಳಿಯದಂತೆ ಸಹಿ ಮಾಡಿಸಿಕೊಂಡು, ಸಾಲ ಪಡೆದುಬೇಕಾಬಿಟ್ಟಿ ವ್ಯಯಿಸಲಾಗಿದೆ.ಮರುಪಾವತಿಸದೆ ಇರುವುದರಿಂದ ರೈತರಿಗೆ ತೊಂದರೆಯಾಗಿದೆ. ಜಮೆಯಾದ ಕಬ್ಬಿನ ಹಣವನ್ನು ಬ್ಯಾಂಕ್‌ನವರು ರೈತರಿಗೆ ನೀಡುತ್ತಿಲ್ಲ. ಸಾಲವನ್ನೇ ಪಡೆಯದ ರೈತರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ದೂರಿದರು.

‘2008-09ನೇ ಸಾಲಿನಿಂದ 2016-17ರವರೆಗೆ ಗಂಧಕರಹಿತ ಸಕ್ಕರೆ ಉತ್ಪಾದನೆ ಮಾಡಲಾಯಿತು. ಈ ಸಕ್ಕರೆಯನ್ನು ಮುಕ್ತ ಮಾರುಕಟ್ಟೆ ಬದಲಿಗೆ, ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡು ಮಾರಲಾಗಿದೆ. ಇದರಿಂದ ಕಾರ್ಖಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿತು’ ಎಂದು ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು.

‘ಕಾರ್ಖಾನೆಯಲ್ಲಿ ಅವರ ಅವಧಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ದಾಸ್ತಿಕೊಪ್ಪ ಚಂದ್ರ ಗೌಡ ಪಾಟೀಲ, ಮುಖಂಡರಾದ ಗುರುಲಿಂಗಸ್ವಾಮಿ ಪೂಜೇರ, ಉಮೇಶ ಗುಂಡಗವಿ, ನೀಲಪ್ಪ ತಿರಕನ್ನವರ, ಅನಿಲ ಪೂಜೇರ ಇದ್ದರು.

ಪ್ರತಿಕ್ರಿಯೆಗೆ ಶಾಸಕ ಡಿ.ಬಿ. ಇನಾಮದಾರ ಲಭ್ಯವಾಗಲಿಲ್ಲ. ಅವರ ಮೊಬೈಲ್‌ ಫೋನ್‌ ಸ್ವಿಚ್ಡ್ ಆಫ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry