ಬಸ್‌ ನಿಲ್ದಾಣದ ಅಧಿಕಾರಿಗೆ ಪ್ರಯಾಣಿಕರಿಂದ ಮುತ್ತಿಗೆ

7

ಬಸ್‌ ನಿಲ್ದಾಣದ ಅಧಿಕಾರಿಗೆ ಪ್ರಯಾಣಿಕರಿಂದ ಮುತ್ತಿಗೆ

Published:
Updated:

ಹೊಸಪೇಟೆ: ಬಳ್ಳಾರಿಗೆ ಬಸ್‌ ಬಿಡದಿರುವುದನ್ನು ಖಂಡಿಸಿ ಪ್ರಯಾಣಿಕರು ಶುಕ್ರವಾರ ರಾತ್ರಿ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದ ಅಧಿಕಾರಿ ಬಸವರಾಜ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಗೆ ಹೋಗಲು ಸಂಜೆ ಏಳು ಗಂಟೆಗೆ ಜನ ನಿಲ್ದಾಣಕ್ಕೆ ಬಂದು ಬಸ್ಸಿಗೆ ಕಾದು ಕುಳಿತಿದ್ದರು. ರಾತ್ರಿ ಒಂಬತ್ತು ಗಂಟೆಯಾದರೂ ಒಂದೇ ಒಂದು ಬಸ್ಸು ಬಂದಿರಲಿಲ್ಲ. ಕಾದು ಕಾದು ಸುಸ್ತಾದ ಜನ ಅಲ್ಲಿಯೇ ಇದ್ದ ನಿಲ್ದಾಣದ ಅಧಿಕಾರಿಗೆ ಮುತ್ತಿಗೆ ಹಾಕಿ ಸಿಟ್ಟು ಹೊರ ಹಾಕಿದರು. ಕೂಡಲೇ ಬಸ್ಸುಗಳನ್ನು ಬಿಡಬೇಕೆಂದು ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬಸವರಾಜ, ‘ಸ್ವಲ್ಪ ಕಾಯಿರಿ, ಬಸ್ಸುಗಳು ಬರುತ್ತವೆ’ ಎಂದರು. ಅದರಿಂದ ಮತ್ತಷ್ಟು ಸಿಟ್ಟಿಗೆದ್ದ ಜನ, ‘ಎರಡು ಗಂಟೆಯಿಂದ ಕಾದು ಕುಳಿತಿದ್ದೇವೆ. ಇಲ್ಲಿಯವರೆಗೆ ಒಂದೇ ಒಂದೂ ಬಸ್ಸು ಬಂದಿಲ್ಲ. ಕೂಡಲೇ ಬಸ್ಸು ಬಿಡಬೇಕು’ ಎಂದು ಪಟ್ಟು ಹಿಡಿದರು.

‘ಮೇಲಧಿಕಾರಿಗಳ ಗಮನಕ್ಕೆ ತಂದು ಬಸ್ಸು ಬಿಡುವ ವ್ಯವಸ್ಥೆ ಮಾಡುತ್ತೇನೆ’ ಎಂದು ಬಸವರಾಜ ಅವರು ಭರವಸೆ ನೀಡಿದ ನಂತರ ಜನ ಸುಮ್ಮನಾದರು. ರಾತ್ರಿ 9.30ಕ್ಕೆ ನಾಲ್ಕು ಬಸ್‌ಗಳನ್ನು ಬಳ್ಳಾರಿಗೆ ಬಿಡಲಾಯಿತು. ಇದರಿಂದ ವಾತಾವರಣ ತಿಳಿಗೊಂಡಿತು. ಬಳ್ಳಾರಿಗೆ ಹೋಗಲು ಸುಮಾರು 150ರಿಂದ 200 ಪ್ರಯಾಣಿಕರು ಸಂಜೆಯಿಂದ ಕಾದು ಕುಳಿತಿದ್ದರು.

ಈ ಕುರಿತು ಈಶಾನ್ಯ ಸಾರಿಗೆ ಸಂಸ್ಥೆ ಹೊಸಪೇಟೆ ಉಪವಿಭಾಗದ ನಿಯಂತ್ರಣಾಧಿಕಾರಿ ಮಹಮ್ಮದ್‌ ಫೈಜ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಏನಾಗಿದೆ ತಿಳಿದುಕೊಂಡು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry