ಇನ್ನು 47 ದಿನ ನೇತ್ರಾವತಿ ನೀರು ಲಭ್ಯ

7
ನೀರಿನರು ಮಿತವ್ಯಯ ಬಳಕೆ ಮೇಯರ್‌ ಭಾಸ್ಕರ ಮೊಯಿಲಿ ಮನವಿ

ಇನ್ನು 47 ದಿನ ನೇತ್ರಾವತಿ ನೀರು ಲಭ್ಯ

Published:
Updated:
ಇನ್ನು 47 ದಿನ ನೇತ್ರಾವತಿ ನೀರು ಲಭ್ಯ

ಮಂಗಳೂರು: ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಇನ್ನು 47 ದಿನಗಳಿಗೆ ಸಾಕಾಗುವಷ್ಟು ನೀರಿದ್ದು, ಸಾರ್ವಜನಿಕರು ನೀರಿನ ಬಳಕೆಯಲ್ಲಿ ಮಿತವ್ಯಯ ಅನುಸರಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಭಾಸ್ಕರ ಮೊಯಿಲಿ ಹೇಳಿದರು.

ಶುಕ್ರವಾರ ಕಿಂಡಿ ಅಣೆಕಟ್ಟೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಸ್ತುತ 5.6 ಮೀಟರ್‌ ಎತ್ತರಕ್ಕೆ ನೀರು ಸಂಗ್ರಹವಾಗಿದೆ. ಎಎಂಆರ್‌ ಅಣೆಕಟ್ಟಿನಲ್ಲಿ 18.5 ಮೀಟರ್‌ ಎತ್ತರಕ್ಕೆ ನೀರು ನಿಲ್ಲಿಸಲಾಗಿದ್ದು, ಒಟ್ಟು 9.17 ಎಂಸಿಎಂ (ಮಿಲಿಯನ್‌ ಕ್ಯೂಬಿಕ್‌ ಮೀಟರ್‌) ನೀರು ಸಂಗ್ರಹವಿದೆ. ಮುಂದಿನ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ನೀರಿನ ಕೊರತೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗುವುದು. ಸಾರ್ವಜನಿಕರೂ ನೀರನ್ನು ಆದಷ್ಟು ಮಿತವಾಗಿ ಬಳಸಬೇಕು. ಕೈತೋಟಕ್ಕೆ ಮತ್ತು ವಾಹನ ತೊಳೆಯಲು ಹೆಚ್ಚು ನೀರನ್ನು ವ್ಯರ್ಥ ಮಾಡಬಾರದು’ ಎಂದು ಮನವಿ ಮಾಡಿಕೊಂಡರು.

ತುಂಬೆ ಕಿಂಡಿ ಅಣೆಕಟ್ಟಿನ ನೀರಿನ ಸಂಗ್ರಹ ಕಡಿಮೆ ಆದಾಗ ಎಎಂಆರ್‌ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಲಾಗುವುದು. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಳೆಯೂ ಬಂದಲ್ಲಿ ನೀರಿನ ಹರಿವು ತುಸು ಹೆಚ್ಚಾಗಬಹುದು. ಅಲ್ಲದೆ ನೀರು ಆವಿಯಾಗುವ ಪ್ರಮಾಣವೂ ಆಗ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಬೇಸಿಗೆಯಲ್ಲಿ ನೀರು ನಿರ್ವಹಣೆಯ ಮೇಲೆ ನಿಗಾ ಇರಿಸಲಾಗುವುದು ಎಂದು ಹೇಳಿದರು.

ತುಂಬೆ ಕಿಂಡಿ ಅಣೆಕಟ್ಟಿನಲ್ಲಿ 5 ಮೀಟರ್‌ ಎತ್ತರಕ್ಕೆ ನೀರು ಸಂಗ್ರಹಿಸಿದಾಗ ಒಟ್ಟು 28 ಮಂದಿ ಭೂ ಮಾಲೀಕರ 20.53 ಎಕರೆ ಖಾಸಗಿ ಜಮೀನು ಮತ್ತು 12 ಎಕರೆ ಸರ್ಕಾರಿ ಜಮೀನು ಮುಳುಗಡೆ ಆಗಿದೆ. ಖಾಸಗಿ ಜಮೀನು ಮಾಲೀಕರಿಗೆ ನೀಡಲು ಬಿಡುಗಡೆಯಾದ ₹ 7 ಕೋಟಿ ಮೊತ್ತದಲ್ಲಿ ಪರಿಹಾರ ವಿತರಣೆ ನಡೆಯುತ್ತಿದೆ. 12 ಮಂದಿಗೆ ₹ 4 ಕೋಟಿ ಮೊತ್ತ ವಿತರಣೆಯಾಗಿದೆ. ಕೆಲವು ಭೂ ಮಾಲೀಕರ ನಡುವೆ ವ್ಯಾಜ್ಯಗಳು ಇರುವುದರಿಂದ ಪರಿಹಾರ ವಿತರಣೆ ಸಾಧ್ಯವಾಗುತ್ತಿಲ್ಲ. ಆದರೆ ಹಣವನ್ನು ಪಾಲಿಕೆಯು ಪ್ರತ್ಯೇಕ ಖಾತೆಯಲ್ಲಿ ಇರಿಸಿದೆ ಎಂದರು.

ಈ ವರ್ಷ ಜಿಲ್ಲಾಧಿಕಾರಿ ಸೂಚನೆ ಮೇರೆಗೆ 6 ಮೀಟರ್‌ ನೀರು ನಿಲ್ಲಿಸಲು ಸೂಚಿಸಲಾಗಿದ್ದು, ಒಟ್ಟು 36 ಭೂ ಮಾಲೀಕರ 30 ಎಕರೆ ಭೂಮಿ ಮುಳುಗಲಿದೆ. ಅದರಲ್ಲಿ 21.46 ಎಕರೆ ಸರ್ಕಾರಿ ಭೂಮಿ ಸೇರಿದೆ. ಇವರಿಗೆ ಪರಿಹಾರ ನೀಡಲು 10 ಕೋಟಿ ಎಸ್‌ಎಫ್‌ಸಿ ನಿಧಿಯಿಂದ ಹಣ ಬಿಡುಗಡೆ ಮಾಡಲಾಗಿದ್ದು, ಸರ್ವೆ ಕೆಲಸ ಪ್ರಗತಿಯಲ್ಲಿದೆ. ಬಂಟ್ವಾಳ ತಾಲ್ಲೂಕು ತಹಶೀಲ್ದಾರ್‌ ಅವರು ಸಮೀಕ್ಷೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜಮೀನಿನ ಸರಿಯಾದ ದಾಖಲೆ ಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿಸೋಜ, ಉಪಮೇಯರ್‌ ಮಹಮ್ಮದ್‌, ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಪಾಲಿಕೆ ಸದಸ್ಯರಾದ ಅಪ್ಪಿಲತಾ, ಸಬಿತ ಮಿಸ್ಕಿತ್‌, ಅಶೋಕ್‌ ಕುಮಾರ್ ಡಿ.ಕೆ., ಆಯುಕ್ತರಾದ ಮೊಹಮ್ಮದ್‌ ನಜೀರ್‌, ಸಹ ಕಾರ್ಯನಿರ್ವಾಹಕ ಎಂಜಿನಿಯರ್‌ ನರೇಶ್‌ ಶೆಣೈ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry