ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿ ಭದ್ರತೆ: ದಾಖಲೆ ಬಿಡುಗಡೆ ಮಾಡಲಿ’

ಪ್ರಮೋದ್ ಮಧ್ವರಾಜ್ ಮೇಲಿನ ಅಕ್ರಮ ಸಾಲ ಸಂಬಂಧಪಟ್ಟ ದಾಖಲೆ ಕೋರಿ ಬ್ಯಾಂಕಿಗೆ ಅರ್ಜಿ
Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರ ಮೇಲಿನ ಅಕ್ರಮ ಸಾಲ ಹಾಗೂ ವ್ಯವಹಾರಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಅನ್ವಯ ನೀಡುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಆಬ್ರಹಾಂ ಅವರು ಶನಿವಾರ ಸಿಂಡಿಕೇಟ್ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ಎಸ್‌.ಎಸ್‌. ಹೆಗ್ಡೆ ಅವರಿಗೆ ಅರ್ಜಿ ಸಲ್ಲಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅಬ್ರಹಾಂ, ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ನಿಯಮಾನುಸಾರವೇ ಸಾಲ ನೀಡಲಾಗಿದೆ, ಅದರಲ್ಲಿ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಬ್ಯಾಂಕ್‌ನ ಮುಖ್ಯಸ್ಥರು ಸ್ಪಷ್ಟನೆ ನೀಡಿರುವುದು ಆಶ್ಚರ್ಯ ತಂದಿದೆ ಎಂದರು.

‘ಉಪ್ಪೂರು ಗ್ರಾಮದಲ್ಲಿರುವ 3 ಎಕರೆ 8 ಸೆಂಟ್ಸ್‌ ಭೂಮಿಗೆ ₹ 34.50 ಕೋಟಿಗಳಷ್ಟು ಸಾಲವನ್ನು 2 ಬಾರಿ ನೀಡಿದ್ದಾರೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿಯೂ ಇಲ್ಲದೆ ಇರುವ ಬೆಲೆಯನ್ನು ಉಡುಪಿ ನಗರದ ಹೊರವಲಯದಲ್ಲಿರುವ ಜಾಗವೊಂದಕ್ಕೆ ನೀಡಿರುವುದು ಅಕ್ರಮಕ್ಕೆ ಸಾಕ್ಷಿ ಆಗಿದೆ’ ಎಂದರು.

₹5 ಕೋಟಿ ಮಾನನಷ್ಟ ಮೊಕದ್ದಮೆ
‘ಸಿಂಡಿಕೇಟ್ ಬ್ಯಾಂಕ್‌ ಯಾವುದೇ ಅಕ್ರಮ ಎಸಗದೇ ಇದ್ದಲ್ಲಿ, ಸಚಿವ ಪ್ರಮೋದ್‌ ಮಧ್ವರಾಜ್‌ ಸಾಲ ಪಡೆಯುವ ಸಂದರ್ಭದಲ್ಲಿ ನೀಡಲಾದ ದಾಖಲೆಯನ್ನು ನೀಡಿ. ಒಂದು ವೇಳೆ ಬೇರೆ ಕಾರಣ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ನನ್ನನ್ನು ಸುಳ್ಳು ಹೇಳುವವ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಸಿದರೆ ಅವರ ವಿರುದ್ಧ ಕನಿಷ್ಠ ₹5 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಟಿ.ಜೆ. ಆಬ್ರಹಂ ಎಚ್ಚರಿಸಿದರು.

ಮತ್ತೆ ಉಡುಪಿಗೆ ಬರುವೆ
‘ಪ್ರಮೋದ್ ಮಧ್ವರಾಜ್ ಅವರ ಸಾಲದಲ್ಲಿ ಮಾತ್ರ ಅಕ್ರಮ ಅಲ್ಲ, ಅವರು ಮಲ್ಪೆಯಲ್ಲಿ ನಡೆಸುತ್ತಿರುವ ಪೆಟ್ರೋಲ್ ಬಂಕ್, ಫಿಶ್ ಮಿಲ್, ಮಣಿಪಾಲದಲ್ಲಿ ಕಟ್ಟುತ್ತಿರುವ ಭಾರೀ ಬಹುಮಹಡಿ ಕಟ್ಟಡಗಳಲ್ಲಿಯೂ ಆಕ್ರಮ ಇದೆ. ಇದನ್ನೆಲ್ಲಾ ಒಂದೊಂದಾಗಿ ಹೊರಗೆಳೆಯುತ್ತೇನೆ. ನಂತರ ವಿವರಗಳನ್ನು ನೀಡುತ್ತೇನೆ’ ಎಂದು ಅಬ್ರಹಾಂ ಹೇಳಿದರು.

**

ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಸಾಲದ ವ್ಯವಹಾರಗಳಿಗೆ ಸಂಬಂಧಪಟ್ಟ ದಾಖಲೆ ನೀಡುವಂತೆ ಅಬ್ರಹಾಂ ಸಲ್ಲಿಸಿರುವ ಆರ್‌ಟಿಐ ಅರ್ಜಿಗೆ ಉತ್ತರಿಸಲಾಗುವುದು.</p>
– ಎಸ್‌.ಎಸ್‌. ಹೆಗ್ಡೆ ಸಿಂಡಿಕೇಟ್ , ಬ್ಯಾಂಕಿನ ಡಿಜಿಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT