ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ್ದು ಅವಿಸ್ಮರಣೀಯ: ದಿನೇಶ್‌ ಕಾರ್ತಿಕ್‌

ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌
Last Updated 19 ಮಾರ್ಚ್ 2018, 20:18 IST
ಅಕ್ಷರ ಗಾತ್ರ

ಕೊಲಂಬೊ: ‘ಬಾಂಗ್ಲಾದೇಶ ಎದುರಿನ ಫೈನಲ್‌ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು ಅವಿಸ್ಮರಣೀಯ’ ಎಂದು ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

‘ತಂಡ ಸಂಕಷ್ಟದಲ್ಲಿದ್ದಾಗ ಶ್ರೇಷ್ಠ ಆಟ ಆಡಿ ಜಯ ತಂದುಕೊಟ್ಟಿದ್ದು ಅತೀವ ಖುಷಿ ನೀಡಿದೆ. ಇದು ಹೆಮ್ಮೆಯ ಭಾವ ಮೂಡಿಸಿದೆ. ಬಾಂಗ್ಲಾ ಎದುರಿನ ಇನಿಂಗ್ಸ್‌ ಜೀವನದಲ್ಲಿ ಎಂದೂ ಮರೆಯಲಾರದಂತಹುದು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಹಿಂದಿನ ಒಂದು ವರ್ಷದಿಂದ ತಂಡದಲ್ಲಿದ್ದೇನೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಶ್ರಮಿಸಿದ್ದೇನೆ. ನಿದಾಸ್‌ ಕಪ್‌ ಟೂರ್ನಿಯಲ್ಲಿ ಆರಂಭದಿಂದಲೂ ನಾವು ಶ್ರೇಷ್ಠ ಆಟ ಆಡಿದ್ದೆವು. ಇಲ್ಲಿ ಟ್ರೋಫಿ ಗೆದ್ದಿರುವುದು ಸಂತಸವನ್ನು ಹೆಚ್ಚಿಸಿದೆ. ಈ ಸಾಧನೆಯ ಹಿಂದೆ ಆಟಗಾರರ ಜೊತೆಗೆ ತಂಡದ ನೆರವು ಸಿಬ್ಬಂದಿಗಳ ಪರಿಶ್ರಮವೂ ಇದೆ’ ಎಂದಿದ್ದಾರೆ.

‘ನಾನು ಕ್ರೀಸ್‌ಗೆ ಬಂದಾಗ ತಂಡದ ಗೆಲುವಿಗೆ 12 ಎಸೆತಗಳಲ್ಲಿ 34ರನ್‌ಗಳು ಬೇಕಿದ್ದವು. ಹೀಗಾಗಿ ಪ್ರತಿ ಎಸೆತವನ್ನೂ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಲೇಬೇಕು ಎಂದು ತೀರ್ಮಾನಿಸಿದ್ದೆ. ಅಂದುಕೊಂಡಂತೆಯೇ ಆಡಿದ್ದರಿಂದ ಗೆಲುವು ಸಾಧ್ಯವಾಯಿತು’ ಎಂದು ತಿಳಿಸಿದ್ದಾರೆ.

‘ಶ್ರೀಲಂಕಾ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಲು ವಿಫಲವಾಗಿತ್ತು. ಹೀಗಾಗಿ ಫೈನಲ್‌ ಪಂದ್ಯ ವೀಕ್ಷಿಸಲು ಹೆಚ್ಚು ಜನ ಬರುವುದಿಲ್ಲ ಎಂದು ನಾವೆಲ್ಲಾ ಭಾವಿಸಿದ್ದೆವು. ಕ್ರೀಡಾಂಗಣದಲ್ಲಿ 20,000ಕ್ಕೂ ಹೆಚ್ಚು ಮಂದಿ ಸೇರಿದ್ದನ್ನು ಕಂಡು ಅಚ್ಚರಿಯಾಯಿತು. ಲೀಗ್‌ ಹಂತದಲ್ಲಿ ನಾವು ಬಾಂಗ್ಲಾ ಎದುರು ಆಡಿದ್ದಾಗ ಪಂದ್ಯ ನೋಡಲು ಬೆರಳೆಣಿಕೆಯಷ್ಟು ಮಂದಿ ಸೇರಿದ್ದರು’ ಎಂದು ದಿನೇಶ್‌ ತಿಳಿಸಿದ್ದಾರೆ.

ಇದು ಅಳುವ ಸಮಯವಲ್ಲ: ‘ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಉತ್ತಮ ಅವಕಾಶ ನಮಗಿತ್ತು. ಕೊನೆಯಲ್ಲಿ ಇದನ್ನು ಕೈಚೆಲ್ಲಿದೆವು. ಇದರಿಂದ ಎಲ್ಲರಿಗೂ ನೋವಾಗಿದೆ. ಹಾಗಂತ ಅಳುತ್ತಾ ಕೂರುವ ಸಮಯ ಇದಲ್ಲ. ಈ ಸೋಲು ನಮಗೆ ಹೊಸ ಪಾಠ ಕಲಿಸಿದೆ. ಭಾರತದ ಎದುರು ಮಾಡಿದ ತಪ್ಪು ಮುಂದೆ ಮರುಕಳಿಸದಂತೆ ಎಚ್ಚರವಹಿಸಬೇಕಿದೆ’ ಎಂದು ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಹೇಳಿದ್ದಾರೆ.

‘ನಾವು ಫೈನಲ್‌ನಲ್ಲಿ ಸೋತಿದ್ದು ಇದು ಐದನೇ ಬಾರಿ. ಏಷ್ಯಾಕಪ್‌ನಲ್ಲೂ ಪ್ರಶಸ್ತಿ ಸುತ್ತಿನಲ್ಲಿ ಎಡವಿದ್ದೆವು. ಭಾರತದ ಎದುರಿನ ಪಂದ್ಯದಲ್ಲಿ 18ನೇ ಓವರ್‌ನವರೆಗೂ ಗೆಲುವು ನಮ್ಮ ಪರವಾಗಿತ್ತು. ಬೌಲರ್‌ಗಳೂ ಚೆನ್ನಾಗಿಯೇ ದಾಳಿ ನಡೆಸಿದ್ದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT