ಹೈಕೋರ್ಟ್‌ ಅಸಮಾಧಾನ

7

ಹೈಕೋರ್ಟ್‌ ಅಸಮಾಧಾನ

Published:
Updated:
ಹೈಕೋರ್ಟ್‌ ಅಸಮಾಧಾನ

ಬೆಂಗಳೂರು: ‘ಜಿ.ಕೆಟಗರಿ ನಿವೇಶನಗಳ ಹಂಚಿಕೆಯಲ್ಲಿ ತಕರಾರು ಎದುರಿಸುತ್ತಿರುವ ಪ್ರಕರಣಗಳ ಪರಿಶೀಲನೆಗೆ ಪ್ರತ್ಯೇಕ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೋರಿಕೆಗೆ ಹೈಕೋರ್ಟ್‌ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬಿಡಿಎ ಪರ ಹಿರಿಯ ವಕೀಲ ಡಿ.ಎನ್‌.ನಂಜುಂಡ ರೆಡ್ಡಿ ಸಲ್ಲಿಸಿದರು.

ಅರ್ಜಿಯ ಬಗ್ಗೆ ಕೊಂಚ ಅತೃಪ್ತಿ ವ್ಯಕ್ತಪಡಿಸಿದ ದಿನೇಶ್‌ ಮಾಹೇಶ್ವರಿ, ‘ಇದಕ್ಕೆಲ್ಲಾ ನಿಮಗೆ ಕೋರ್ಟ್‌ನಿಂದ ಪರವಾನಗಿ ಬೇಕೆ’ ಎಂದು ಪ್ರಶ್ನಿಸಿದರು.

‘ನೀವು ಏನು ಬೇಕಾದರೂ ಮಾಡಿ ಅದು ನಿಮಗೆ ಬಿಟ್ಟದ್ದು. ಒಂದು ವೇಳೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ಅದನ್ನು ಅರ್ಜಿದಾರರು ಬೇಕಾದರೆ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಾರೆ’ ಎಂದು ತಿಳಿಸಿ ವಿಚಾರಣೆಯನ್ನು ಏಪ್ರಿಲ್ 19ಕ್ಕೆ ಮುಂದೂಡಿದರು.

ಕೋರಿಕೆ ಏನು?: ‘ಜಿ.ಕೆಟಗರಿ ನಿವೇಶನಗಳ ಹಂಚಿಕೆಯಲ್ಲಿ 1,300ಕ್ಕೂ ಹೆಚ್ಚು ಪ್ರಕರಣಗಳ ಬಗ್ಗೆ ತಕರಾರು ಇದೆ. ನಿವೃತ್ತ ನ್ಯಾಯಮೂರ್ತಿ ಎ.ಎಂ.ಫರೂಕ್‌ ನೇತೃತ್ವದ ಸಮಿತಿ ಇವುಗಳಲ್ಲಿ ಕೇವಲ 314 ಪ್ರಕರಣಗಳ ಪರಿಶೀಲನೆ ನಡೆಸಿದೆ. ಈ ಸಮಿತಿಗೆ ನೀಡಲಾಗಿದ್ದ ಮಾರ್ಗದರ್ಶಿ ನಿಯಮಗಳ ಪ್ರಕಾರವೇ ಉಳಿದ ತಕರಾರುಗಳ ಕುರಿತಂತೆಯೂ ಪರಿಶೀಲನೆ ನಡೆಸಲು ಪ್ರತ್ಯೇಕ ಸಮಿತಿ ನೇಮಕ ಮಾಡಲು ನಿರ್ದೇಶಿಸಿ’ ಎಂಬುದು ಬಿಡಿಎ ಕೋರಿಕೆ.

‘ಜಿ ಕೆಟಗರಿಗೆ ಸೇರಿದ 314 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2015ರಲ್ಲಿ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಂ. ಫರೂಕ್‌ ನೇತೃತ್ವದ ಮೂವರ ಸಮಿತಿ ನೇಮಕ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry