ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ, ಹಾನಿ

7
ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ, ಹಾನಿ

ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ, ಹಾನಿ

Published:
Updated:
ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ, ಹಾನಿ

ಮೂಡಿಗೆರೆ: ತಾಲ್ಲೂಕಿನ ವಿವಿಧೆಡೆ ಭಾನುವಾರ ಹಾಗೂ ಸೋಮವಾರ ಧಾರಾಕಾರ ಮಳೆಯಾಗಿದ್ದು, ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಯುಗಾದಿ ಸಂಭ್ರಮದಲ್ಲಿದ್ದ ಜನತೆಗೆ ಭಾನುವಾರ ಮಧ್ಯಾಹ್ನ ಬಳಿಕ ಸುರಿದ ಗಾಳಿಮಳೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಕೂವೆ ಸಮೀಪದ ಮಾವಿನಕಟ್ಟೆ ಗ್ರಾಮದ ಅರುಣ ಕುಮಾರ್ ಎಂಬು ವವರ ಮನೆಯ ಮೇಲೆ ಮರಬಿದ್ದು ಹಾನಿಯಾಗಿದೆ. ಮನೆಯ ಸಮೀಪ ನಿಲ್ಲಿಸಿದ್ದ ಬೈಕ್‌ಗೂ ಹಾನಿಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಬಣಕಲ್‌ ಭಾಗದಲ್ಲಿ ಆಲಿಕಲ್ಲು ಸುರಿದು ಹಾನಿಯುಂಟಾಯಿತು. ಮಧ್ಯಾಹ್ನ ಪ್ರಾರಂಭವಾದ ಮಳೆ, ಎರಡು ಗಂಟೆಗೂ ಅಧಿಕ ಕಾಲ ಎಡಬಿಡದೇ ಸುರಿಯಿತು.

ಮಳೆಯ ರಭಸಕ್ಕೆ ಬೂತನಕಾಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದ್ದರಿಂದ, ಭಾನುವಾರ ಸಂಜೆಯಿಂದ ಮುಂಜಾನೆಯವರೆಗೂ ರಾಷ್ಟ್ರೀಯ ಹೆದ್ದಾರಿ 173 ರ ಕಡೂರು ಮೂಡಿಗೆರೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಚಿಕ್ಕಮಗಳೂರು – ಮೂಡಿಗೆರೆ ನಡುವೆ ಸಂಪರ್ಕ ಕಡಿತವಾಗಿದ್ದರಿಂದ, ವಾಹನಗಳು ಮಾಕೋನಹಳ್ಳಿ ಮಾರ್ಗವಾಗಿ ಹಾಂದಿ ತಲುಪಿ, ಅಲ್ಲಿಂದ ಚಿಕ್ಕಮಗಳೂರಿಗೆ ಪ್ರಯಾಣಿಸಬೇಕಾಯಿತು.

ಕಾಫಿಗೆ ಕಹಿಸಿಹಿ: ತಾಲ್ಲೂಕಿನಲ್ಲಿ ಸುರಿದ ಮೊದಲ ಮಳೆ ಕೆಲವು ಕಾಫಿ ಬೆಳೆಗಾರರಿಗೆ ಕಹಿಯಾಗಿ ಪರಿಣಮಿಸಿದರೆ, ಬಹುತೇಕ ಕಾಫಿ ಬೆಳೆಗಾರರಿಗೆ ಸಿಹಿಯಾಗಿ ಪರಿಣಮಿಸಿತು. ಬಿಸಿಲಿನ ದಾಹ ಇಂಗಿಸಲು ನೀರಾಯಿಸಿದ್ದ ಕೆಲವು ಕಾಫಿ ತೋಟದಲ್ಲಿ ಗುರುವಾರ ಹೂವರಳಿದ್ದವು. ಹೂವಿನ ಮೇಲೆ ಮಳೆಬಿದ್ದಿದ್ದರಿಂದ ಕಾಫಿ ಬೆಳೆಗಾರರಿಗೆ ಹಾನಿಯಾದರೆ, ನೀರಾಯಿಸದ ಬೆಳೆಗಾರರಿಗೆ ಮಳೆ ಲಾಭವಾಗಿದೆ.

ಎರಡು ತಿಂಗಳಿನಿಂದ ಉಷ್ಣಾಂಶ ಏರಿಕೆಯಿಂದಾಗಿ ಬೆಂಗಾಡಾಗಿದ್ದ ಮಲೆನಾಡಿನಲ್ಲಿ, ಭಾನುವಾರ ಸುರಿದ ಮಳೆ ತಂಪೆರೆಯಿತು. ಕಸಕಡ್ಡಿಗಳಿಂದ ತುಂಬಿದ್ದ ಒಳಚರಂಡಿಗಳೆಲ್ಲವೂ ಸ್ವಚ್ಛವಾಗಲು ಮಳೆ ನೆರವಾಯಿತು. ಸೋಮವಾರ ಕೂಡ ತಾಲ್ಲೂಕಿನ ಕೆಲವೆಡೆ ಮಳೆಯಾಗಿದ್ದು, ಬತ್ತಿ ಹೋಗಿದ್ದ ನದಿ ತೊರೆಗಳಲ್ಲಿ ಮಳೆ ನೀರು ಕಾಣಿಸಿಕೊಂಡಿತು.

ಧಾರಾಕಾರ ಮಳೆ

ಬಾಳೆಹೊನ್ನೂರು: ಪಟ್ಟಣದ ಸುತ್ತಮುತ್ತ ಭಾನುವಾರ ಹಾಗೂ ಸೋಮವಾರ ಸುರಿದ ಮಳೆ ಗಾಳಿಯಿಂದಾಗಿ ಕೆಲವು ಮನೆಗಳ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.

ಭಾನುವಾರ ಮಧ್ಯಾಹ್ನದ ವೇಳೆ ಮಿಂಚು, ಗುಡುಗಿನಿಂದ ಕೂಡಿದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಸೀಗೋಡು ಸಮೀಪ ಮುಖ್ಯರಸ್ತೆ ಮೇಲೆ ಮರ ಬಿದ್ದು ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಾಳೆಹೊನ್ನೂರು ಪಟ್ಟಣದ ಅರಣ್ಯ ಇಲಾಖೆ ಎದುರಿನ ಸಣ್ಣ ಅಂಗಡಿಗಳ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಒಂದು ಅಂಗಡಿ ಸಂಪೂರ್ಣ ಜಖಂಗೊಂಡಿದ್ದು, ಮತ್ತೊಂದು ಅಂಗಡಿಗೆ ಹಾನಿ ಉಂಟಾಗಿದೆ.

ಹಲವು ಕಡೆಗಳಲ್ಲಿ ಮನೆ, ತೋಟಗಳಿಗೆ ಹಾನಿಯಾಗಿದೆ. ಭಾರಿ ಗಾಳಿಯಿಂದಾಗಿ ಚಿಕ್ಕಮಗಳೂರು– ಬಾಳೆಹೊನ್ನೂರು ನಡುವಿನ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಭಾನುವಾರ ಮಧ್ಯಾಹ್ನದ ನಂತರ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಬಾಳೆಹೊನ್ನೂರು ಸುತ್ತಮುತ್ತ ವಿದ್ಯುತ್ ಮಾರ್ಗದ ಮೇಲೆ ಮರಗಳು ಉರುಳಿದ ಪರಿಣಾಮ 15 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಶಾಸಕ ಭೇಟಿ : ಭಾರಿ ಮಳೆಯಿಂದ ಹಾನಿಗೊಳಗಾದ ಕೋಮಲ್ ಬೇಕರಿಯ ಮೋಹನ್ ಮನೆಗೆ ಶಾಸಕ ಡಿ.ಎನ್.ಜೀವರಾಜ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕೋಮಲ್ ಅವರ ಮನೆಯ ಮೇಲೆ ತೆಂಗಿನಮರ ಬಿದ್ದ ಕಾರಣ ಮನೆಯ ಮೊದಲನೆ ಮಹಡಿ ಸಂಪೂರ್ಣ ಜಖಂಗೊಂಡಿದೆ. ದಾಖಲೆಗಳನ್ನು ನೀಡಿದಲ್ಲಿ ಪರಿಹಾರ ನೀಡುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸುವುದಾಗಿ ಶಾಸಕರು ತಿಳಿಸಿದರು.

ಟಿ.ಎಂ.ಉಮೇಶ್, ಬಿಜೆಪಿ ವಕ್ತಾರ ಬಿ.ಜಗದೀಶ್ಚಂದ್ರ, ಹೋಬಳಿ ಬಿಜೆಪಿ ಮಾಜಿ ಅಧ್ಯಕ್ಷ ಧರ್ಮೇಗೌಡ, ಕಲ್ಮಕ್ಕಿ ಹರೀಶ್ ಇದ್ದರು.

ಕಡೂರು ವರದಿ: ಕಡೂರು ಸುತ್ತಮುತ್ತ ಭಾನುವಾರ ಸಂಜೆ ಸುಮಾರು ಅರ್ಧ ಗಂಟೆ ಮಂದಗತಿಯಲ್ಲಿ ಮಳೆಯಾಯಿತು. ಕಡೂರು ಪಟ್ಟಣ ದಲ್ಲಿ ಜೋರಾಗಿ ಸುರಿದ ಮಳೆ ವಾತಾವರಣವನ್ನು ತಂಪುಗೊಳಿಸಿತು. ರಾತ್ರಿ ಮೋಡ ಕವಿದಿದ್ದರಿಂದ ಯುಗಾದಿ ಚಂದ್ರನ ದರ್ಶನವಾಗಲಿಲ್ಲ.

ಮತ್ತೆ ಸೋಮವಾರ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ 20 ನಿಮಿಷಗಳ ಕಾಲ ಬಿರುಸಾಗಿ ಮಳೆ ಸುರಿಯಿತು. ಸೋಮವಾರ ದಿನವಿಡೀ ಬಿರುಬಿಸಿಲಿನ ಝಳಕ್ಕೆ ಜನರು ಬಸವಳಿದರು.

ಚಿಕ್ಕಮಗಳೂರು: ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸೋಮ ವಾರ ಮಳೆಯಾಗಿದೆ. ರೈತರಲ್ಲಿ ಹರ್ಷ ಮೂಡಿದೆ.

ಬೆಳಿಗ್ಗೆ ಕೊಂಚ ಮೋಡ ಕವಿದ ವಾತಾರಣ ಇತ್ತು. ಸಂಜೆ 5.30ರ ಹೊತ್ತಿಗೆ ವರ್ಷಧಾರೆಯ ಸಿಂಚನ ಶುರುವಾಯಿತು. ತುಂತುರಿನಂತೆ ಆರಂಭವಾದ ಮಳೆ ನಂತರ ಜೋರಾ ಯಿತು. ಸುಮಾರು 20 ನಿಮಿಷ ಮಳೆ ಸುರಿಯಿತು.

ಗಿರಿ ಶ್ರೇಣಿಯ ಭಾಗದಲ್ಲೂ ಮಳೆಯಾಗಿದೆ. ಬಿಸಿಲಿನ ಝಳದಿಂದಾಗಿ ಕಾಫಿ, ಅಡಿಕೆ, ತೆಂಗು, ತರಕಾರಿ ಬೆಳೆಗಳು ಕಮರಿದ್ದವು. ಈಗ ಮಳೆಯಾಗಿರುವುದು ಬೆಳೆಗಳು ಚೇತರಿಸಿಕೊಳ್ಳಲು ಅನುಕೂಲವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry