ಮಕ್ಕಳ ಕೈ–ಕಾಲು ಕಟ್ಟಿ ಆಭರಣ ದೋಚಿದರು

7

ಮಕ್ಕಳ ಕೈ–ಕಾಲು ಕಟ್ಟಿ ಆಭರಣ ದೋಚಿದರು

Published:
Updated:

ಬೆಂಗಳೂರು: ಕೊತ್ತನೂರಿನ ಶಬರಿನಗರದಲ್ಲಿ ಸೋಮವಾರ ರಾತ್ರಿ ಅನಿತಾ ಎಂಬುವರ ಮನೆಗೆ ನುಗ್ಗಿದ ಡಕಾಯಿತರ ಗುಂಪು, ಕುಟುಂಬ ಸದಸ್ಯರ ಕೈ–ಕಾಲುಗಳನ್ನು ಕಟ್ಟಿಹಾಕಿ ₹ 3 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ.

ಹೆಗಡೆನಗರದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅನಿತಾ, 15 ಹಾಗೂ 14 ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಅವರ ಪತಿ ಮುಂಬೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ 8.15ರ ಸುಮಾರಿಗೆ ಆರೋಪಿಗಳು ಮನೆ ಬಾಗಿಲು ಬಡಿದಿದ್ದಾರೆ. ಅಣ್ಣನ ಮಗ ಬಂದಿರಬಹುದೆಂದು ಭಾವಿಸಿ ಅನಿತಾ ಬಾಗಿಲು ತೆಗೆದಿದ್ದಾರೆ. ತಕ್ಷಣ ಒಳಗೆ ನುಗ್ಗಿದ ಡಕಾಯಿತರು, ಅವರ ಕುತ್ತಿಗೆ ಹತ್ತಿರ ಚಾಕು ಹಿಡಿದು ಕಿರುಚದಂತೆ ಬೆದರಿಸಿದ್ದಾರೆ. ನಂತರ ಕೋಣೆಗೆ ನುಗ್ಗಿ, ಹಗ್ಗದಿಂದ ಮಕ್ಕಳಿಬ್ಬರ ಕೈಕಾಲುಗಳನ್ನು ಕಟ್ಟಿದ್ದಾರೆ.

ಬಳಿಕ ಅಲ್ಮೆರಾದಲ್ಲಿದ್ದ ಚಿನ್ನಾಭರಣ ತೆಗೆದುಕೊಂಡಿರುವ ಅವರು, ‘ಪೊಲೀಸರಿಗೆ ದೂರು ನೀಡಿದರೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಮೇಡಂ’ ಎಂದು ಹೇಳಿ ಹೊರಡಲು ಸಿದ್ಧರಾಗಿದ್ದಾರೆ. ಇದೇ ಸಮಯದಲ್ಲೇ ಅನಿತಾ ಅವರ ಅಣ್ಣನ ಮಗ ಮನೆಗೆ ಬಂದಿದ್ದಾನೆ. ಆತನನ್ನೂ ಕೋಣೆಗೆ ಎಳೆದೊಯ್ದ ದುಷ್ಕರ್ಮಿಗಳು, ಕೈ–ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹೊರಟು ಹೋಗಿದ್ದಾರೆ.

ಆ ನಂತರ ಅನಿತಾ ನೆರವಿಗಾಗಿ ಕೂಗಿಕೊಂಡಿದ್ದು, ಅವರ ಚೀರಾಟ ಕೇಳಿ ನೆರೆಹೊರೆಯವರು ಮನೆಗೆ ಬಂದಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚುದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಆರೋಪಿಗಳ ಚಹರೆ ಸೆರೆಯಾಗಿದ್ದು, ಗ್ಯಾಂಗ್ ಪತ್ತೆಗೆ ಈಶಾನ್ಯ ವಿಭಾಗದ ನೂತನ ಡಿಸಿಪಿ ಕಲಾ ಕೃಷ್ಣಮೂರ್ತಿ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

‘ಬಂದಿದ್ದ ಏಳು ಮಂದಿಯಲ್ಲಿ ಮೂವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಮೇಡಂ.. ಮೇಡಂ.. ಎನ್ನುತ್ತಲೇ ಮಾತನಾಡಿಸುತ್ತಿದ್ದ ಅವರು, ‘ಒಡವೆಗಳನ್ನು ಎಲ್ಲಿಟ್ಟಿದ್ದೀರಾ ಹೇಳಿ ಬಿಡಿ. ನಿಮಗೇನೂ ತೊಂದರೆ ಮಾಡುವುದಿಲ್ಲ’ ಎಂದರು. ನಾನು ಅಲ್ಮೆರಾದಲ್ಲಿದ್ದ ಆಭರಣ ತೋರಿಸುತ್ತಿದ್ದಂತೆಯೇ ಅವುಗಳನ್ನು ತೆಗೆದುಕೊಂಡು ಹೊರಟರು. ಅವರನ್ನು ಈ ಹಿಂದೆ ಎಲ್ಲೂ ನೋಡಿಲ್ಲ’ ಎಂದು ಅನಿತಾ ಹೇಳಿಕೆ ಕೊಟ್ಟಿರುವುದಾಗಿ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣಗಳಲ್ಲಿ ಸಾಮ್ಯತೆ

‘ಎಂಟು ತಿಂಗಳ ಹಿಂದೆ ಅಮೃತಹಳ್ಳಿ ಠಾಣೆಯಲ್ಲಿ ಒಂದು ಡಕಾಯಿತಿ ಪ್ರಕರಣ ದಾಖಲಾಗಿದೆ. ಅಲ್ಲೂ ಏಳು ಮಂದಿಯೇ ಒಂಟಿ ಮಹಿಳೆಯ ಮನೆಗೆ ನುಗ್ಗಿ ಕೃತ್ಯ ಎಸಗಿದ್ದರು. ಆ ಮಹಿಳೆಯ ಗಂಡ ಬೇರೆ ರಾಜ್ಯದಲ್ಲಿ ಉದ್ಯೋಗದಲ್ಲಿದ್ದರು. ಇದನ್ನು ಗಮನಿಸಿದರೆ ಆರೋಪಿಗಳು ಅಂಥ ಮನೆಗಳನ್ನೇ ಗುರುತಿಸಿಕೊಂಡು ಕೃತ್ಯ ಎಸಗುತ್ತಿರುವಂತೆ ಕಾಣಿಸುತ್ತಿದೆ. ಅಮೃತಹಳ್ಳಿ ಪೊಲೀಸರಿಂದ ಆ ಗ್ಯಾಂಗ್‌ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry