7

ನೌಕರರ ಮುಷ್ಕರ ಮುಂದೂಡಿಕೆ

Published:
Updated:
ನೌಕರರ ಮುಷ್ಕರ ಮುಂದೂಡಿಕೆ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ 22ರಂದು ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ನೌಕರರ ಸಂಘ ಹೈಕೋರ್ಟ್‌ಗೆ ತಿಳಿಸಿದೆ.

ಬಿಎಂಆರ್‌ಸಿಎಲ್ ಸಿಬ್ಬಂದಿ ವಿರುದ್ಧ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-2013 (ಎಸ್ಮಾ) ಜಾರಿಗೊಳಿಸದಂತೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಬಿಎಂಆರ್‌ಸಿಎಲ್‌ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸೇಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ’ ಎಂದು ನ್ಯಾಯಪೀಠ ನೀಡಿದ ಸಲಹೆಯನ್ನು ಒಪ್ಪಿದ ಸಂಘವು, ಮುಷ್ಕರವನ್ನು ಒಂದು ತಿಂಗಳ ಕಾಲ ಮುಂದೂಡುವುದಾಗಿ ತಿಳಿಸಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಎ.ಎಸ್.ಪೊನ್ನಣ್ಣ, ‘ರಾಜ್ಯ ಸರ್ಕಾರ ಮೆಟ್ರೊ ನೌಕರರನ್ನು ಈಗಾಗಲೇ ಎಸ್ಮಾ ವ್ಯಾಪ್ತಿಗೆ ತಂದಿದೆ. ನಿಗಮದ ನೌಕರರು ಇದೇ 22ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದ್ದರಿಂದ ಎಸ್ಮಾ ಜಾರಿಗೆ ಈ ಹಿಂದೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು.

ನೌಕರರ ಸಂಘದ ಪರ ವಕೀಲರು, ‘ಸರ್ಕಾರ ಮೊದಲು ಬಿಎಂಆರ್‌ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ ನೀಡಬೇಕು. ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಮತ್ತು ಅವರು ಸಲ್ಲಿಸಿರುವ ಮನವಿ ಆಲಿಸಲು ನಿಗಮ ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿಯೇ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಆದ್ದರಿಂದ ತಡೆಯಾಜ್ಞೆ ತೆರವುಗೊಳಿಸಬಾರದು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸೂಚಿಸಿತು. ವಾರಕ್ಕೆ ಮೂರು ಬಾರಿ ಉಭಯ ಬಣಗಳ ಮುಖಂಡರು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವನ್ನೂ ಕಲ್ಪಿಸಿ ಆದೇಶಿಸಿತು. ಇದೇ 26ರಿಂದ ಉಭಯ ಬಣಗಳ ಮುಖಂಡರ ಸಭೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry