ಹಳ್ಳಿ ಕುರಿತು ತಾತ್ಸಾರ ಸಲ್ಲ

7
ಗದಗ ಜಿಲ್ಲೆ ‘ಗ್ರಾಮ ಚರಿತ್ರೆ ಕೋಶ’ ಬಿಡುಗಡೆ ಕಾರ್ಯಕ್ರಮ;ಗೊರುಚ ಅಭಿಮತ

ಹಳ್ಳಿ ಕುರಿತು ತಾತ್ಸಾರ ಸಲ್ಲ

Published:
Updated:
ಹಳ್ಳಿ ಕುರಿತು ತಾತ್ಸಾರ ಸಲ್ಲ

ಗದಗ: ‘ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ವಿದ್ಯಾವಂತರಾಗಿ ಉದ್ಯೋಗ ನಿಮಿತ್ತ ಪಟ್ಟಣ ಸೇರಿದವರು, ಆ ನಂತರ ತಮ್ಮ ಹಳ್ಳಿಗಳನ್ನು ಮರೆಯುತ್ತಿರುವುದು, ಗ್ರಾಮ ಭಾರತದ ಬಗ್ಗೆ ತಾತ್ಸಾರ ಮನೋಭಾವನೆ ತಳೆಯುತ್ತಿರುವುದು ತೀವ್ರ ಬೇಸರದ ಸಂಗತಿ’ ಎಂದು ಡಾ.ಗೊ.ರು.ಚನ್ನಬಸಪ್ಪ ವಿಷಾದಿಸಿದರು.

ಮಂಗಳವಾರ ಇಲ್ಲಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹೊರತಂದ ‘ಗದಗ ಜಿಲ್ಲೆ–ಗ್ರಾಮ ಚರಿತ್ರೆ ಕೋಶ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕತೆ ನಮ್ಮ ಮೇಲೆ ಸವಾರಿ ಮಾಡುತ್ತಿದೆ. ವಿಜ್ಞಾನದ ಆವಿಷ್ಕಾರಗಳು ಬದುಕಿಗೆ ಪೂರಕವಾಗುವ ಬದಲು ಮಾರಕವಾಗುತ್ತಿವೆ. ಹೊಸ ತಲೆಮಾರು ಹಳ್ಳಿಗಳನ್ನು ಮರೆಯುತ್ತಿದೆ. ಗ್ರಾಮಗಳಲ್ಲಿ ಹುಟ್ಟಿ ಬೆಳೆದವರೇ, ಇಂದು ಆ ಹಳ್ಳಿಗಳಲ್ಲಿ ಏನಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಗ್ರಾಮೀಣ ಅಂತಃಸತ್ವ ತಿಳಿಯದವರು, ಗ್ರಾಮೀಣ ಜನ–ಜೀವನದ ಬಗ್ಗೆ ಏನೇನೂ ತಿಳಿದುಕೊಳ್ಳದ ಮೂರ್ಖರು ಮಾತ್ರ ಹೀಗೆ ಪ್ರಶ್ನಿಸಲು ಸಾಧ್ಯ. ಹಳ್ಳಿಗಳನ್ನು ಉಳಿಸುವುದು ಈಗಿನ ತುರ್ತು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರತಿ ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶವನ್ನು ಹೊರತರುವ ಮೂಲಕ ಜಾನಪದ ವಿಶ್ವವಿದ್ಯಾಲಯ ದೇಶಕ್ಕೆ ಮಾದರಿ ಎನಿಸುವ ಕಾರ್ಯ ಮಾಡಿದೆ. ಇದರಿಂದ ಹಳ್ಳಿಗಳ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತದೆ. ಇದೊಂದು ಗ್ರಾಮೀಣ ವಿಶ್ವಕೋಶ ಇದ್ದಂತೆ. ಇದರಲ್ಲಿರುವ ಮಾಹಿತಿ ಆಧರಿಸಿ ಗ್ರಾಮೀಣಾಭಿವೃದ್ಧಿಗೆ ದೀರ್ಘಾವಧಿ ಯೋಜನೆಗಳನ್ನು ಹಾಕಿಕೊಳ್ಳಲು ಅನುಕೂಲ ಆಗುತ್ತದೆ. ಇದಕ್ಕೆ ಆರ್ಥಿಕ ನೆರವು ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಸಚಿವ ಎಚ್‌.ಕೆ ಪಾಟೀಲ ಅವರನ್ನು ಇಲ್ಲಿ ನೆನೆಯಬೇಕು’ ಎಂದು ಅವರು ಹೇಳಿದರು.

‘ಈಗಾಗಲೇ 9 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಬಿಡುಗಡೆ ಆಗಿದೆ. ಅ. 2ರ ಒಳಗಾಗಿ ಇನ್ನುಳಿದಿರುವ ಎಲ್ಲ ಜಿಲ್ಲೆಗಳ ಚರಿತ್ರೆ ಕೋಶವನ್ನು ಬಿಡುಗಡೆ ಮಾಡಲು ಜಾನಪದ ವಿಶ್ವವಿದ್ಯಾಲಯ ಕ್ರಮ ವಹಿಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆ ಈ ಬೃಹತ್‌ ಯೋಜನೆಗೆ ₹ 10 ಕೋಟಿ ಅನುದಾನ ಒದಗಿಸಿದೆ. ಗ್ರಾಮ ಚರಿತ್ರೆ ಕೋಶದಲ್ಲಿರುವ ಗ್ರಾಮಗಳ ಮಾಹಿತಿಯನ್ನು ಗೆಜೆಟಿಯರ್‌ನಲ್ಲಿ ಪ್ರಕಟಿಸುವ ಕುರಿತೂ ಚಿಂತನೆ ನಡೆದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟಿಲ ಹೇಳಿದರು.

‘ಗ್ರಾಮಗಳ ಪುನಶ್ಚೇತನ ಈಗಿನ ತುರ್ತು ಅಗತ್ಯ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಿದೆ. ಗ್ರಾಮೀಣ ಪ್ರದೇಶದ ಜನರು, ತಮ್ಮ ಗ್ರಾಮಗಳಲ್ಲೇ ಸುಸ್ಥಿರ ಮತ್ತು ನೆಮ್ಮದಿಯುತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಬೇಕು. ಆಗ ಮಾತ್ರ ನಿಜವಾದ ಗ್ರಾಮೀಣಾಭಿವೃದ್ಧಿ ಸಾಧ್ಯ. ಗ್ರಾಮೀಣ ಇತಿಹಾಸ ತಿಳಿಯುವ ದೊಡ್ಡ ಪರಿಕಲ್ಪನೆಯ ಭಾಗವಾಗಿ ಗ್ರಾಮ ಚರಿತ್ರೆ ಕೋಶ ಬಿಡುಗಡೆ ಆಗುತ್ತಿದೆ’ ಎಂದರು.

ಯುಗಾದಿಗೆ ಬಂಪರ್‌ ಕೊಡುಗೆ

‘ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಒಪ್ಪುವ ಮೂಲಕ 900 ವರ್ಷಗಳಲ್ಲಿ ಸಿಗದ ಬಂಪರ್ ಕೊಡುಗೆಯನ್ನು ರಾಜ್ಯ ಸರ್ಕಾರ ಈ ಯುಗಾದಿಗೆ ನೀಡಿದೆ. ನಾಗಮೋಹನ್‌ದಾಸ್‌ ಸಮಿತಿ ವರದಿ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಗದಗ ಜಿಲ್ಲಾ ಗ್ರಾಮ ಚರಿತ್ರೆ ಕೋಶದ ಬಗ್ಗೆ ಮಾತನಾಡಿದ ಅವರು, ‘ತಾಲ್ಲೂಕಿನ ಕುರ್ತುಕೋಟಿಯಲ್ಲಿ ಕಡ್ಲೆಪ್ಪನ ಕೆರೆ ಇದೆ. ಈ ಕೆರೆಯನ್ನು ಕಡ್ಲೆಪ್ಪ ಎಂಬ ಪೈಲ್ವಾನ ಒಬ್ಬನೆ ಕಡಿದಿದ್ದಕ್ಕಾಗಿ ಈ ಹಸರು ಬಂದಿದೆ. ಈ ಕೆರೆಯ ಮಣ್ಣನ್ನು ಒಬ್ಬನೇ ಹೊತ್ತು ಹಾಕಿದ ಮಣ್ಣಿನ ದಿಬ್ಬಕ್ಕೆ ಕೇಶಪ್ಪನ ದಿಬ್ಬ ಎಂದು ಕರೆಯುತ್ತಾರೆ’ ಇಂತಹ ಅಪರೂಪದ ಮಾಹಿತಿ ಈ ಕೋಶದಲ್ಲಿದೆ’ ಎಂದರು.

‘ಹಾವೇರಿಯ ಜಾನಪದ ವಿವಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಜಾನಪದ ವಿವಿ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹ 100 ಕೋಟಿ ಅನುದಾನ ಮೀಸಲಿರಿಸಬೇಕು. ಜಾನಪದ ವಿಶ್ವವಿದ್ಯಾಲಯಕ್ಕೆ 400 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

**

ದೇಶದಲ್ಲೇ ಮೊದಲ ಬಾರಿಗೆ ಗ್ರಾಮಗಳ ಮಾನವ ಅಭಿವೃದ್ಧಿ ಸೂಚ್ಯಂಕ ತಯಾರಿಸಿ, ಅದರ ಆಧಾರದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ

– ಎಚ್‌.ಕೆ ಪಾಟೀಲ, ಸಚಿವ

**

ಗ್ರಾಮ ಚರಿತ್ರೆ ಕೋಶ ಪರಮ ಗ್ರಂಥವಲ್ಲ. ಇದಕ್ಕೆ ಇತಿಮಿತಿಗಳಿವೆ. ತಪ್ಪುಗಳು ಇರಬಹುದು. ಪರಿಷ್ಕರಣೆ ಸಂದರ್ಭದಲ್ಲಿ ತಿದ್ದುಪಡಿಗೆ ಒಳಪಡಿಸಲಾಗುವುದು

– ಡಾ.ಚಕ್ಕರೆ ಶಿವಶಂಕರ್‌, ಸಂಯೋಜಕ ಸಂಪಾದಕರು ಗ್ರಾಮ ಚರಿತ್ರೆ ಕೋಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry