ನಿರ್ಮಾಪಕಿ ಜಯಶ್ರೀದೇವಿ ಬಂಧನ

7

ನಿರ್ಮಾಪಕಿ ಜಯಶ್ರೀದೇವಿ ಬಂಧನ

Published:
Updated:
ನಿರ್ಮಾಪಕಿ ಜಯಶ್ರೀದೇವಿ ಬಂಧನ

ಬೆಂಗಳೂರು: ಹನ್ನೊಂದು ವರ್ಷಗಳ ಹಿಂದಿನ ಚೆಕ್‌ ಬೌನ್ಸ್‌ ಪ್ರಕರಣ ಸಂಬಂಧ ನಿರ್ಮಾ‍ಪಕಿ ಜಯಶ್ರೀ ದೇವಿ ಅವರನ್ನು ಚಾಮರಾಜಪೇಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ಸಿನಿಮಾ ನಿರ್ಮಾಣಕ್ಕಾಗಿ ₹34 ಲಕ್ಷ ಪಡೆದಿದ್ದ ಜಯಶ್ರೀ ದೇವಿ, ಆ ಹಣವನ್ನು ಹಿಂದಿರುಗಿಸಿಲ್ಲ. ಅವರು ನೀಡಿದ್ದ ಚೆಕ್‌ ಸಹ ಬೌನ್ಸ್‌ ಆಗಿದೆ’ ಎಂದು ‘ಅಶ್ವಿನಿ ಪಿಕ್ಚರ್ಸ್‌‌‌‌‌‌‌‌‌’ ಸಂಸ್ಥೆ ಮಾಲೀಕ ಆನಂದ್, 18ನೇ ಎಸಿಎಂಎಂ ನ್ಯಾಯಾಲಯದಲ್ಲಿ 11 ವರ್ಷಗಳ ಹಿಂದೆ ಖಾಸಗಿ ಮೊಕದ್ದಮೆ ಹೂಡಿದ್ದರು.

ಅವರ ಅರ್ಜಿ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ವಿಚಾರಣೆಗೆ ಹಾಜರಾಗುವಂತೆ ಜಯಶ್ರೀದೇವಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಅಷ್ಟಾದರೂ ಅವರು ವಿಚಾರಣೆಗೆ ಗೈರಾಗಿದ್ದರು.

ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ, ಆರೋಪಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಜತೆಗೆ ಜಯಶ್ರೀ ದೇವಿ ಬಂಧಿಸುವಂತೆ ಚಾಮರಾಜಪೇಟೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರನ್ವಯ ಪೊಲೀಸರು, ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

‘ನಮ್ಮೂರ ಮಂದಾರ ಹೂವೇ’, ‘ಅಮೃತ ವರ್ಷಿಣಿ’ ಹಾಗೂ ‘ಮುಕುಂದ ಮುರಾರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಜಯಶ್ರೀ ದೇವಿ, ‘ಹಬ್ಬ’ ಸಿನಿಮಾ ನಿರ್ಮಾಣಕ್ಕಾಗಿ ಸಾಲ ಪಡೆದಿದ್ದರು. ಸಿನಿಮಾ ಬಿಡುಗಡೆಯಾದ ನಂತರವೂ ಹಣ ಕೊಡದೆ ಸತಾಯಿಸುತ್ತಿದ್ದರು ಎಂದು ಆನಂದ್‌ ದೂರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry