ನಾಯಕರ ನಿರೀಕ್ಷೆಯಲ್ಲಿ ಕಾರ್ಯಕರ್ತರು

7
ಕ್ಷೇತ್ರದತ್ತ ಸುಳಿಯದ ಸಾಯಿಕುಮಾರ್ ಮತ್ತು ಸಿ.ಆರ್.ಮನೋಹರ್, ಕಾರ್ಯಕರ್ತರಲ್ಲಿ ಗೊಂದಲ ನಡೆ

ನಾಯಕರ ನಿರೀಕ್ಷೆಯಲ್ಲಿ ಕಾರ್ಯಕರ್ತರು

Published:
Updated:
ನಾಯಕರ ನಿರೀಕ್ಷೆಯಲ್ಲಿ ಕಾರ್ಯಕರ್ತರು

ಬಾಗೇಪಲ್ಲಿ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆಗೆ ದಿನ ಗಣನೆ ಆರಂಭವಾಗಿರುವ ನಡುವೆ ಜೆಡಿಎಸ್‌ ಅಭ್ಯರ್ಥಿ ಸಿ.ಆರ್.ಮನೋಹರ್ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಕೆಲ ತಿಂಗಳ ಹಿಂದೆ ಕಾಣಿಸಿಕೊಂಡ ನಟ ಪಿ. ಸಾಯಿಕುಮಾರ್ ಇದೀಗ ಕ್ಷೇತ್ರದ ಸುಳಿಯದಿರುವುದು ಹಲವು ವದಂತಿಗಳಿಗೆ

ಎಡೆಮಾಡಿಕೊಟ್ಟಿದೆ.

ನಿಗೂಢವಾಗಿರುವ ಮನೋಹರ್ ನಡೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸುವ ಜತೆಗೆ ಗೊಂದಲಕ್ಕೆ ನೂಕಿದೆ. ಶಿವರಾತ್ರಿ ಹಬ್ಬದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಮನೋಹರ್ ಅವರು ಭಾಷಣ ಮಾಡುತ್ತ, ‘ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಇರುತ್ತೇನೆ. ಕ್ಷೇತ್ರದ ಜನರು ತಮ್ಮನ್ನು ಬೆಂಬಲಿಸಬೇಕು’ ಎಂದಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಅವರು ಕ್ಷೇತ್ರದ ಕಡೆಗೆ ತಲೆ

ಹಾಕಿಲ್ಲ.

ಬಾಗೇಪಲ್ಲಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಮನಸ್ತಾಪ ಉಂಟಾಗಿದೆ ಎನ್ನುವ ಮಾತುಗಳು ಆ ಪಕ್ಷದ ವಲಯದಲ್ಲೇ ಹರಿದಾಡುತ್ತಿವೆ. ಇದು ಕೂಡ ಮನೋಹರ್ ಅವರ ಮೌನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತು ಮಾತನಾಡಲು ಮನೋಹರ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಆಪ್ತರನ್ನು ವಿಚಾರಿಸಿದರೆ, ‘ಸ್ವಲ್ಪ ದಿನ ಕಾದು ನೋಡಿ ಎಲ್ಲಾ ಗೊತ್ತಾಗುತ್ತದೆ’ ಎಂದು ಮುಗುಮ್ಮಾಗಿ ಹೇಳುತ್ತಾರೆ.

ಈ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಸಿಪಿಎಂ ಪಕ್ಷಗಳು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತವೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಈ ವಿಚಾರವನ್ನು ಸ್ಥಳೀಯ ಸಿಪಿಎಂ ಮುಖಂಡರು ಅಲ್ಲಗಳೆಯುತ್ತಾರೆ. ಉತ್ತರಿಸಲು ಮನೋಹರ್ ಅವರು ಸಿಗುತ್ತಿಲ್ಲ. ಇದೆನ್ನೆಲ್ಲ ನೋಡಿದವರಲ್ಲಿ ಮೈತ್ರಿ ವಿಚಾರ ನಿಜ ಇರಬಹುದು ಎನ್ನುವ ಭಾವನೆ ಬಲಿಯುತ್ತಿದೆ.

ಮಿಂಚಿ ಮರೆಯಾದ ಸಾಯಿಕುಮಾರ್

ಸಾಯಿಕುಮಾರ್ ಕೆಲ ತಿಂಗಳ ಹಿಂದಷ್ಟೇ ಕ್ಷೇತ್ರದಲ್ಲಿ ಅನೇಕ ಬಾರಿ ಕಾಣಿಸಿಕೊಂಡು ಸಾಯಿಕುಮಾರ್‌, ತಾನು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುವುದು ಮಾತ್ರವಲ್ಲದೆ ಕ್ಷೇತ್ರದಲ್ಲಿಯೇ ಶೀಘ್ರದಲ್ಲಿ ಮನೆ ಮಾಡಿ, ಪಕ್ಷ ಸಂಘಟನೆಗೆ ಒತ್ತು ನೀಡುವೆ ಎಂದು ಹೇಳಿದ್ದರು. ಬಿಜೆಪಿ ಮುಖಂಡ ಗಾಲಿ ಜನಾರ್ಧನರೆಡ್ಡಿ ಅವರನ್ನು ಕರೆತಂದು ಬಿಳ್ಳೂರು ಸ್ತಂಭ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಗಮನ ಸೆಳೆದಿದ್ದರು.

ನಂತರದ ದಿನಗಳಲ್ಲಿ ಸಿನಿಮಾವೊಂದರ ಚಿತ್ರೀಕರಣವಿದೆ ಎಂದು ಹೇಳಿ ಹೋದವರು ಈವರೆಗೆ ಕ್ಷೇತ್ರದ ಸಂಪರ್ಕಕ್ಕೆ ಬಂದಿಲ್ಲ. ಆರಂಭದಲ್ಲಿ ಅವರ ಬೆನ್ನತ್ತಿ ಹೊಸ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಕೆಲ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಇದು ಇರುಸು ಮುರುಸಿನ ಜತೆಗೆ ಆಕ್ರೋಶಕ್ಕೆ ಕಾರಣವಾಗಿದೆ

ಎನ್ನಲಾಗಿದೆ.

ಸದ್ಯ ಸಾಯಿಕುಮಾರ್ ಅವರು ಅವರದೇ ಪಕ್ಷದ ಮುಖಂಡರು, ಕಾರ್ಯಕರ್ತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ಕೂಡ ನೀಡುತ್ತಿಲ್ಲ ಎನ್ನಲಾಗಿದೆ. ಈ ಬೆಳವಣಿಗೆ ಸಹಜವಾಗಿಯೇ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬ ಆಕಾಂಕ್ಷಿ ಅರಿಕೆರೆ ಕೃಷ್ಣಾರೆಡ್ಡಿ ಅವರ ಬಣದವರಿಗೆ ಸಂತಸ ತಂದಿದೆ ಎಂದು ಮೂಲಗಳು

ಹೇಳುತ್ತವೆ.

ಸದ್ಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಸಾಯಿಕುಮಾರ್ ಮತ್ತು ಮನೋಹರ್ ಅವರ ಬೆಂಬಲಿಗರು ತಮ್ಮ ನಾಯಕರ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಈ ಇಬ್ಬರು ಮುಖಂಡರು ಕ್ಷೇತ್ರದತ್ತ ತಲೆ ಹಾಕಿ ಚುನಾವಣಾ ಕಣಕ್ಕೆ ಧುಮುಕುತ್ತಾರಾ? ಅಥವಾ ಹೊಸ ವರಸೆ ತೆಗೆಯುತ್ತಾರಾ? ಕಾಯ್ದು ನೋಡಬೇಕು ಎನ್ನುತ್ತಾರೆ ಕ್ಷೇತ್ರದ ಕಾರ್ಯಕರ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry