ಕಲ್ಯಾಣಿಗಳಲ್ಲಿ ಚಿಮ್ಮಿತು ಜೀವ ಜಲ

7
ಜಿಲ್ಲೆಯ ಕೆರೆ– ಕಟ್ಟೆಗಳಲ್ಲಿ ಏಕಲವ್ಯ ರೋವರ್ಸ್ ಮುಕ್ತದಳದಿಂದ ಶ್ರಮದಾನ

ಕಲ್ಯಾಣಿಗಳಲ್ಲಿ ಚಿಮ್ಮಿತು ಜೀವ ಜಲ

Published:
Updated:
ಕಲ್ಯಾಣಿಗಳಲ್ಲಿ ಚಿಮ್ಮಿತು ಜೀವ ಜಲ

ಹಾಸನ: ಜಿಲ್ಲೆಯಲ್ಲಿ 700–800 ವರ್ಷ ಇತಿಹಾಸ ಹೊಂದಿರುವ ನೂರಾರು ಕಲ್ಯಾಣಿಗಳಿದ್ದು, ಮುಂದಿನ ಪೀಳಿಗೆಗೆ ಈ ಜಲ ಮೂಲಗಳನ್ನು ಉಳಿಸಲು ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌ನ ಏಕಲವ್ಯ ರೋವರ್ಸ್‌ ಮುಕ್ತದಳ ಕಂಕಣ ಬದ್ಧವಾಗಿದೆ.‌

ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ಜನರು, ಹಾಗೂ ರೈತರು ನಲುಗಿ ಹೋಗಿದ್ದಾರೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 500ರಿಂದ 600 ಅಡಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪ್ರಮುಖ ಕಾರಣ ಪೂರ್ವಜರು ಬಳುವಳಿಯಾಗಿ ನಮಗೆ ನೀಡಿದ ಕೆರೆಕಟ್ಟೆಗಳು, ಕಲ್ಯಾಣಿಗಳನ್ನು ಮುಚ್ಚುತ್ತ, ಅ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು. ಬಹುತೇಕ ಕೆರೆ ಕಟ್ಟೆಗಳನ್ನು ಹೂಳೆತ್ತದೆ ಮುಚ್ಚಿ ಹೋಗಿವೆ, ಕಲ್ಯಾಣಿಗಳು ಪಾಳುಬಿದ್ದಿದ್ದು ಜಲದ ಮೂಲವೇ ನಾಶವಾಗುವ ಹಂತಕ್ಕೆ ಬಂದಿರುವ ಕಾಲದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಏಕಲವ್ಯ ರೋವರ್ಸ್‌ ಮುಕ್ತದಳ ಕೈಗೊಂಡಿರುವ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು.

2016ರ ನ. 5ರಿಂದ ಕಲ್ಯಾಣಿಗಳ ಮಣ್ಣು ತೆಗೆಯುವ ಕಾರ್ಯ ಆರಂಭ ಮಾಡಿರುವ ಇವರು. ಈ ವರೆಗೂ 35ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ, ಹೂಳೆತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 150ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ. ಇವರು ಹೂಳೆತ್ತಿದೆ ಬಹುತೇಕ ಕೆರೆಗಳಲ್ಲಿ ಇಂದು ನೀರು ಬಂದಿದೆ. ಇವರು ತೆರಳುವ ಗ್ರಾಮಗಳಲ್ಲಿ ಕೆಲವು ಗ್ರಾಮಸ್ಥರು ಸರಿಯಾಗಿ ಸ್ಪಂದಿಸದ ಕಾರಣ, ಕೆಲಸಕ್ಕೆ ಬೇಕಾಗುವ ಗುದ್ದಲಿ, ಬುಟ್ಟಿ, ಹಾರೆ, ಪಿಕಾಸಿಗಳನ್ನು ಅವರೇ ಕೊಂಡು ಇಟ್ಟುಕೊಂಡಿದ್ದಾರೆ.

‘ನಾವು ಮಾಡುವ ಕಾರ್ಯದಿಂದ ಪ್ರಾಣಿ ಪಕ್ಷಿಗಳಿಗಾದರೂ ನೀರು ಸಿಗಬೇಕು. ಜೀವ ಜಲ ಉಳಿಸಿ, ಜೀವ ಸಂಕುಲ ಸಂರಕ್ಷಿಸಿ’ ಎಂಬ ಘೋಷಣೆ ಇಟ್ಟುಕೊಂಡು ಮೊದಲು ಕೆಲಸ ಆರಂಭಿಸಲಾಯಿತು. ನಂತರ ಜನಪ್ರಿಯತೆ ಪಡೆದು, ಅನೇಕ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಕಲ್ಯಾಣಿ ಹೂಳೆತ್ತುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಇಲ್ಲದ ಕಾರಣ ಸಾರಿಗೆ ಮತ್ತು ಊಟದ ವೆಚ್ಚವನ್ನು ನಾವೇ ಬರಿಸಬೇಕಾಗಿತ್ತು. ಬಹುತೇಕ ಗ್ರಾಮಗಳಲ್ಲಿ ಸಹಕಾರ ಸಿಕ್ಕಿಲ್ಲ’ ಎನ್ನುತ್ತಾರೆ ಭಾರತ್‌ ಸ್ಕೌಟ್ಸ್‌ ಗೈಡ್ಸ್‌ ಏಕಲವ್ಯ ರೋವರ್ಸ್ ಮುಕ್ತದಳ ನಾಯಕ ಆರ್‌.ಜಿ. ಗಿರೀಶ್‌.

‘ಕೆಲವು ದೊಡ್ಡ ಕೆರೆಗಳಲ್ಲಿ ಶ್ರಮದಾಯಕ ಕೆಲಸ ಮಾಡಬೇಕಾಗಿ ಬರುತ್ತದೆ. ಅಂತಹ ಕಡೆ ಒಂದು ವಾರದ ರಾಜ್ಯಮಟ್ಟದ ಕ್ಯಾಂಪ್‌ ಮಾಡಲಾಗುವುದು. ಅಂದಾಜು 100 ರಿಂದ 150 ವಿದ್ಯಾರ್ಥಿಗಳು ಸೇರಿ ಕಲ್ಯಾಣಿ ಹೋಳೆತ್ತುತ್ತೇವೆ. ಹಾಸನದ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ, ಪುಸ್ಕರಣಿ, ತಣ್ಣೀರುಹಳ್ಳದ ಸಿದ್ದೇಶ್ವರ, ಹಾಸನಾಂಬ ಮತ್ತು ಮಂಜುನಾಥ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕೆಲಸ ಮಾಡಲಾಗಿದೆ’ ಎಂದು ವಿವರಿಸಿದರು.

‘ಕಲ್ಯಾಣಿ ಹೂಳೆತ್ತುವ ಕಾರ್ಯದ ಜತೆಗೆ ಪಾಳುಬಿದ್ದ ದೇವಸ್ಥಾನಗಳ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಿಕೊಳ್ಳುವುದರಿಂದಾಗಿ ಕಲ್ಯಾಣಿ ಹೂಳೆತ್ತುವ ಕಾರ್ಯ ವಿಳಂಬವಾಗುತ್ತಿದೆ’ ಎಂದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಏಕಲವ್ಯ ರೋವರ್ಸ್ ಮುಕ್ತದಳ, 50 ಜನ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಾರೆ. ಜತೆಗೆ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸೇವೆ ಮಾಡಿದ್ದಾರೆ. ರಾಜ್ಯಮಟ್ಟದ ಕ್ಯಾಂಪ್‌ ಮಾಡಿ, ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ತಂಡದಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಾ ಮಾಲಾ, ಯುವ

ಸ್ವಂದನ ಯೋಜನೆ ಯುವ

ಪರಿವರ್ತಕರು ಚನ್ನಬಸವೇಶ್ವರ, ರೋವರ್ಸ್‌ ಸಚಿನ್‌, ಸಂದೀಪ, ಕಾರ್ತಿಕ್‌, ಚಿರಂತ್‌ಗೌಡ, ಭಾನುಪ್ರಕಾಶ್‌, ಕುಮಾರಸ್ವಾಮಿ, ಸ್ವಾಮಿ, ಜಶ್ವಂತ್‌ಕುಮಾರ್‌, ದರ್ಶನ್‌, ರವಿಕುಮಾರ್‌, ತರುಣ್‌, ಸಂದೇಶ್‌, ಬಿ.ಪಿ. ಗಿರೀಶ್‌, ಸುದೀಪ್‌, ಹಾಗೂ ಉದ್ದೂರುಹಳ್ಳಿ ಗ್ರಾಮದ ಯು.ಸಿ. ಮಹೇಂದ್ರ ಇದ್ದಾರೆ.

**

ಸರ್ಕಾರದ ನೆರವಿಗೆ ಕಾಯದಿರಿ

‘ಪ್ರತಿ ಊರಿನಲ್ಲೂ ಯುವಕರ ಸಂಘ, ಯುವ ಮಂಡಳಿ, ಮಹಿಳಾ ಸಮಾಜ ರಚನೆ ಆಗಿರುತ್ತವೆ. ಈ ಸಂಘಗಳ ಜತೆಗೆ ಗ್ರಾಮಸ್ಥರು ಸಹಕಾರ ನೀಡಿ ತಮ್ಮ ಗ್ರಾಮದ ಸಮಸ್ಯೆ ಪಟ್ಟಿಮಾಡಿ, ಸರ್ಕಾರದ ನೆರವಿಗೆ ಕಾಯದೆ ಸ್ಥಳಿಯ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರೇ, ಹಳ್ಳಿಗಳನ್ನು ಮಾದರಿಯಾಗಿ ಮಾಡಬಹುದು’ ಎನ್ನುತ್ತಾರೆ ಏಕಲವ್ಯ ರೋವರ್ಸ್ ಮುಕ್ತದಳದ ನಾಯಕ ಆರ್‌.ಜಿ. ಗಿರೀಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry