‘ಯೋಗಿ ದುನಿಯಾ’ ಕಥೆ ವ್ಯಥೆ

7

‘ಯೋಗಿ ದುನಿಯಾ’ ಕಥೆ ವ್ಯಥೆ

Published:
Updated:

ತಮ್ಮ ಸಿನಿಮಾ ‘ಯೋಗಿ ದುನಿಯಾ’ ಇದೇ ವಾರ (ಮಾರ್ಚ್ 23) ಬಿಡುಗಡೆಯಾಗುತ್ತಿದ್ದರೂ, ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ಭರವಸೆ ಇದ್ದರೂ ಚಿತ್ರತಂಡದ ಯಾರ ಮುಖದಲ್ಲಿಯೂ ಸಹಜ ನಗೆಯ ಚಹರೆ ಇರಲಿಲ್ಲ. ಆತಂಕದ ಗೆರೆಗಳು ಮೂಡಿದ್ದವು. ಇದಕ್ಕೆ ಕಾರಣವೂ ಇತ್ತು.

ಯೋಗಿ ದುನಿಯಾ ಮಾರ್ಚ್ 9ರಂದು ಬಿಡುಗಡೆಯಾಗಬೇಕಿತ್ತು. ಯು.ಎಫ್‍.ಓ, ಕ್ಯೂಬ್ ವಿರುದ್ಧ ಹೋರಾಡುವ ಸಲುವಾಗಿ ಬಿಡುಗಡೆಯಾಗಬೇಕಾದ ಚಿತ್ರಗಳನ್ನು ವಾಣಿಜ್ಯ ಮಂಡಳಿಯ ಸಲಹೆ ಮೇರೆಗೆ ಮುಂದೂಡಲಾಗಿತ್ತು.

ಅದೇ ಸಂದರ್ಭದಲ್ಲಿ ಮುಂದಕ್ಕೆ ಹೋಗಿದ್ದ ಚಿತ್ರ ಈ ವಾರ ತೆರೆಗೆ ಬರಲಿದೆ. ಆದರೆ, ಈ ವಾರ ಒಟ್ಟು ಹನ್ನೊಂದು ಚಿತ್ರಗಳು ಬಿಡುಗಡೆಯಾಗುತ್ತಿವೆ. ಇದರಿಂದ ಯೋಗಿ ದುನಿಯಾ ಚಿತ್ರಕ್ಕೆ ಸರಿಯಾದ ಚಿತ್ರಮಂದಿರಗಳು ಸಿಗದೆ ತೊಂದರೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಸಿದ್ಧರಾಜು ಬೇಸರ ವ್ಯಕ್ತಪಡಿಸಿದರು.

ನಾಯಕ ನಟ ಯೋಗಿ ಕೂಡ ಇದೇ ಬೇಸರ ವ್ಯಕ್ತಪಡಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ವಾಣಿಜ್ಯ ಮಂಡಳಿಯ ಮೊರೆಹೋಗುವ ಯೋಚನೆಯೂ ಅವರಿಗಿದೆ.

ಹರಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಹಗಲಿನಲ್ಲಿ ಕಾಣುವ ಬೆಂಗಳೂರಿಗೂ ರಾತ್ರಿಯಲ್ಲಿ ತೆರೆದುಕೊಳ್ಳುವ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗೆ ರಾತ್ರಿಯಲ್ಲಿ ಬೆಂಗಳೂರಿನ ದುನಿಯಾ ಹೇಗೆ ತೆರೆದುಕೊಳ್ಳುತ್ತದೆ ಎಂದು ತೋರಿಸುವ ಯತ್ನ ಮಾಡಿದ್ದೇವೆ’ ಎಂದರು ಹರಿ.

ಈ ಚಿತ್ರದಲ್ಲಿ ಹಿತಾ ಚಂದ್ರಶೇಖರ್ ನಾಯಕಿಯಾಗಿ ನಟಿಸಿದ್ದಾರೆ. ‘ಇದರಲ್ಲಿ ನನ್ನದು ಮಧ್ಯಮ ವರ್ಗದ ಗಾರ್ಮೆಂಟ್ ಕೆಲಸದಲ್ಲಿ ತೊಡಗಿಕೊಂಡಿರುವ ಹುಡುಗಿಯ ಪಾತ್ರ. ನಗುವನ್ನೇ ನೋಡದ ನತದೃಷ್ಟೆಯ ಪಾತ್ರ’ ಎಂದು ಹೇಳಿಕೊಂಡರು ಹಿತಾ.

ಯೋಗಿ ಟ್ರಾವೆಲ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದ ನಾಯಕ ಕಷ್ಟಕ್ಕೂ ಸುಖಕ್ಕೂ ಕುಡಿಯುವವನು. ಒಬ್ಬ ಸಾಮಾನ್ಯ ಮನುಷ್ಯ ಕೆಟ್ಟ ಚಟಕ್ಕೆ ಬಿದ್ದಾಗ ಏನೆಲ್ಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅದರಿಂದ ಅವನ ಕುಟುಂಬ ಹೇಗೆಲ್ಲ ಸಂಕಷ್ಟಕ್ಕೆ ಈಡಾಗಬೇಕಾಗುತ್ತದೆ ಎಂಬುದು ಚಿತ್ರದ ಕಥೆಯ ತಿರುಳು’ ಎಂದರು ಯೋಗಿ. ಈ ನಡುವೆ ಒಂದು ನವಿರಾದ ಪ್ರೇಮದ ಎಳೆಯೂ ಇದೆ.

ಈ ಸಂದರ್ಭದಲ್ಲಿ  ಪರಿಸ್ಥಿತಿ ಹತೋಟಿಗೆ ಬಂದ ಸಂದರ್ಭದಲ್ಲಿ ಮುಂದೂಡಲ್ಪಟ್ಟ ಚಿತ್ರಗಳಿಗೆ ಆದ್ಯತೆ ನೀಡಲಾಗುವುದು ಎಂಬುದಾಗಿ ಸಾ.ರಾ. ಗೋವಿಂದು ಭರವಸೆ ನೀಡಿದ್ದರು. ಅದರಂತೆ ‘ಯೋಗಿ ದುನಿಯಾ’ ಇದೇ ವಾರ ತೆರೆಗೆ ಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry